Site icon Vistara News

ಸೆಮಿ ಪಂದ್ಯಕ್ಕೂ ಮುನ್ನ ಆಟಗಾರರಿಗೆ ನಾಯಕ ರೋಹಿತ್​ ನೀಡಿದ ಸಲಹೆ ಏನು?

rohit sharma press conference

ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ(ICC Cricket World Cup 2023) ಮೊದಲ ಸೆಮಿಫೈನಲ್​ನಲ್ಲಿ(Semi-Final) ಕಾದಾಡಲು ಭಾರತ ಮತ್ತು ನ್ಯೂಜಿಲ್ಯಾಂಡ್​(India vs New Zealand) ತಂಡಗಳು ಸಿದ್ಧವಾಗಿದೆ. ಪಂದ್ಯಕ್ಕೂ ಮುನ್ನ ದಿನ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ(Rohit Sharma), ಲೀಗ್​ ಹಂತದ ಫಲಿತಾಂಶವನ್ನು ಬದಿಗಿಟ್ಟು ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕಿದೆ ಎಂದು ಸಹ ಆಟಗಾರರಿಗೆ ಸೂಚನೆ ನೀಡಿದ್ದಾರೆ.

“ಲೀಗ್ ಹಂತದಲ್ಲಿ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಆಡಿದ ಎಲ್ಲ ಒಂಬತ್ತು ಪಂದ್ಯಗಳಲ್ಲಿಯೂ ನಾವು ಗೆಲುವು ಸಾಧಿಸಿದ್ದೇವೆ. ಆದರೆ ಇದನ್ನು ಈಗ ಮರೆಯಲೇ ಬೇಕು. ಏನಿದ್ದರು ಸೆಮಿಫೈನಲ್ ಪಂದ್ಯದ ಮೇಲೆ ಗಮನ ಕೇಂದ್ರಿಕರಿಸಬೇಕು. ಉತ್ತಮ ಕ್ರಿಕೆಟ್​ ಆಡಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ ಅಂಪೈರ್‌ಗಳ ಪಟ್ಟಿ ಕಂಡು ನಿಟ್ಟುಸಿರು ಬಿಟ್ಟ ಟೀಮ್​ ಇಂಡಿಯಾ ಅಭಿಮಾನಿಗಳು; ಕಾರಣ ಏನು?

ಒತ್ತಡ ಸಹಜ

ಲೀಗ್​ ಪಂದ್ಯಗಳಲ್ಲಿ ಸೋತರೆ ಇನ್ನೊಂದು ಅವಕಾಶವಿರುತ್ತದೆ. ಆದರೆ ಸೆಮಿಫೈನಲ್​ನಲ್ಲಿ ಎಡವಿದರೆ ಮತ್ತೊಂದು ಪಂದ್ಯದ ಆಯ್ಕೆ ಇರುವುವುದಿಲ್ಲ. ಸೆಮಿ ಎಂದರೆ ಆಟಗಾರರಲ್ಲಿ ಒತ್ತಡ ನಿರ್ಮಾಣವಾಗುವುದು ಸಹಜ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ದೈರ್ಯದಿಂದಲೇ ಉತ್ತಮ ಕ್ರಿಕೆಟ್​ ಆಡಬೇಕು ಎಂದು ರೋಹಿತ್​ ತಮ್ಮ ತಂಡದ ಸಹ ಆಟಗಾರರಿಗೆ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ತುಂಬಿದ್ದಾರೆ.

