ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆಯ(WFI Election) ದಿನಾಂಕ ಕೊನೆಗೂ ಅಧಿಕೃತವಾಗಿ ಪ್ರಕಟಗೊಂಡಿದೆ. ಜುಲೈ 4ರಂದು ಚುನಾವಣೆ ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ನಿರ್ಧರಿಸಿದೆ. ಚುನಾವಣಾ ಅಧಿಕಾರಿಯನ್ನಾಗಿ ಜಮ್ಮು-ಕಾಶ್ಮೀರ ಹೈಕೋರ್ಚ್ನ ನಿವೃತ್ತ ಮುಖ್ಯ ನ್ಯಾಯಾಧೀಶ ಮಹೇಶ್ ಮಿತ್ತಲ್(Jammu and Kashmir High Court Chief Justice Mahesh Mittal Kumar) ಅವರನ್ನು ನೇಮಕ ಮಾಡಲಾಗಿದೆ.
ಮಂಗಳವಾರ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಚುನಾವಣೆ ಕುರಿತು ಈ ಮಾಹಿತಿ ನೀಡಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದ ಕುಸ್ತಿಪಟುಗಳ ಜತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಜುಲೈ 7ರಂದು ಮಾತುಕತೆ ನಡೆಸಿ ಡಬ್ಲ್ಯುಎಫ್‌ಐ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವುದಾಗಿ ಬರವಸೆ ನೀಡಿದ್ದರು. ಆದರೆ ಡಬ್ಲುಎಫ್‌ಐ ವಿಶೇಷ ಮಹಾಸಭೆಯನ್ನು ಕರೆಯಲು 21 ದಿನಗಳ ಮೊದಲು ನೋಟಿಸ್ ನೀಡಬೇಕಾದ ಕಾರಣ ಈ ಗಡುವು ಪಾಲನೆ ಕಷ್ಟವಾಗಿತ್ತು. ಇದೀಗ ಜುಲೈ 4 ರಂದು ಚುನಾವಣೆ ನಡೆಯಲಿದೆ.
ಲೈಗಿಂಕ ಕಿರುಕುಳ ಆರೋಪ ಹೊತ್ತಿರುವ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ ಅಥವಾ ಬೆಂಬಲಿಗರಿಗೆ ಚುನಾವಣೆಗೆ ಸ್ಪರ್ಧಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸಚಿವರು ಕುಸ್ತಿಪಟುಗಳಿಗೆ ಆಶ್ವಾಸನೆ ನೀಡಿದ್ದಾರೆ. ಇದೇ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.
ಕುಸ್ತಿ ಫಡರೇಷನ್‌ಗೆ ಕೇಂದ್ರಾಡಳಿತ ಪ್ರದೇಶ ಚಂಡೀಗಢ ಮತ್ತು ದೆಹಲಿ ಸೇರಿ 25 ಸಂಯೋಜಿತ ಘಟಕಗಳಿವೆ. ಪ್ರತಿ ಘಟಕಗಳು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು. ಪ್ರತಿಯೊಬ್ಬರೂ ಮತ ಚಲಾಯಿಸಲು ಅವಕಾಶವಿದೆ. ಚುನಾವಣೆಯಲ್ಲಿ 50 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಕುಸ್ತಿ ಫೆಡರೇಷನ್ ನಿಯಮಾವಳಿಯಂತೆ, ರಾಜ್ಯ ಘಟಕಗಳು ಕಾರ್ಯಕಾರಿ ಸಮಿತಿಯಲ್ಲಿರುವವರನ್ನು ಮಾತ್ರ ಪ್ರತಿನಿಧಿಗಳನ್ನಾಗಿ ನಾಮನಿರ್ದೇಶನ ಮಾಡಬೇಕಾಗುತ್ತದೆ.
ಇದನ್ನೂ ಓದಿ Wrestlers Protest: ಏಷ್ಯನ್ ಗೇಮ್ಸ್ ಆಡುತ್ತೇವೆ ಆದರೆ… ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟ ಕುಸ್ತಿಪಟುಗಳು
ಬ್ರಿಜ್ ಭೂಷಣ್ ಅವರ ಪುತ್ರ ಕರಣ್ ಈ ಹಿಂದಿನ ಡಬ್ಲ್ಯುಎಫ್‌ಐ ಆಡಳಿತವರ್ಗದಲ್ಲಿ ಉಪಾಧ್ಯಕ್ಷ ಆಗಿದ್ದರು. ಅವರು ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಅಳಿಯ ವಿಶಾಲ್ ಸಿಂಗ್ ಅವರು ಬಿಹಾರ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಒಂದೊಮ್ಮೆ ಈ ಸ್ಥಾನಕ್ಕೆ ಮತ್ತೆ ಬ್ರಿಜ್ ಭೂಷಣ್ ಸಿಂಗ್ ಅವರ ಬೆಂಬಲಿಗರು ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಏನಾಗಬಹುದು ಎಂಬ ಕುತೂಹಲವೂ ಇದೆ. ಕುಸ್ತಿಪಟುಗಳು ಮಾತ್ರ ಯಾವುದೇ ಕಾರಣಕ್ಕೂ ಬ್ರಿಜ್ ಭೂಷಣ್ ಬೆಂಬಲಿಗರಿಗೆ ಅವಕಾಶ ನೀಡಬಾರದು, ಮಹಿಳಾ ಅಧ್ಯಕ್ಷರನ್ನು ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ.