Site icon Vistara News

WFI Suspended: ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಲು ಕಾರಣವೇನು?

Sanjay Singh

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ ನಡೆದು ಸಂಜಯ್ ಸಿಂಗ್(Sanjay Singh) ಅಧ್ಯಕ್ಷ ಸ್ಥಾನ ಪಡೆದಿದ್ದರು. ಆದರೆ, ಸಂಜಯ್ ಸಿಂಗ್​ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಎನ್ನುವ ಕಾರಣದಿಂದಾಗಿ ಕುಸ್ತಿಪಟುಗಳು ಅಸಮಾಧಾನ ಹೊರಹಾಕಿದ್ದರು. ವಿಶ್ವ ಚಾಂಪಿಯನ್​ ಬಜ್​ರಂಗ್​ ಪೂನಿಯಾ (Bajrang Punia) ತಮಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿಯನ್ನು ನವದೆಹಲಿಯ ಕರ್ತವ್ಯ ಪಥದ ಫುಟ್​ಪಾತ್​ನಲ್ಲಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸದಾಗಿ ಚುನಾಯಿತ ಸಂಸ್ಥೆಯನ್ನು(WFI Suspended) ಅಮಾನತುಗೊಳಿಸಿದೆ.

ಅಸ್ತಿತ್ವದಲ್ಲಿರುವ ನಿಯಮ ಮತ್ತು ನಿಬಂಧನೆಗಳನ್ನು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಇಂದು(ಡಿ. 24 ಭಾನುವಾರ) ತನ್ನ ನಿರ್ಧಾರವನ್ನು ಅಧಿಕೃತ ಪ್ರಕಟಣೆಯಲ್ಲಿ ಅಮಾನತು ಶಿಕ್ಷೆಯನ್ನು ಪ್ರಕಟಿಸಿದೆ.

“ರಾಷ್ಟ್ರೀಯ ಸ್ಪರ್ಧೆಗಳ ಪ್ರಕಟಣೆಯು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಸಿಂಗ್ ಡಿ. 21 ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು. ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ” ಎಂದು ಸಚಿವಾಲಯ ವಿವರಿಸಿದೆ.

ಜೂನ್​ನಲ್ಲಿ ನಿಗದಿಯಾಗಿದ್ದ ಚುನಾವಣೆಗಳು ಹಲವು ಬಾರಿ ಮುಂದೂಡಿಕೆಯಾಗಿದ್ದವು. ಪೂನಿಯಾ ಮತ್ತು ಮಲಿಕ್ ಈ ತಿಂಗಳ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾಗಿ ಡಬ್ಲ್ಯುಎಫ್ಐ ಚುನಾವಣೆ ಬಗ್ಗೆ ಚರ್ಚಿಸಿದ್ದರು. ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ ನಂತರ ದೇಶದ ಉನ್ನತ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ 5 ತಿಂಗಳ ಸುದೀರ್ಘ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ ವಿಸ್ತಾರ ಸಂಪಾದಕೀಯ: ಕುಸ್ತಿಪಟುಗಳ ಆಂತರಿಕ ಕುಸ್ತಿ ನಿಲ್ಲಲಿ, ಕ್ರೀಡೆಯ ಮಾನ ಉಳಿಯಲಿ

2012ರಿಂದ 2022ರವರೆಗೆ 10 ವರ್ಷಗಳ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿದ್ದರು. ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು. ಆದರೆ ದಿಲ್ಲಿ ಪೊಲೀಸರು ಬ್ರಿಷ್​ಭೂಷಣ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಸುಪ್ರೀಂ​ ಕೋರ್ಟ್​ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಮ್​ ಕೋರ್ಟ್​​ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ನಂತರ ದೆಹಲಿ ಪೊಲೀಸರು ಪ್ರಕಣ ದಾಖಲಿಸಿಕೊಂಡು ತನಿಖೆ ಆರಂಭಿಸಿ, ಬ್ರಿಜ್‌ಭೂಷಣ್‌ ವಿರುದ್ಧ ಕೋರ್ಟಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಬ್ರಿಜ್‌ಭೂಷಣ್‌ ಮೇಲಿರುವ ಆರೋಪಗಳು ಗಂಭೀರ ಸ್ವರೂಪದ್ದು, ತೀವ್ರ ವಿಚಾರಣೆಗೆ ಅರ್ಹವಾದುದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇಷ್ಟೆಲ್ಲ ಆದ ಮೇಲೂ, ಕಳಂಕಿತ ವ್ಯಕ್ತಿಯ ಸಹಾಯಕನೇ ಮತ್ತೆ ಕುಸ್ತಿ ಒಕ್ಕೂಟದ ಅಧ್ಯಕ್ಷನಾಗಿ ಕುಳಿತುಕೊಳ್ಳುವಂತಾದುದು, ಆರೋಪಿಯೇ ಮತ್ತೆ ಸೂತ್ರವನ್ನು ತನ್ನ ಕೈಯಲ್ಲಿ ಹಿಡಿಯುವಂತಾಗಿರುವುದು ವಿಪರ್ಯಾಸ.

Exit mobile version