Site icon Vistara News

Virat kohli: ಕೊಹ್ಲಿಗೆ 100 ಶತಕಗಳ ಸಚಿನ್ ದಾಖಲೆ ಮುರಿಯಲು ಸಾಧ್ಯವೆ? ಲೆಕ್ಕಾಚಾರ ಹೀಗಿದೆ!

Virat kohli

ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 24 ವರ್ಷ 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್ ಕೊಹ್ಲಿ (Virat kohli) 15 ವರ್ಷಗಳಲ್ಲಿ 80 ಶತಕಗಳನ್ನು ಗಳಿಸಿದ್ದಾರೆ ಮತ್ತು 517 ಪಂದ್ಯಗಳನ್ನು ಆಡಿದ್ದಾರೆ. ಇದೀಗ ಸಚಿನ್ ತೆಂಡೂಲ್ಕರ್​ ಅವರ ಒಂದೊಂದೇ ದಾಖಲೆಗಳನ್ನು ವಿರಾಟ್​ ಕೊಹ್ಲಿ ಮೀರುತ್ತಿದ್ದಾರೆ. ಆದರೆ ಸಚಿನ್ ಬಾರಿಸಿರುವ ಒಟ್ಟು 100 ಅಂತಾರಾಷ್ಟ್ರೀಯ ದಾಖಲೆಗಳು ಕೊಹ್ಲಿಗಿಂತ ದೂರವಿದೆ. ಯಾಕೆಂದರೆ ಕೊಹ್ಲಿ ಇನ್ನೂ 80 ಶತಕಗಳಲ್ಲಿದ್ದಾರೆ. ನೂರು ಶತಕ ಬಾರಿಸಲು ಇನ್ನೂ 20 ಶತಕಗಳು ಬೇಕಾಗಿವೆ. ಕೊಹ್ಲಿಗೆ ಈಗ 35 ವರ್ಷ. ಅವರಿಗೆ ಸಚಿನ್ ದಾಖಲೆ ಮುರಿಯಲು ಸಾಧ್ಯವೇ ಎಂಬ ಪ್ರಶ್ನೆಗಳು ಎದ್ದಿವೆ. ಅದು ಸಾಧ್ಯವಾಗುವುದಾದರೆ ಹೇಗೆ ಸಾಧ್ಯ ಎಂಬುದೇ ಸದ್ಯದ ಚರ್ಚೆಯಾಗಿದೆ.

15 ತಿಂಗಳ ಹಿಂದೆ, ಕೊಹ್ಲಿ ಕೂಡ ತಮ್ಮ ಮುಂದಿನ ಅಂತಾರಾಷ್ಟ್ರೀಯ ಶತಕ ಎಲ್ಲಿಂದ ಬರುತ್ತದೆ ಎಂದು ಯೋಚಿಸುತ್ತಿರಬಹುದು. ನವೆಂಬರ್ 2019 ಮತ್ತು ಸೆಪ್ಟೆಂಬರ್ 2022 ರ ಆರಂಭದ ನಡುವೆ ಅವರು ತಮ್ಮ ವೃತ್ತಿ ಕ್ರಿಕೆಟ್​ನ ಕೆಟ್ಟ ಸಂದರ್ಭಗಳನ್ನು ಅನುಭವಿಸಿದ್ದರು. 1,020 ದಿನಗಳವರೆಗೆ ಶತಕವಿಲ್ಲದೇ ನೊಂದರು. ಏಷ್ಯಾ ಕಪ್​ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ತಮ್ಮ ಮೊದಲ ಟ್ವೆಂಟಿ -20 ಅಂತರರಾಷ್ಟ್ರೀಯ ಶತಕವನ್ನು ದಾಖಲಿಸಿದರು.

ಅಫ್ಘಾನಿಸ್ತಾನ ವಿರುದ್ಧ ದುಬೈನಲ್ಲಿ ಅಜೇಯ 122 ರನ್ ಗಳಿಸಿದ 14 ತಿಂಗಳಲ್ಲಿ, ಕೊಹ್ಲಿ ಇನ್ನೂ ಒಂಬತ್ತು ಶತಕಗಳನ್ನು ಬಾರಿಸಿದ್ದಾರೆ. ಎರಡು ಟೆಸ್ಟ್​ನಲ್ಲಿ ಮತ್ತು 50 ಓವರ್​ಗಳ ಕ್ರಿಕೆಟ್​ನಲ್ಲಿ ಏಳು ಶತಕಗಳನ್ನು ಗಳಿಸಿದ್ದಾರೆ. ಆದಾಗ್ಯೂ ಅವರಿಗೆ ಇನ್ನೆಷ್ಟು ಶತಕಗಳನ್ನು ಬಾರಿಸಲು ಸಾಧ್ಯ ಎಂಬುದೇ ದೊಡ್ಡ ವಿಷಯವಾಗಿದೆ. ಅವರು ಸಚಿನ್​ ದಾಖಲೆ ಮುರಿಯುವ ಇರಾದೆ ಹೊಂದಿದ್ದಾರೆಯೇ ಎಂಬ ಪ್ರಶ್ನೆಯೂ ಮುಂದಾಗಿದೆ.

