ಮೆಲ್ಬೋರ್ನ್ : ವಿಶ್ವ ಕ್ರಿಕೆಟ್ ಕ್ಷೇತ್ರದ ಬಹುನಿರೀಕ್ಷಿತ ಹಾಗೂ ಅಷ್ಟೇ ಕುತೂಹಲಕಾರಿಯಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ (IND vs PAK) ನಡುವಿನ ಟಿ೨೦ ವಿಶ್ವ ಕಪ್ ಭಾನುವಾರ ಮಧ್ಯಾಹ್ನ ನಡೆಯಲಿದೆ. ಮಳೆಯ ಆತಂಕದ ನಡುವೆಯೂ ಸಾಕಷ್ಟು ಮಂದಿ ಈ ಪಂದ್ಯವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಈ ಪಂದ್ಯದಲ್ಲಿ ಗೆದ್ದು ಕಳೆದ ವರ್ಷ, ಯುಎಇನಲ್ಲಿ ನಡೆದ ವಿಶ್ವ ಕಪ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವಿನ ಮುನ್ನಡೆ ಹೊಂದಿರುವ ಭಾರತ ತಂಡಕ್ಕೆ ಈ ಪಂದ್ಯವನ್ನೂ ಗೆದ್ದು ಅಂತರ ಹೆಚ್ಚಿಸುವ ತವಕವಿದೆ. ಆದರೆ, ಪಾಕಿಸ್ತಾನ ತಂಡ ಸದ್ಯ ಬಲಿಷ್ಠವಾಗಿದ್ದು, ಸೋಲಿಸುವುದು ಸರಳವಲ್ಲ.
ಪಿಚ್ ಹೇಗಿದೆ?
ಪಂದ್ಯ ನಡೆಯಲಿರುವ ಎಮ್‌ಸಿಜಿ ಪಿಚ್ ಪಂದ್ಯದುದ್ದಕ್ಕೂ ಏಕ ರೀತಿಯಲ್ಲಿ ವರ್ತಿಸಲಿದೆ. ಹೀಗಾಗಿ ದುಬೈ ಪಿಚ್‌ನಂತೆ ಇಲ್ಲಿ ಟಾಸ್ ಗೆದ್ದವರೇ ಪಂದ್ಯದ ಬಾಸ್ ಎನ್ನುವಂತಿಲ್ಲ. ವೇಗದ ಬೌಲಿಂಗ್‌ಗೆ ಇದು ಹೆಚ್ಚು ಪೂರಕವಾಗಿ ಇರಲಿದೆ. ಹೊಸ ಚೆಂಡಿನಲ್ಲಿ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಸತತವಾಗಿ ಪ್ರಯತ್ನ ಮಾಡಲಿದ್ದಾರೆ. ೨೦೨೦ರ ಅಂಕಿ ಅಂಶಗಳನ್ನು ನೋಡುವುದಾದರೆ ಚೇಸಿಂಗ್ ಮಾಡುವ ತಂಡ ಶೇಕಡ ೫೦ರಷ್ಟು ಗೆಲುವು ಸಾಧಿಸಿದೆ.
ಸಮಯ: ಭಾರತದಲ್ಲಿ ಮಧ್ಯಾಹ್ನ ೧.೩೦ (ಆಸ್ಟ್ರೇಲಿಯಾದಲ್ಲಿ ರಾತ್ರಿ ೭ ಗಂಟೆ)
ತಾಣ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್
ಸಂಭಾವ್ಯ ತಂಡಗಳು
ಭಾರತ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ , ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ / ಮೊಹಮ್ಮದ್ ಶಮಿ, ಯಜ್ವೇಂದ್ರ ಚಹಲ್ / ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್.
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ನಸೀಮ್ ಶಾ, ಶಾಹಿನ್ ಶಾ ಅಫ್ರಿದಿ, ಹ್ಯಾರಿಸ್ ರವೂಫ್.
ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಭಾರತ ತಂಡದ ಡಜನ್ ಗೆಲುವು ಸಾಧನೆ