ಡೆಹ್ರಾಡೂನ್: ಕಾರು ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕ್ರಿಕೆಟರ್ ರಿಷಭ್ ಪಂತ್ (Rishabh Pant) ಅವರ ಆರೋಗ್ಯ ಸ್ಥಿತಿಯ ಬಗ್ಗೆ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ಮೊದಲ ಬುಲೆಟಿನ್ ಬಿಡುಗಡೆ ಮಾಡಿದೆ. ಅದರ ಪ್ರಕಾರ ಯುವ ಕ್ರಿಕೆಟಿಗ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ರೀತಿಯ ಆತಂಕಗಳು ಇಲ್ಲ. ಆದರೆ, ಆಗಿರುವ ಗಾಯಗಳಿಗೆ ಚಿಕಿತ್ಸೆ ಮುಂದುವರಿಯಲಿದ್ದು, ಸಂಜೆ ವೇಳೆ ಇನ್ನೊಂದು ಬುಲೆಟಿನ್ ಬಿಡುಗಡೆಯಾಗಲಿದೆ.
ಮ್ಯಾಕ್ಸ್ ಆಸ್ಪತ್ರೆಯ ವೈದ್ಯರಾದ ಡಾ. ಆಶೀಶ್ ಯಾಗ್ನಿಕ್ ಅವರು ಪಂತ್ ಆರೋಗ್ಯದ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಕ್ರಿಕೆಟರ್ ರಿಷಭ್ ಪಂತ್ ಅವರು ಆಸ್ಪತ್ರೆಯ ವೈದ್ಯರ ತಂಡದ ನಿಗಾದಲ್ಲಿ ಇದ್ದಾರೆ. ಆರ್ಥೋಪೆಡಿಕ್ ಹಾಗೂ ಪ್ಲಾಸ್ಟಿಕ್ ಸರ್ಜನ್ಗಳು ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಹಣೆಯ ಮೇಲೆ ಒಂದೆರಡು ಗಾಯಗಳು ಆಗಿದ್ದು, ಬೆನ್ನಿನ ಚರ್ಮದ ಮೇಲೂ ಗಾಯಗಳಾಗಿವೆ. ಅಂತೆಯೇ ಮಂಡಿಗೂ ಪೆಟ್ಟು ಬಿದ್ದಿದೆ, ಎಂದು ಹೇಳಿದ್ದಾರೆ.
ಅವರನ್ನು ಇನ್ನಷ್ಟು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸಂಜೆಯ ವೇಳೆಗೆ ಇನ್ನಷ್ಟು ಮಾಹಿತಿ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಪಂತ್ ಅವರು ಡೆಲ್ಲಿಯಿಂದ ತಮ್ಮೂರು ಉತ್ತರಾಖಂಡದ ರೂರ್ಕಿಗೆ ಕಾರಿನಲ್ಲಿ ಹೋಗುವಾಗ ಅಪಘಾತಕ್ಕೆ ಒಳಗಾಗಿದ್ದರು. ಅವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಡೆಲ್ಲಿ -ಡೆಹ್ರಾಡೂನ್ ಎಕ್ಸ್ಪ್ರೆಸ್ ವೇನಲ್ಲಿ ಮಂಜು ಹೆಚ್ಚು ಇದ್ದ ಕಾರಣ ರಸ್ತೆ ಕಾಣದೇ ಅಪಘಾತವಾಗಿದೆ ಎನ್ನಲಾಗುತ್ತಿದೆ. ಕಾರು ಚಾಲನೆ ಮಾಡುತ್ತಿದ್ದ ಪಂತ್ಗೆ ನಿದ್ದೆಯ ಮಂಪರು ಆವರಿಸಿದ್ದು ಕೂಡ ಘಟನೆ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Rishabh Pant | ಕಾರು ಅವಘಡದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಐಪಿಎಲ್, ವಿಶ್ವ ಕಪ್ಗೆ ಅಲಭ್ಯ?