ಕೊಹ್ಲಿಗೆ ಮಹತ್ವಾಕಾಂಕ್ಷೆಯೇ ಅವಕಾಶ

ಕೊಹ್ಲಿ ವಿಚಾರದಲ್ಲಿ ಅತ್ಯಂತ ಪ್ರಭಾವಶಾಲಿಯಾದದ್ದು ಅವರ ಮಹತ್ವಾಕಾಂಕ್ಷೆ. ಹಿಂದನಿಂದಲೂ ಕೊಹ್ಲಿ ದಾಖಲೆಗಳು ಮತ್ತು ಮೈಲಿಗಲ್ಲುಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ಅವರು ತಂಡಕ್ಕಾಗಿ ತಮ್ಮ ಕೈಲಾದಷ್ಟು ಕೊಡುವ ಉದ್ದೇಶವನ್ನೇ ಹೊಂದಿದ್ದಾರೆ. ಅದು ಅವರನ್ನು ದಾಖಲೆಯ ವೀರನನ್ನಾಗಿ ಮಾಡಿದೆ. ಸುಮಾರು ಮೂರು ದಶಕಗಳ ಹಿಂದೆ ರಿಚರ್ಡ್ ಹ್ಯಾಡ್ಲೀ ಅವರ ದಾಖಲೆಯ 431 ಟೆಸ್ಟ್ ವಿಕೆಟ್​ಗಳನ್ನು (ಆ ಸಮಯದಲ್ಲಿ) ಬೆನ್ನಟ್ಟಲು ಹೊರಟಾಗ ಕಪಿಲ್ ದೇವ್ ಮಾಡಿದಷ್ಟು ಏಕ ಮನಸ್ಸಿನಿಂದ ಅವರು ದಾಖಲೆಯನ್ನು ಬೆನ್ನಟ್ಟುತ್ತಿಲ್ಲ. ಕೊಹ್ಲಿಗೆ, ದಾಖಲೆಗಳು ಅವರ ಉತ್ತಮ ಪ್ರದರ್ಶನದ ಉಪಉತ್ಪನ್ನವಾಗಿದೆ. ಹೀಗಾಗಿ ಅಂಕಿ ಅಂಶದ ಮೈಲಿಗಲ್ಲುಗಳು ಅವರ ಪ್ರೇರಣೆಯಾಗಿರುವುದಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ, ಯುವ ಕ್ರಿಕೆಟಿಗರಿಗೆ ಸ್ಫೂರ್ತಿ

ವಯಸ್ಸು ನೆರವಾಗುವುದೇ?

35 ವರ್ಷದ ಕೊಹ್ಲಿ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ದೇಶಕ್ಕಾಗಿ ಆಡುತ್ತಿದ್ದಾರೆ. ಅವರ ವೃತ್ತಿಜೀವನದ ಆರಂಭಕ್ಕಿಂತ ಅಂತ್ಯಕ್ಕೆ ಹತ್ತಿರದಲ್ಲಿದೆ. ಅವರು ಉತ್ತಮ ಕುಟುಂಬವನ್ನು ಹೊಂದಿದ್ದಾರೆ. ಕೊಹ್ಲಿ ಕ್ರಿಕೆಟ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೂ ಅದು ತಮ್ಮನ್ನು ನುಂಗಿಹಾಕಲು ಬಿಡುವುದಿಲ್ಲ. ಕ್ರಿಕೆಟ್ ಅವರಿಗೆ ಸರ್ವಸ್ವ ಮತ್ತು ಅಂತ್ಯವಲ್ಲ. ಕುಟುಂಬದ ಕಡೆಗೆ ಅವರ ವರ್ತನೆಗಳು ಆ ರೀತಿ ಎನಿಸುತ್ತದೆ. ಅವರು ಸಾಕು ಎನಿಸಿದಾಗ ನಿವೃತ್ತಿ ಹೇಳುವ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಆದರೆ, ಕೋಟ್ಯಂತರ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಫುಲ್ ಫಿಟ್ ಆಗಿರುವ ಅವರು ಶತಕಗಳ ದಾಖಲೆ ಮುರಿಯಲು ಒಂದು ಪ್ರಯತ್ನ ಮಾಡಿಯಾರು.

