ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಋತುವಿನ (IPL 2023) ಅಭಿಯಾನವನ್ನು ಕೋಲ್ಕೊತಾ ನೈಟ್ರೈಡರ್ಸ್ ತಂಡ ಕೊನೆಗೊಳಿಸಿದೆ. ಎಲ್ಎಸ್ಜಿ ವಿರುದ್ಧ 1 ರನ್ ರೋಚಕ ಪರಾಜಯ ಕಾಣುವ ಮೂಲಕ ಪ್ಲೇಆಫ್ಗೇರುವ ಅವಕಾಶ ನಷ್ಟವಾಯಿತು. ಇದರೊಂದಿಗೆ ಲಕ್ನೊ ತಂಡಕ್ಕೆ ಪ್ಲೇಆಫ್ ಹಂತದಲ್ಲಿ ಮೂರನೇ ಸ್ಥಾನ ಖಚಿತವಾಯಿತು. ಇದೀಗ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಎದುರಾಗಿದೆ. ಮುಂಬಯಿ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಸ್ಥಾನಕ್ಕಾಗಿ ಕಾಯುತ್ತಿದೆ. ಭಾನುವಾರ ಇತ್ತಂಡಗಳು ಪ್ರತ್ಯೇಕ ಪಂದ್ಯಗಳಲ್ಲಿ ಆಡಲಿದ್ದು ಅದರಲ್ಲಿನ ಸೋಲು, ಗೆಲುವು ಈ ತಂಡಗಳ ಭವಿಷ್ಯ ನಿರ್ಧರಿಸಲಿದೆ.
ಭಾನುವಾರದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ರಾತ್ರಿ ನಡೆಯುವ ಹಣಾಹಣಿಯಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ಗೆ ಆರ್ಸಿಬಿ ಸವಾಲೊಡ್ಡಲಿದೆ. ಮೇಲ್ನೊಟಕ್ಕೆ ಇಲ್ಲಿ ಆರ್ಸಿಬಿಗೆ ಸಂಕಷ್ಟ ಜಾಸ್ತಿ. ಬಲಿಷ್ಠ ಗುಜರಾತ್ ತಂಡವನ್ನು ಮಣಿಸುವುದು ಆರ್ಸಿಬಿಗೆ ಕಷ್ಟದ ಕೆಲಸ. ಸನ್ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯ ಕೊನೇ ಸ್ಥಾನಿಯಾಗಿರುವ ಕಾರಣ ಮುಂಬಯಿಗೆ ಗೆಲುವು ಸುಲಭ. ಆದರೆ, ಏಡೆನ್ ಮಾರ್ಕ್ರಮ್ ಬಳಗಕ್ಕೆ ಕಳೆದುಕೊಳ್ಳುವುದು ಏನೂ ಇಲ್ಲದ ಕಾರಣ ಮುಂಬಯಿಗೆ ಅಪಾಯವೂ ಇದೆ.
ಆರ್ಸಿಬಿ ಮತ್ತು ಮುಂಬಯಿ ಇಂಡಿಯನ್ಸ್ ತಂಡ ತಲಾ 14 ಅಂಕಗಳೊಂದಿಗೆ ಸಮಬಲ ಸಾಧಿಸಿವೆ. +0.180 ನೆಟ್ ರನ್ ರೇಟ್ ಹೊಂದಿರುವ ಆರ್ಸಿಬಿ ನಾಲ್ಕನೇ ಸ್ಥಾನದಲ್ಲಿದ್ದರೆ, ಮುಂಬಯಿ ತಂಡ ನೆಟ್ರನ್ರೇಟ್ -0.128 ಐದನೇ ಸ್ಥಾನದಲ್ಲಿದೆ. ಆರ್ಸಿಬಿ ತಂಡ ಪಂದ್ಯ ಗೆದ್ದು ಮುಂಬೈ ಇಂಡಿಯನ್ಸ್ ಸೋತರೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದು ಆರ್ಸಿಬಿ ಜಿಟಿ ವಿರುದ್ಧ ಸೋತರೆ ಮುಂಬಯಿ ಚಾನ್ಸ್ ಪಕ್ಕಾ.
ಇದನ್ನೂ ಓದಿ : IPL 2023 : ಕೆಕೆಆರ್ ತಂಡವನ್ನು ಲಕ್ನೊ ತಂಡ ಸೋಲಿಸಿದ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ?
ಎರಡೂ ತಂಡಗಳು ಗೆದ್ದರೆ ಬೆಂಗಳೂರಿಗೆ ಪ್ಲೇಆಫ್ ಅವಕಾಶ ಹೆಚ್ಚು. ಮುಂಬಯಿಗೆ ಅವಕಾಶ ಸಿಗಬೇಕಾದರೆ ಆರ್ಸಿಬಿಗಿಂತ ಕನಿಷ್ಠ 78 ರನ್ಗಳು ಹೆಚ್ಚಿರಬೇಕಾಗುತ್ತದೆ. ಇದರರ್ಥ ಆರ್ಸಿಬಿ ತನ್ನ ಪಂದ್ಯವನ್ನು ಕೇವಲ ಒಂದು ರನ್ನಿಂದ ಗೆದ್ದರೂ ಮುಂಬೈ ಇಂಡಿಯನ್ಸ್ 79 ರನ್ಗಳಿಂದ ಗೆದ್ದರೆ ಮಾತ್ರ ಪ್ಲೇಆಫ್ ಅವಕಾಶ ಸಿಗುತ್ತದೆ.
ಮುಂಬಯಿ ಮತ್ತು ಆರ್ಸಿಬಿ ಎರಡೂ ಸೋತರೆ ಮಾತ್ರ ರಾಜಸ್ಥಾನ್ ತಂಡಕ್ಕೆ ಅವಕಾಶವೊಂದು ಸೃಷ್ಟಿಯಾಗಬಹುದು. ಇದು ಪಕ್ಕಾ ರನ್ರೇಟ್ ಲೆಕ್ಕ. ಆರ್ಅರ್ ರನ್ರೇಟ್ ಈಗಾಗಲೇ ಆರ್ಸಿಬಿಗಿಂತ ಕಡಿಮೆ ಇದೆ. ಹೀಗಾಗಿ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿ 180 ರನ್ ಗಳಿಸಿದರೆ, ಜಿಟಿ ಅದನ್ನು 19 ಓವರ್ಗಳ ಮೊದಲೇ ದಾಟಿದರೆ ರಾಜಸ್ಥಾನ್ಗೊಂದು ಅವಕಾಶ ಸಿಗಲಿದೆ. ಆರ್ಸಿಬಿ ಮೊದಲು ಫೀಲ್ಡಿಂಗ್ ಮಾಡಿ 180 ರನ್ ಬಿಟ್ಟುಕೊಟ್ಟು, 174 ರನ್ಗಿಂತ ಮೊದಲು ಆಲ್ಔಟ್ ಆದರೆ ಇಲ್ಲೂ ರಾಜಸ್ಥಾನ್ ತಂಡಕ್ಕೆ ಅವಕಾಶವಿದೆ.