ನಾವು ಹುಟ್ಟಿಯೇ ಇರಲಿಲ್ಲ

ಭಾರತ ತಂಡ 1983ರಲ್ಲಿ ಮೊದಲ ವಿಶ್ವಕಪ್ ಗೆದ್ದಾಗ ತಂಡದಲ್ಲಿರುವ ಹೆಚ್ಚಿನವರು ಹುಟ್ಟಿಯೇ ಇರಲಿಲ್ಲ. 2011ರ ವಿಶ್ವಕಪ್​ ಗೆದ್ದಾಗ ತಂಡದಲ್ಲಿದ್ದ ವಿರಾಟ್​ ಕೊಹ್ಲಿ ಮತ್ತು ಆರ್​.ಅಶ್ವಿನ್​ ಮಾತ್ರ ಈ ಬಾರಿ ತಂಡದಲ್ಲಿದ್ದಾರೆ. ನಾನು ಸೇರಿ ಉಳಿದ ಯಾವುದೇ ಆಟಗಾರರು ಕೂಡ ಈ ವಿಶ್ವಕಪ್​ನಲ್ಲಿ ಆಡಿಲ್ಲ. ಅಯ್ಯರ್​, ಗಿಲ್, ಇಶಾನ್​ ಅವರು ಶಾಲಾ ವಿದ್ಯಾರ್ಥಿಗಳಾಗಿದ್ದರು. ಹಿಂದಿನ ವಿಶ್ವಕಪ್‌ನಲ್ಲಿ ಏನಾಯಿತು ಎಂಬುದರ ಕುರಿತು ಈಗ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಚಿಂತೆಯೇನಿದ್ದರೂ ಅದು, ಬುಧವಾರ ನಡೆಯುವ ಸೆಮಿಫೈನಲ್​ ಪಂದ್ಯದ ಮೇಲೆ ಎಂದು ಅವರು ಹೇಳಿದರು.

ಇದನ್ನೂ ಓದಿ IND vs NZ: ವಾಂಖೆಡೆಯಲ್ಲಿ ಭಾರತ ವಿರುದ್ಧ ನ್ಯೂಜಿಲ್ಯಾಂಡ್​ ತಂಡದ್ದೇ ಪಾರಮ್ಯ!

ನ್ಯೂಜಿಲ್ಯಾಂಡ್​ ಶಿಸ್ತಿನ ತಂಡ

ಕ್ರಿಕೆಟ್​ನಲ್ಲಿ ನ್ಯೂಜಿಲ್ಯಾಂಡ್​ ಅತ್ಯಂತ ಶಿಸ್ತಿನ ತಂಡವಾಗಿದೆ. ಎದುರಾಳಿ ತಂಡದ ಬಲಾಬಲವನ್ನು ಅವರು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ಈ ತಂಡ ಐಸಿಸಿ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್‌ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಲೇ ಬಂದಿದೆ. ನಾವು ಕೂಡ ಹಲವು ಏರಿಳಿತವನ್ನು ಕಂಡಿದದೇವೆ. ಹೀಗಾಗಿ ಎಚ್ಚರಿಕೆಯಿಂದ ಆಡುವ ಅಗತ್ಯವಿದೆ ಎಂದು ರೋಹಿತ್​ ಶರ್ಮ ಹೇಳಿದರು.

ತಂಡಗಳ ಹೋಲಿಕೆ ಸರಿಯಲ್ಲ

‘ನಾನು 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿರಲಿಲ್ಲ. 2015 ಹಾಗೂ 2019ರ ತಂಡಗಳ ಭಾಗಿವಾಗಿದ್ದೆ. ಇದು ನನ್ನ ಪಾಲಿನ ಮೂರನೇ ವಿಶ್ವಕಪ್​ ಟೂರ್ನಿಯಾಗಿದೆ. ಈ ಹಿಂದಿನ ತಂಡ ಮತ್ತು ಈಗಿನ ತಂಡಗಳಲ್ಲಿ ಉತ್ತಮ ಎಂದು ಹೇಳುವುದು ತುಂಬಾ ಕಷ್ಟ. ಪ್ರತಿಯೊಬ್ಬ ಆಟಗಾರನ ಪಾತ್ರವು ಸ್ಪಷ್ಟವಾಗಿದೆ ಎಂದಷ್ಟೇ ಹೇಳಬಲ್ಲೆ” ಎಂದರು.

ಸಂಭಾವ್ಯ ತಂಡ

ಭಾರತ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ.

ನ್ಯೂಜಿಲ್ಯಾಂಡ್​: ಡೇವನ್‌ ಕಾನ್ವೇ, ರಚಿನ್‌ ರವೀಂದ್ರ, ಕೇನ್‌ ವಿಲಿಯಮ್ಸನ್‌ (ನಾಯಕ), ಮಾರ್ಕ್‌ ಚಾಪ್‌ಮನ್‌, ಡ್ಯಾರಿಲ್‌ ಮಿಚೆಲ್‌, ಗ್ಲೆನ್‌ ಫಿಲಿಪ್ಸ್‌, ಟಾಮ್‌ ಲ್ಯಾಥಂ, ಮಿಚೆಲ್‌ ಸ್ಯಾಂಟ್ನರ್‌, ಲಾಕಿ ಫ‌ರ್ಗ್ಯುಸನ್‌, ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್.

Exit mobile version