ಮುಂಬಯಿ: ಟೀಮ್ ಇಂಡಿಯಾದ ಯುವ ಆಟಗಾರ ಶುಭಮನ್ ಗಿಲ್ ಅವರು ಪ್ರಚಂಡ ಬ್ಯಾಟಿಂಗ್ ಮೂಲಕ ಐಪಿಎಲ್ ಕ್ರಿಕೆಟ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಮುನ್ನಗ್ಗುತ್ತಿದ್ದಾರೆ. ಈಗಾಗಲೇ ಅವರ ಬ್ಯಾಟಿಂಗ್ ಬಗ್ಗೆ ಹಲವು ಕ್ರಿಕೆಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಗಿಲ್ ಬಗ್ಗೆ ಟ್ವಿಟರ್ನಲ್ಲಿ ಬರೆದ ಪತ್ರವೊಂದು ಇದೀಗ ವೈರಲ್ ಆಗಿದೆ.
ಗಿಲ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಟ್ವೀಟ್ ಮಾಡಿರುವ ಸಚಿನ್,” ಈ ಆವೃತ್ತಿಯ ಐಪಿಎಲ್‌ನಲ್ಲಿ ಗಿಲ್ ಎಂದೂ ಮರೆಯಲಾಗದ ರೀತಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಅವರು ಬಾರಿಸಿದ ಶತಕ ದೊಡ್ಡ ಮಟ್ಟದ ಭರವಸೆಯೊಂದನ್ನು ಹುಟ್ಟುಹಾಕಿತು. ಮುಂದಿನ ಶತಮಾನದ ಶ್ರೇಷ್ಠ ಆಟಗಾರ ಎಂಬ ನಂಬಿಕೆಯೊಂದು ಎಲ್ಲರಲ್ಲಿ ಮೂಡಿಸಿದೆ. ಗಿಲ್ ಅವರ ಬ್ಯಾಟಿಂಗ್‌ನಲ್ಲಿ ನನ್ನನ್ನು ನಿಜವಾಗಿಯೂ ಪ್ರಭಾವಿಸಿದ್ದು ಅವರ ಗಮನಾರ್ಹ ಸ್ವಭಾವ, ಅಚಲವಾದ ಶಾಂತತೆ, ರನ್‌ಗಳ ಹಸಿವು ಮತ್ತು ವಿಕೆಟ್‌ಗಳ ನಡುವೆ ಚಾಣಾಕ್ಷ ಓಟ” ಎಂದು ಸಚಿನ್ ಯುವ ಆಟಗಾರನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಐಪಿಎಲ್‌ನಲ್ಲಿ ಹಣ ಮತ್ತು ಖ್ಯಾತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವರು ಪ್ರದರ್ಶನ ತೋರಲು ಇಚ್ಚಿಸುತ್ತಾರೆ. ಆದರೆ ಗಿಲ್ ಅವರ ಆಲೋಚನೆ ಬೇರೆಯದ್ದೇ ಆಗಿದೆ. ಅವರು ಇಷ್ಟಪಟ್ಟ ಕ್ರಿಕೆಟ್ನಲ್ಲಿ ಏನಾದರು ಸಾಧಿಸಬೇಕು ಎಂಬ ಛಲ ಅವರಲ್ಲಿ ನಾನು ಕಂಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಅವರು ಇದೇ ಪ್ರದರ್ಶನವನ್ನು ಮುಂದುವರಿಸಿಕೊಂಡು ಭಾರತದ ಕ್ರಿಕೆಟ್ ಚರಿತ್ರೆಯಲ್ಲಿ ವಿಶೇಷ ಸ್ಥಾನಮಾನ ಗಳಿಸಿಸಲಿ” ಎಂದು ಹಾರೈಸಿದರು.
ಇದನ್ನೂ ಓದಿ IPL 2023 : ಶುಭಮನ್ ಗಿಲ್ ಬಗ್ಗೆ ಕಪಿಲ್ ದೇವ್ ಹೇಳಿದ ಕ್ರಿಕೆಟ್ ಭವಿಷ್ಯವೇನು?
Shubman Gill's performance this season has been nothing short of unforgettable, marked by two centuries that left an indelible impact. One century ignited @mipaltan's hopes, while the other dealt them a crushing blow. Such is the unpredictable nature of cricket!
— Sachin Tendulkar (@sachin_rt) May 28, 2023
What truly… pic.twitter.com/R3VLWQxhoT
ಮುಂಬಯಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಶಕತ ಬಾರಿಸಿ ಸಂಭ್ರಮಿಸಿದ ಗಿಲ್ ಅವರು ಪಂದ್ಯ ಮುಗಿದ ಬಳಿಕ ಸಚಿನ್ ಬಳಿ ತೆರಳಿ ಕೆಲ ಕಾಲ ಕ್ರಿಕೆಟ್ ಸಲಹೆಯನ್ನು ಕೇಳಿದ್ದರು. ಇದೇ ವೇಳೆ ಸಚಿನ್ ಅವರ ಕಾಲಿಗೆ ಬಿದ್ದು ಗಿಲ್ ಆಶೀರ್ವಾದ ಕೂಡ ಪಡೆದಿದ್ದರು. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.