ಚೆನ್ನೈ: ಮಂಡಿನೋವಿನ ಮಧ್ಯೆಯೂ ಐಪಿಎಲ್ ಆಡುತ್ತಿರುವ ಎಂ.ಎಸ್ ಧೋನಿ ಅವರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡೆಲ್ಲಿ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಗೆಲುವು ದಾಖಸಿದೆ. ಪಂದ್ಯದಲ್ಲಿ ಧೋನಿ ಅವರು ಬಿರುಸಿನ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದರು.
ಪಂದ್ಯ ಮುಕ್ತಾಯದ ಬಳಿಕ ಡ್ರೆಸಿಂಗ್ ರೂಮ್ಗೆ ತೆರಳಿ ಧೋನಿಯನ್ನು ಭೇಟಿಯಾದ ಇರ್ಫಾನ್ ಪಠಾಣ್ ಅವರು ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಧೋನಿ ಅವರು ಗಾಯದ ಮಧ್ಯೆಯೂ ಐಪಿಎಲ್ ಆಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಧೋನಿ ಅವರು ಕಾಲಿಗೆ ಕಟ್ಟಿರುವ ಬ್ಯಾಂಡೆಡ್ ಜತೆಗಿನ ಫೋಟೊವನ್ನು ಹಂಚಿಕೊಂಡಿರುವ ಇರ್ಫಾನ್ ಪಠಾಣ್, ‘ರನ್ನಿಂಗ್ ಬಿಟ್ವೀನ್ ವಿಕೆಟ್‌ನಲ್ಲಿ ಧೋನಿ ಕುಂಟುತ್ತಾ ಓಡುತ್ತಿರುವುದನ್ನು ಕಂಡು ನನಗೆ ತುಂಬಾ ಬೇಸರವಾಯಿತು. ಏಕೆಂದರೆ ಅವರು ಚಿರತೆಯಂತೆ ಓಡುವುದನ್ನು ನಾನು ಕಂಡಿದ್ದೇನೆ” ಗಾಯದ ಮಧ್ಯೆಯೂ ಅವರು ವಿಶ್ರಾಂತಿ ಪಡೆಯದೇ ತಂಡದ ಗೆಲುವಿಗಾಗಿ ಪಣತ್ತೊಟ್ಟಿರುವುದು ನಿಜಕ್ಕೂ ಹೆಮ್ಮೆಯ ವಿಚಾರ” ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಧೋನಿ ಅವರು ಮಂಡಿನೋವಿನಿಂದ ಬಳಲುತ್ತಿರುವ ವಿಚಾರವನ್ನು ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಐಪಿಎಲ್ ಆರಂಭಕ್ಕೂ ಮುನ್ನವೇ ಬಹಿರಂಗ ಪಡಿಸಿದ್ದರು. ಧೋನಿ ಅವರು ಮಂಡಿನೋವಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಈ ಬಾರಿಯ ಐಪಿಎಲ್ನಲ್ಲಿ ಈ ಹಿಂದಿನಂತೆ ಓಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ IPL 2023: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆ ಬರೆದ ಶಿವಂ ದುಬೆ
ಗಾಯದಿಂದ ಬಳಲುತ್ತಿರುವ ಧೋನಿ ಅವರು ಈ ಬಾರಿಯ ಐಪಿಎಲ್ ಬಳಿಕ ವಿದಾಯ ಹೇಳುವುದು ಖಚಿತ ಎಂಬಂತಿದೆ. ಐಪಿಎಲ್ ಮುಗಿದ ತಕ್ಷಣ ಅವರು ಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಅವರಿಗೆ 40 ವರ್ಷ ದಾಟಿದ ಕಾರಣ ಈ ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗಿ ಮತ್ತೆ ಕ್ರಿಕೆಟ್ ಆಡಲು ಕಷ್ಟವಾಗಬಹುದು. ಹೀಗಾಗಿ ಅವರು ಐಪಿಎಲ್ಗೆ ಗುಡ್ ಬೈ ಹೇಳುವುದು ಪಕ್ಕಾ ಎನ್ನಲಡ್ಡಿಯಿಲ್ಲ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಆಡಿದ 12 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿ 15 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಧೋನಿ ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 20 ರನ್ ಚಚ್ಚಿ ಮಿಂಚಿದ್ದರು.