ಅವಕಾಶಗಳು ಸಿಗಬಹುದೇ?

ಕೊಹ್ಲಿ ತಮ್ಮ ಕೊನೆಯ ಟಿ 20 ಪಂದ್ಯವನ್ನು ಆಡಿರುವುದು 12 ತಿಂಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ವೇಳೆ. ಅಲ್ಲಿಂದ ವರು ಆ ಸ್ವರೂಪದಲ್ಲಿ ದೇಶವನ್ನು ಪ್ರತಿನಿಧಿಸಿಲ್ಲ. ಅಂತೆಯೇ ಅವರು ಕ್ರಮೇಣ 50 ಓವರ್​ಗಳ ಕ್ರಿಕೆಟ್​ನಿಂದ ಹೊರಗುಳಿಯಬಹುದು. 2027ರ ವಿಶ್ವಕಪ್ ವೇಳೆಗೆ ಕೊಹ್ಲಿಗೆ 39 ರನ್ ವರ್ಷವಾಗಲಿದೆ. ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡವರು ಶೀಘ್ರದಲ್ಲೇ ಭವಿಷ್ಯದ ಬಗ್ಗೆ ಚಿಂತಿತರಾಗಿರುವಾಗ ಕೊಹ್ಲಿಗೆ ಅವಕಾಶ ಕೊಡುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಟೆಸ್ಟ್​​ನಲ್ಲಿ ಅವಕಾಶವಿದೆ

ಕೊಹ್ಲಿ ಹೆಚ್ಚು ಕಾಲ ಆಡಬಹುದಾಗಿದ್ದರೆ ಅದು ಐದು ದಿನಗಳ ಪಂದ್ಯ. ಟೆಸ್ಟ್​ ಕ್ರಿಕೆಟ್​ನಲ್ಲಿ ಅವರು ಉತ್ಸಾಹದಿಂದ ಆಡುತ್ತಾರೆ. ಮುಂದಿನ ತಿಂಗಳು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡವು ಸಾಕಷ್ಟು ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಲಿದ್ದು, ನಂತರ ಜನವರಿಯಿಂದ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಮುಖಾಮುಖಿಯಾಗಲಿದೆ. ಮುಂದಿನ ವರ್ಷ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದ ನಂತರ, ಭಾರತವು 2024 ರ ಅಂತ್ಯದ ವೇಳೆಗೆ ಐದು ಟೆಸ್ಟ್ ಪಂದ್ಯಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. 13 ತಿಂಗಳ ಅವಧಿಯಲ್ಲಿ ಭಾರತ 17 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಕೊಹ್ಲಿ ವಿರಾಮವನ್ನು ಬಯಸದ ಹೊರತು ಎಲ್ಲದರಲ್ಲೂ ಸ್ಥಾನ ಪಡೆಯುತ್ತಾರೆ. ಈ ಪಂದ್ಯಗಳಲ್ಲಿ ಅವರಿಗೆ ಶತಕ ಬಾರಿಸುವ ಅವಕಾಶಗಳು ಹೆಚ್ಚಿವೆ.

ತೆಂಡೂಲ್ಕರ್ ಅವರೊಂದಿಗೆ ಸಮಬಲ ಸಾಧಿಸಲು ಇಪ್ಪತ್ತು ಶತಕಗಳು ಈಗ ಸಾಕಷ್ಟು ದೂರದಲ್ಲಿವೆ. 2019 ರ ನವೆಂಬರ್ನಲ್ಲಿ ಕೊಹ್ಲಿ 70 ಶತಕಗಳನ್ನು ತಲುಪಿದಾಗ ಅದು ಸಾಧ್ಯವಿತ್ತು. ಆದರೆ ಮೂರು ವರ್ಷಗಳ ಶತಕಗಳ ಬರಗಾಲವು ಅವರನ್ನು 100 ಶತಕಗಳತ್ತ ಕೊಂಡೊಯ್ಯುವಲ್ಲಿ ದೊಡ್ಡ ಹಿನ್ನಡೆಯಾಗಿದೆ. ಕಳೆದ 14 ತಿಂಗಳಲ್ಲಿ ಹತ್ತು ಶತಕ ಬಾರಿಸಿದ್ದಾರೆ. ಆದರೆ ಕೊಹ್ಲಿ ಈ ಆವೇಗ ಉಳಿಸಿಕೊಳ್ಳುವರೇ ಎಂಬುದೇ ಕೊಟ್ಟ ಕೊನೆಯ ಪ್ರಶ್ನೆ.

Exit mobile version