ಬೆಂಗಳೂರು: ಚೊಚ್ಚಲ ವಿಶ್ವಕಪ್ ಪಂದ್ಯಾವಳಿಯ ಯಶಸ್ಸು, ಇದಕ್ಕೆ ಸಿಕ್ಕಿದ ಜನಪ್ರಿಯತೆ ಏಕದಿನ ಕ್ರಿಕೆಟ್ ಮೂಡಿಸಿದ ಸಂಚಲನ… ಇದೆಲ್ಲವೂ ಐಸಿಸಿಯಲ್ಲಿ ಹೊಸ ಹುಮ್ಮಸ್ಸು(World Cup History) ಮೂಡಿಸಿತ್ತು. 1975ರ ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಮುಂದಿನ ಕೂಟದ ರೂಪರೇಷೆಗಳೆಲ್ಲ ಸಿದ್ಧಗೊಂಡವು. ಕ್ರಿಕೆಟ್ ಜನಕರ ನಾಡು ಇಂಗ್ಲೆಂಡಿಗೆ ಮತ್ತೊಮ್ಮೆ 1979ರ ವಿಶ್ವಕಪ್(1979 Cricket World Cup) ಆತಿಥ್ಯ ಲಭಿಸಿತ್ತು. ಪ್ರುಡೆನ್ಶಿಯಲ್ ಕಂಪೆನಿ ಮತ್ತೊಮ್ಮೆ ಟೂರ್ನಿಯ ಪ್ರಾಯೋಜಕತ್ವ ವಹಿಸಿಕೊಂಡಿತು. ಹೀಗಾಗಿ ಇದು ಕೂಡ ಪ್ರುಡೆನ್ಶಿಯಲ್ ವಿಶ್ವಕಪ್’ ಎನಿಸಿಕೊಂಡಿತು.
8 ತಂಡಗಳ ಕಾದಾಟ
ದ್ವಿತೀಯ ಆವೃತ್ತಿಯಲ್ಲಿ ಟೆಸ್ಟ್ ಮಾನ್ಯತೆ ಪಡೆದ 6 ತಂಡಗಳೊಂದಿಗೆ ಕಾದಾಡಲು ಐಸಿಸಿಯ 2 ಸದಸ್ಯ ರಾಷ್ಟ್ರಗಳಿಗೆ ಈ ಸಲವೂ ಅವಕಾಶ ಕಲ್ಪಿಸಲಾಯಿತು. ಇದಕ್ಕಾಗಿಯೇ ಪ್ರತ್ಯೇಕ ಅರ್ಹತಾ ಪಂದ್ಯಾವಳಿಯೊಂದನ್ನು ಆಡಿಸಲಾಗಿತ್ತು. ಇದರಲ್ಲಿ 15 ತಂಡಗಳು ಪಾಲ್ಗೊಂಡವು. ಅರ್ಹತಾ ಪಂದ್ಯದಲ್ಲಿ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಕೆನಡಾ ರನ್ನರ್ ಅಪ್ ಆಗಿ ಪ್ರಧಾನ ಸುತ್ತಿನಲ್ಲಿ ಆಡಲಿಳಿದವು. ಮೊದಲ ವಿಶ್ವಕಪ್‌ನಲ್ಲಿ ಆಡಿದ ಪೂರ್ವ ಆಫ್ರಿಕಾ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಹೀಗಾಗಿ ಇದು ಯಾವುದೇ ಆಫ್ರಿಕನ್ ದೇಶವನ್ನು ಹೊಂದಿಲ್ಲದ ವಿಶ್ವಕಪ್ ಟೂರ್ನಿ ಎನಿಸಿಕೊಂಡಿತು.
15 ದಿನಗಳ ಪಂದ್ಯಾವಳಿ
ಇದು ಕೇವಲ 15 ದಿನಗಳ ಪಂದ್ಯಾವಳಿಯಾಗಿತ್ತು. ಎ’ ವಿಭಾಗದಿಂದ ಅಜೇಯ ಇಂಗ್ಲೆಂಡ್ ಮತ್ತು ಒಂದು ಪಂದ್ಯದಲ್ಲಿ ಸೋತ ಪಾಕಿಸ್ತಾನ ಸೆಮಿಫೈನಲಿಗೆ ಏರಿದವು. ‘ಬಿ’ ವಿಭಾಗದಲ್ಲಿ ಹಾಲಿ ಚಾಂಪಿಯನ್ ವಿಂಡೀಸ್ ಅಜೇಯವಾಗಿ ಮತ್ತು ಒಂದು ಪಂದ್ಯದಲ್ಲಿ ಸೋಲು ಕಂಡ ಕಿವೀಸ್ ಸೆಮಿ ಪ್ರವೇಶ ಪಡೆಯಿತು.
