ದೋಹಾ : ಡಿಸೆಂಬರ್ 18ರಂದು ರಾತ್ರಿ ನಡೆದ ಜಿದ್ದಾಜಿದ್ದಿನ ಫೈನಲ್ ಹಣಾಹಣಿಯಲ್ಲಿ (FIFA World Cup) ಫ್ರಾನ್ಸ್ ತಂಡವನ್ನು ಮಣಿಸಿದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಫಿಫಾ ವಿಶ್ವ ಕಪ್ ಗೆದ್ದುಕೊಂಡಿದೆ. 36 ವರ್ಷಗಳ ಬಳಿಕ ಆ ದೇಶ ಜಾಗತಿಕ ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ಪ್ರಶಸ್ತಿ ಗೆದ್ದಿದ್ದು, ಅರ್ಜೆಂಟೀನಾದ ಅಭಿಮಾನಿಗಳು ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಹಾಗಾದರೆ ಆ ದೇಶಕ್ಕೆ ಇದು ಎಷ್ಟನೇ ಪ್ರಶಸ್ತಿ ಹಾಗೂ ಎಷ್ಟು ಬಾರಿ ರನ್ನರ್ ಅಪ್ ಸ್ಥಾನ ಲಭಿಸಿದೆ ಎಂಬುದನ್ನು ನೋಡೋಣ.
ಅರ್ಜೆಂಟೀನಾ ತಂಡಕ್ಕೆ ಇದು ಮೂರನೇ ವಿಶ್ವ ಕಪ್ ಪ್ರಶಸ್ತಿ. ಈ ಹಿಂದೆ, 1978 ಹಾಗೂ 1986ರಲ್ಲಿ ಪ್ರಶಸ್ತಿ ಗೆದ್ದಿತ್ತು. 1986ರಲ್ಲಿ ಡಿಗೊ ಮರಡೋನಾ ನೇತೃತ್ವದ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅರ್ಜೆಂಟೀನಾ ತಂಡ ಮೂರು ಬಾರಿ ಫೈನಲ್ನಲ್ಲಿ ಸೋತು ರನ್ನರ್ಸ್ಅಪ್ ಪ್ರಶಸ್ತಿ ಗೆದ್ದಿದೆ. 1930ರ ಮೊದಲ ವಿಶ್ವ ಕಪ್ನಲ್ಲಿ ಉರುಗ್ವೆ ತಂಡ ಚಾಂಪಿಯನ್ ಆಗಿದ್ದರೆ ಅರ್ಜೆಂಟೀನಾ ರನ್ನರ್ಸ್ ಅಪ್ ಆಗಿತ್ತು. ಬಳಿಕ 1990ರಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಫೈನಲ್ನಲ್ಲಿ ಸೋಲು ಕಂಡಿತ್ತು. 2014 ಆವೃತ್ತಿಯಲ್ಲೂ ಜರ್ಮನಿ ವಿರುದ್ಧ ಪರಾಜಯಗೊಂಡಿತ್ತು.
22 ಆವೃತ್ತಿಗಳಲ್ಲಿ ಬ್ರೆಜಿಲ್ ತಂಡ ಒಟ್ಟು ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಇಟಲಿ ನಾಲ್ಕು ಬಾರಿ ಪ್ರಶಸ್ತಿ ಗೆದ್ದಿದೆ. ಪಶ್ಚಿಮ ಜರ್ಮನಿ ಮೂರು ಬಾರಿ ಹಾಗೂ ಜರ್ಮನಿ ಒಂದು ಬಾರಿ ಚಾಂಪಿಯನ್ ಅಗಿದೆ. ಉರುಗ್ವೆ ತಂಡ ಎರಡು ಪ್ರಶಸ್ತಿ ಗೆದ್ದಿದ್ದು, ಫ್ರಾನ್ಸ್ ಕೂಡ ಅಷ್ಟೇ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದೆ. ಸ್ಪೇನ್ ಮತ್ತು ಇಂಗ್ಲೆಂಡ್ ತಂಡ ತಲಾ ಒಂದು ಬಾರಿ ವಿಶ್ವ ಕಪ್ ಗೆದ್ದಿದೆ.
ಇದನ್ನೂ ಓದಿ | FIFA World Cup | ವಿಶ್ವ ಕಪ್ ಫೈನಲ್ನಲ್ಲಿ ಸೋಲು, ಫ್ರಾನ್ಸ್ನಲ್ಲಿ ಫುಟ್ಬಾಲ್ ಅಭಿಮಾನಿಗಳಿಂದ ದೊಂಬಿ