Site icon Vistara News

CWG- 2022 | ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?

CWG-2022

ನವ ದೆಹಲಿ : ಕಾಮನ್ವೆಲ್ತ್‌ ಒಕ್ಕೂಟಗಳ ಮಹಾ ಕ್ರೀಡಾ ಸಂಗ್ರಾಮ ಕಾಮನ್ವೆಲ್ತ್‌ ಗೇಮ್ಸ್‌ ಸೋಮವಾರ ಸಮಾಪ್ತಿಗೊಂಡಿದೆ. ಇಂಗ್ಲೆಂಡ್‌ನ ಬರ್ಮಿಂಗ್ಹಮ್ ನಗರದಲ್ಲಿ ಉದ್ಘಾಟನಾ ಸಮಾರಂಭ ