Site icon Vistara News

Wrestlers Protest : ಕುಸ್ತಿಪಟುಗಳು ಹೋರಾಟದ ನಡುವೆ ಡಬ್ಲ್ಯುಎಫ್​ಐಗೆ ಜುಲೈ 6ರಂದು ಚುನಾವಣೆ

brijbhushan Singh

#image_title

ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್​ಭೂಷಣ್​​​ ಸಿಂಗ್ ಶರಣ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಧರಣಿ ಮುಂದುವರಿದಿದೆ. ತಾವು ನವ ದೆಹಲಿಯ ಜಂತರ್​ಮಂತ್​ನಿಂದ ಹೊರಗೆ ಬಂದಿದ್ದರೂ ಪ್ರತಿಭಟನೆ ನಿಂತಿಲ್ಲ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮಂಗಳವಾರ ಚುನಾವಣೆ ಘೋಷಣೆಯಾಗಿದೆ. ಜುಲೈ 6 ರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಮಂಗಳವಾರ ಅಧಿಸೂಚನೆಯಲ್ಲಿ ಪ್ರಕಟಿಸಿದ್ದಾರೆ. ಅಂದೇ ಸಂಜೆ ಫಲಿತಾಂಶವೂ ಪ್ರಕಟವಾಗಲಿದೆ.

ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಿದ ಮರುದಿನವೇ ಪ್ರಕಟಣೆ ಹೊರಬಿದ್ದಿದೆ. ಎಲೆಕ್ಟೋರಲ್ ಕಾಲೇಜು ರಚಿಸಲು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಎರಡು ನಾಮನಿರ್ದೇಶನಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವನ್ನು ಜೂನ್ 19 ಎಂದು ನಿಗದಿಪಡಿಸಲಾಗಿದೆ. ಜೂನ್ 22 ರೊಳಗೆ ಪರಿಶೀಲನೆ ಪೂರ್ಣಗೊಳ್ಳಲಿದೆ.

ಪ್ರತಿ ರಾಜ್ಯ ಘಟಕವು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು ಮತ್ತು ಪ್ರತಿ ಪ್ರತಿನಿಧಿಯು ಒಂದು ಮತವನ್ನು ಚಲಾಯಿಸಬಹುದು. ಹೀಗಾಗಿ ಡಬ್ಲ್ಯುಎಫ್ಐ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಒಟ್ಟು 50 ಮತಗಳನ್ನು ಒಳಗೊಂಡಿರುತ್ತದೆ. ಆದರೆ, ಡಬ್ಲ್ಯುಎಫ್ಐನಿಂದ ವಿಸರ್ಜಿಸಲ್ಪಟ್ಟ ಕೆಲವು ರಾಜ್ಯ ಸಂಸ್ಥೆಗಳು ಸಹ ಚುನಾವಣೆಯಲ್ಲಿ ಭಾಗವಹಿಸಲು ಹಕ್ಕು ಮಂಡಿಸಿವೆ ಎಂದು ತಿಳಿದುಬಂದಿದೆ.

ಪ್ರತಿನಿಧಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಚುನಾವಣಾ ಅಧಿಕಾರಿಗಳು ಯಾರು ಮತ ಚಲಾಯಿಸಬಹುದು ಮತ್ತು ಯಾರು ಮತ ಚಲಾಯಿಸಬಾರದು ಎಂಬುದನ್ನು ನಿರ್ಧರಿಸುತ್ತಾರೆ. ಜೂನ್ 23ರಿಂದ ಜೂನ್ 25ರವರೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಜೂನ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ಜೂನ್ 28 ರಿಂದ ಜುಲೈ 1ರವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು. ಜುಲೈ 2ರಂದು ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.

ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ, ರಾಜ್ಯ / ಕೇಂದ್ರಾಡಳಿತ ಪ್ರದೇಶದಿಂದ ಎರಡು ನಾಮನಿರ್ದೇಶನಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು 2023ರ ಜೂನ್ 19 ರ ಸಂಜೆ 5.00 ಗಂಟೆಗೆ ನಿಗದಿಪಡಿಸಲಾಗಿದೆ.

ಯಾವೆಲ್ಲ ಸ್ಥಾನಕ್ಕೆ ಚುನಾವಣೆ

ಡಬ್ಲ್ಯುಎಫ್ಐ ಅಧ್ಯಕ್ಷ, ಉಪಾಧ್ಯಕ್ಷ, ನಾಲ್ಕು ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್​​ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಿತ್ತಲ್ ಅವರನ್ನು ಐಒಎ ಸೋಮವಾರ ರಿಟರ್ನಿಂಗ್ ಅಧಿಕಾರಿಯಾಗಿ ನೇಮಿಸಿದ ನಂತರ ಜುಲೈ 4ರಂದು ಚುನಾವಣೆ ನಡೆಯಲಿದೆ ಎಂದು ವ್ಯಾಪಕವಾಗಿ ಊಹಿಸಲಾಗಿತ್ತು. ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ ಮತ್ತು ಕರ್ನಾಟಕದ ಎರಡು ವಿಭಿನ್ನ ರಾಜ್ಯ ಸಂಸ್ಥೆಗಳು ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಸೇರಿಸಲು ಹೆಸರುಗಳನ್ನು ಕಳುಹಿಸಿವೆ ಎಂದು ವರದಿಯಾಗಿರುವುದರಿಂದ, ರಾಜ್ಯ ಸಂಸ್ಥೆಗಳಲ್ಲಿ ಯಾವ ಪ್ರತಿಸ್ಪರ್ಧಿ ಬಣವು ಚುನಾವಣೆಯಲ್ಲಿ ಭಾಗವಹಿಸುತ್ತದೆ ಎಂಬುದನ್ನು ನಿರ್ಧರಿಸುವುದು ನಿವೃತ್ತ ನ್ಯಾಯಾಧೀಶರ ಮುಂದಿರುವ ಸವಾಲಾಗಿದೆ.

ಇದನ್ನೂ ಓದಿ : WFI Election: ನಿವೃತ್ತ ಮುಖ್ಯ ನ್ಯಾಯಮೂರ್ತಿ​ ಕಣ್ಗಾವಲಿನಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ

ಭ್ರಷ್ಟಾಚಾರ ಮತ್ತು ದುರಾಡಳಿತ ಸೇರಿದಂತೆ ನಾನಾ ಕಾರಣಗಳಿಗಾಗಿ 2022ರ ಜೂನ್​ನಲ್ಲಿ ನಡೆದ ಡಬ್ಲ್ಯುಎಫ್ಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕರ್ನಾಟಕ, ಹರಿಯಾಣ ಮತ್ತು ಮಹಾರಾಷ್ಟ್ರದ ಸಮಿತಿಯನ್ನು ವಿಸರ್ಜಿಸಿತ್ತು.

ಬ್ರಿಜ್​ ಭೂಷನ್​ ಸಂಬಂಧಿಕರು ಸ್ಪರ್ಧಿಸುವರೇ?

ನಿರ್ಗಮಿತ ಡಬ್ಲ್ಯುಎಫ್ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಸದಸ್ಯರು ಅಥವಾ ಸಹವರ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆಯೇ ಎಂಬುದು ಚುನಾವಣೆಯ ಮತ್ತೊಂದು ಚರ್ಚೆಯ ವಿಷಯವಾಗಿದೆ. ಬ್ರಿಜ್ ಭೂಷಣ್ ಅವರ ಯಾವುದೇ ಸಂಬಂಧಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಸರ್ಕಾರ ಅನುಮತಿಸುವುದಿಲ್ಲ ಎಂದು ಕ್ರೀಡಾ ಸಚಿವ ಠಾಕೂರ್ ಅವರು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದರು. ಹೀಗಾಗಿ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿರುವ ಅರ್ಹ ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದರೆ ಏನಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.

ಬ್ರಿಜ್​ಭೂಷಣ್​ ಸಿಂಗ್​ ಸಿಂಗ್ ಅವರ ಪುತ್ರ ಕರಣ್ ಹಿಂದಿನ ಡಬ್ಲ್ಯುಎಫ್ಐ ಕಾರ್ಯಕಾರಿಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದರು ಮತ್ತು ಯುಪಿ ಕುಸ್ತಿ ಸಮಿತಿಯ ಜತೆಯೂ ಸಂಬಂಧ ಹೊಂದಿದ್ದಾರೆ. ಅವರ ಅಳಿಯ ವಿಶಾಲ್ ಸಿಂಗ್ ಬಿಹಾರ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ.

Exit mobile version