ನವ ದೆಹಲಿ: ವಿಶ್ವ ಕಪ್ನ 38ನೇ ಪಂದ್ಯದಲ್ಲಿ (ICC World Cup 2023) ಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 3 ವಿಕೆಟ್ ವಿಜಯ ಸಾಧಿಸಿದೆ. ಇದು ಬಾಂಗ್ಲಾ ತಂಡದ ಪಾಲಿಗೆ ಸತತ ಆರು ಸೋಲುಗಳ ಬಳಿಕ ಲಭಿಸಿದ ವಿಜಯ. ಈ ಗೆಲವಿನೊಂದಿಗೆ ಬಾಂಗ್ಲಾದೇಶ ತಂಡಕ್ಕೆ ಹೆಚ್ಚಿನ ಲಾಭವೇನೂ ಇಲ್ಲ. ಆದರೆ, ಸತತ ಸೋಲುಗಳಿಂದ ಹೈರಾಣಾಗಿದ್ದ ತಂಡಕ್ಕೆ ಸಣ್ಣದೊಂದು ಸಮಾಧಾನ ಅಷ್ಟೇ. ಜತೆಗೆ ಅಂಕಪಟ್ಟಿಯಲ್ಲಿ ಎರಡು ಸ್ಥಾನ ಮೇಲಕ್ಕೇರಿದೆ. ಇದೇ ವೇಳೆ ಶ್ರೀಲಂಕಾ ತಂ ಡ ಒಂದು ಸ್ಥಾನ ಕೆಳಕ್ಕೆ ಜಾರಿದೆ.
ಬಾಂಗ್ಲಾದೇಶ ತಂಡವು ಈ ಪಂದ್ಯಕ್ಕೆ ಮೊದಲು 9ನೇ ಸ್ಥಾನದಲ್ಲಿತ್ತು. ಇದೀಗ ಗೆಲುವಿನೊಂದಿಗೆ ಒಟ್ಟು 4 ಅಂಕ ಸಂಪಾದಿಸಿದೆ. ಜತೆಗೆ -1.142 ನೆಟ್ರನ್ರೇಟ್ ಮೂಲಕ ಅಷ್ಟೇ ಅಂಕ ಪಡೆದಿರುವ ಲಂಕಾಗಿಂತ ಮೇಲಿನ ಸ್ಥಾನಕ್ಕೆ ಏರಿದೆ. ಲಂಕಾ ತಂಡ ಎರಡು ಗೆಲುವಿನ ಹಿನ್ನೆಲೆಯಲ್ಲಿ 4 ಅಂಕ ಸಂಪಾದಿಸಿ -1.160 ನೆಟ್ರನ್ ರೇಟ್ ಪಡೆದೆ. ಇದನ್ನು ಹೊರತುಪಡಿಸಿದರೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಹೊಂದಿಲ್ಲ.
ಈ ಸುದ್ದಿಯನ್ನೂ ಓದಿ: ICC World Cup 2023 : ಶ್ರೀಲಂಕಾ ವಿರುದ್ಧ ಬಾಂಗ್ಲಾ ತಂಡಕ್ಕೆ 3 ವಿಕೆಟ್ ವಿಜಯ
ಭಾರತ ತಂಡ ಒಟ್ಟು 16 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮುಂದುವರಿಸಿದೆ. ಅಲ್ಲದೆ, ಭಾರತವೀಗ ಗರಿಷ್ಠ +2.456 ನೆಟ್ರನ್ ರೇನ್ ಪಡೆದುಕೊಂಡಿದೆ. ಅತ್ತ ದಕ್ಷಿಣ ಆಫ್ರಿಕಾ ತಂಡ 12 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಕಾಪಾಡಿಕೊಂಡಿದೆ. ಅದರೆ, ಬೃಹತ್ ಅಂತರದ ಸೋಲಿನೊಂದಿಗೆ ನೆಟ್ರನ್ರೇಟ್ ಕಳೆದುಕೊಂಡಿದೆ. ಪಂದ್ಯಕ್ಕೆ ಮೊದಲು +2.290 ನೆಟ್ರನ್ರೇಟ್ ಹೊಂದಿದ್ದ ಹರಿಣಗಳ ಪಡೆ +1.376 ರನ್ರೇಟ್ಗೆ ಇಳಿದಿದೆ. ಈ ಲೆಕ್ಕಾಚಾರದ ಪ್ರಕಾರ ನೋಡುವುದಾದರೆ ಭಾರತ ತಂಡ ಲೀಗ್ ಹಂತದ ಮುಕ್ತಾಯದ ವೇಳೆಗೆ ಅಗ್ರ ಕ್ರಮಾಂಕವನ್ನು ಕಾಪಾಡಿಕೊಳ್ಳುವುದು ಬಹುತೇಕ ನಿಶ್ಚಿತ.
