ಹೋಬರ್ಟ್ : ಎರಡು ಬಾರಿಯ ಚಾಂಪಿಯನ್ ಹಾಗೂ ಟಿ೨೦ ವಿಶ್ವ ಕಪ್ ಟೂರ್ನಿಯ (T20 World Cup) ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ವೆಸ್ಟ್ ಇಂಡೀಸ್ ಹಾಲಿ ಆವೃತ್ತಿಯ ಸೂಪರ್-೧೨ ಹಂತಕ್ಕೇರುವಲ್ಲಿ ವಿಫಲಗೊಂಡಿದ್ದು, ಮೊದಲ ಹಂತದಲ್ಲೇ ನಿರ್ಗಮಿಸಿದೆ. ಶುಕ್ರವಾರ ನಡೆದ ಮೊದಲ ಸುತ್ತಿನ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೋಲುವ ಮೂಲಕ ಭಾರೀ ನಿರಾಸೆ ಎದುರಿಸಿತು. ಇದೇ ವೇಳೆ ಐರ್ಲೆಂಡ್ ತಂಡ ಗುಂಪು ಹಂತದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಸೂಪರ್-೧೨ ಹಂತಕ್ಕೆ ಪ್ರವೇಶ ಪಡೆಯಿತು.
ವೆಸ್ಟ್ ಇಂಡೀಸ್ ಬಳಗ ೨೦೧೨ ಹಾಗೂ ೨೦೧೬ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ ೨೦೧೪ ಹಾಗೂ ೨೦೦೯ರಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿತ್ತು. ಹೊಡೆ ಬಡಿಯ ದಾಂಡಿಗರನ್ನೇ ಹೊಂದಿರುವ ಈ ತಂಡಕ್ಕೆ ಟಿ೨೦ ಮಾದರಿ ಸೂಕ್ತವಾಗಿದ್ದ ಕಾರಣ ಯಶಸ್ವಿ ತಂಡ ಎನಿಸಿಕೊಂಡಿತ್ತು. ಆದರೆ, ೨೦೨೨ನೇ ಆವೃತ್ತಿಯ ಮೊದಲ ಸುತ್ತಿನ ಪ್ರಥಮ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ೪೨ ರನ್‌ಗಳ ಹೀನಾಯ ಸೋಲಿಗೆ ಒಳಗಾಗಿದ್ದ ವಿಂಡೀಸ್ ಬಳಗ ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಹಣಾಹಣಿಯಲ್ಲಿ ೯ ವಿಕೆಟ್‌ಗಳಿಂದ ಸೋಲಿಗೆ ಒಳಗಾಗಿದೆ.
ಹೋಬರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್ ಕಳೆದುಕೊಂಡ ೧೪೬ ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ ೧೭.೩ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ೧೫೦ ರನ್ ಬಾರಿಸಿ ಜಯಶಾಲಿಯಾಯಿತು. ಐರ್ಲೆಂಡ್ ಬ್ಯಾಟಿಂಗ್‌ನಲ್ಲಿ ಆರಂಭಿಕ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ (೬೬) ಅರ್ಧ ಶತಕ ಬಾರಿಸಿದರೆ, ಲಾರ್ಕನ್ ಟಕ್ಕರ್ ೪೫ ರನ್‌ಗಳ ಕೊಡುಗೆ ಕೊಟ್ಟರು. ಐರ್ಲೆಂಡ್ ಬ್ಯಾಟರ್‌ಗಳಿಗೆ ಸೆಡ್ಡು ಹೊಡೆಯಲು ವಿಂಡೀಸ್ ಬೌಲರ್‌ಗಳು ವಿಫಲರಾದರು.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಪರ ಬ್ರೆಂಡನ್ ಕಿಂಗ್ ೬೨ ರನ್ ಬಾರಿಸಿದರೆ, ಉಳಿದ ಬ್ಯಾಟರ್‌ಗಳಿಂದ ಹೆಚ್ಚಿನ ನೆರವು ಲಭಿಸಲಿಲ್ಲ.
ಸ್ಕೋರ್ ವಿವರ
ವೆಸ್ಟ್ ಇಂಡೀಸ್ : ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೪೬ (ಬ್ರೆಂಡನ್ ಕಿಂಗ್ ೬೨, ಜಾನ್ಸನ್ ಚಾರ್ಲ್ಸ್ ೨೪, ಗ್ರೇಥ್ ಡೆಲ್ನಿ ೧೬ಕ್ಕೆ೩).
ಐರ್ಲೆಂಡ್: ೧೭.೩ ಓವರ್‌ಗಳಲ್ಲಿ ೧ ವಿಕೆಟ್‌ಗೆ ೧೫೦ (ಪಾಲ್ ಸ್ಟಿರ್ಲಿಂಗ್ ೬೬*, ಲಾರ್ಕನ್ ಟಕ್ಕರ್ ೪೫* ಅಕೇಲ್ ಹೊಸೈನ್ ೩೮ಕ್ಕೆ೧).
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ ವೇಳಾಪಟ್ಟಿ ಇಂತಿದೆ, ಯಾರಿಗೆ ಯಾರ ವಿರುದ್ಧ ಯಾವಾಗ ಪಂದ್ಯ?