ಮೂರೂ ಪಂದ್ಯ ಸೋತ ಭಾರತ
ಎಸ್. ವೆಂಕಟರಾಘವನ್ ಸಾರಥ್ಯದ ಭಾರತ ತಂಡ ಮೊದಲ ಆವೃತ್ತಿಯಂತೆ ಈ ಆವೃತ್ತಿಯಲ್ಲಿಯೂ ಅತ್ಯಂತ ಕಳಪೆ ಪ್ರದರ್ಶ ತೋರಿತ್ತು. ಆಡಿದ ಮೂರೂ ಲೀಗ್ ಪಂದ್ಯಗಳನ್ನು ಸೋತು ಕೊನೆಯ ಸ್ಥಾನಕ್ಕೆ ಕುಸಿಯಿತು. ಅರ್ಹತಾ ಸುತ್ತು ದಾಟಿ ಬಂದ ತಂಡದ ಎದುರು ಕೂಡ ಸೋಲಿನ ಆಘಾತ ಎದುರಿಸಿತು.
ವಿವಿಯನ್ ರಿಚರ್ಡ್ಸ್ ಶತಕ ಸಂಭ್ರಮ
ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಸೋಲು ಕಂಡಿತು. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಪ್ರಶಸ್ತಿ ಕಾಳಗಕ್ಕೆ ಅಣಿಯಾದವು. ಲಾರ್ಡ್ಸ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವಿಂಡೀಸ್ ವಿವಿಯನ್ ರಿಚರ್ಡ್ಸ್(138) ಅವರ ಸೊಗಸಾದ ಶತಕದ ನರೆವಿನಿಂದ 9 ವಿಕೆಟಿಗೆ 286 ರನ್ ಪೇರಿಸಿತು.
ರಿಚರ್ಡ್ಸ್ ಹೊರತುಪಡಿಸಿ ವಿಂಡೀಸ್ ಪರ ಕಾಲಿಸ್ ಕಿಂಗ್ 86 ರನ್ ಬಾರಿಸಿದರು. ದೊಡ್ಡ ಮೊತ್ತವನ್ನು ಇಂಗ್ಲೆಂಡ್ ಭರ್ಜರಿಯಾಗಿಯೇ ಚೇಸಿಂಗ್ ನಡೆಸಿತು. ನಾಯಕ ಮೈಕ್ ಬ್ರೇಯರ್ಲಿ ಮತ್ತು ಜೆಫ್‌ಬಾಯ್ಕಾಟ್ ಸೇರಿಕೊಂಡು ಮೊದಲ ವಿಕೆಟಿಗೆ 129 ರನ್ ಪೇರಿಸಿದರು. ಆಗ ಇಂಗ್ಲೆಂಡ್ ಚಾಂಪಿಯನ್ ಆಗಿಯೇ ಬಿಟ್ಟಿತು ಎಂಬ ವಾತಾವರಣ ಸೃಷ್ಟಿಯಾಯಿತು. ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಅಭಿಮಾನಿಗಳ ಸಂತಸ ತಾರಕಕ್ಕೇರಿತ್ತು.
ವಿಶ್ವರೂಪ ದರ್ಶನ ತೋರಿದ ವಿಂಡೀಸ್ ವೇಗಿಗಳು
ಗೆಲುವಿನತ್ತ ಮುಖ ಮಾಡಿದ್ದ ಇಂಗ್ಲೆಂಡ್ಗೆ ವಿಂಡೀಸ್ ವೇಗಿಗಳಾದ ಗಾರ್ನರ್, ಕ್ರಾಫ್ಟ್ ಮತ್ತು ಹೋಲ್ಡಿಂಗ್ ಸೇರಿಕೊಂಡು ವಿಶ್ವರೂಪ ದರ್ಶನ ತೋರಿಸಿದರು. 65 ರನ್ ಅಂತರದಲ್ಲಿ ಇಂಗ್ಲೆಂಡಿನ ಎಲ್ಲ ವಿಕೆಟ್ ತರಗೆಳೆಯಂತೆ ಉದುರಿದವು. ವಿಂಡೀಸ್ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿ ಮರೆದಾಡಿತು. ಸತತ 2ನೇ ಸಲ ವಿಶ್ವಕಪ್ ಎತ್ತಿದ ವಿಂಡೀಸಿಗೆ 10 ಸಾವಿರ ಪೌಂಡ್ ಬಹುಮಾನ ಲಭಿಸಿತು.