ಅಂಕಪಟ್ಟಿ ಈ ರೀತಿ ಇದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 8 | 8 | 0 | 16 | +2.456 |
ದಕ್ಷಿಣ ಆಫ್ರಿಕಾ | 8 | 6 | 2 | 12 | +1.376 |
ಆಸ್ಟ್ರೇಲಿಯಾ | 7 | 5 | 2 | 10 | +0.924 |
ನ್ಯೂಜಿಲ್ಯಾಂಡ್ | 8 | 4 | 4 | 8 | +0.398 |
ಪಾಕಿಸ್ತಾನ | 8 | 4 | 4 | 8 | +0.036 |
ಅಫಘಾನಿಸ್ತಾನ | 7 | 4 | 3 | 8 | -0.330 |
ಬಾಂಗ್ಲಾದೇಶ | 8 | 2 | 6 | 4 | -1.142 |
ಶ್ರೀಲಂಕಾ | 8 | 2 | 6 | 4 | -1.160 |
ನೆದರ್ಲ್ಯಾಂಡ್ಸ್ | 7 | 2 | 5 | 4 | -1.398 |
ಇಂಗ್ಲೆಂಡ್ | 7 | 1 | 6 | 2 | -1.504 |
ಆಫ್ಘನ್-ಆಸೀಸ್ ಸೋತರಷ್ಟೇ ಅವಕಾಶ
ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಕಾರಣ ಸದ್ಯ ತಂಡದ ಅಂಕ 10ಕ್ಕೇರಿದೆ. ಅಲ್ಲದೆ ಮೂರನೇ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇನ್ನು 12 ಅಂಕ ಸಂಪಾದಿಸಲು ಅವಕಾಶವಿರುವುದು ಅಫಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಕ್ಕೆ ಮಾತ್ರ. ಆದರೆ ಇಲ್ಲಿ ಅಫಘಾನಿಸ್ತಾನ 2 ಪಂದ್ಯವನ್ನು ಗಲ್ಲಬೇಕು. ಒಂದು ಪಂದ್ಯ ಆಸೀಸ್ ವಿರುದ್ಧವೇ ಇದೆ. ಈ ಪಂದ್ಯದಲ್ಲಿ ಆಸೀಸ್ ಸೋಲು ಕಂಡರೂ ಅಂತಿಮ ಪಂದ್ಯದಲ್ಲಿ ಗೆಲುವು ಕಂಡರೆ ಆಸೀಸ್ಗೂ 12 ಅಂಕ ಆಗಲಿದೆ. ಆಗ ಆಫ್ಘನ್ ಮತ್ತು ಆಸೀಸ್ ಸೆಮಿಫೈನಲ್ ಪ್ರವೇಶ ಪಡೆಯಲಿದೆ. ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಒಟ್ಟಾರೆ ಆಸೀಸ್ ಮತ್ತು ಆಫ್ಘನ್ ತಂಡದ ಗೆಲುವಿನ ಫಲಿತಾಂಶದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡ ಸೆಮಿ ಭವಿಷ್ಯ ಅಡಗಿದೆ.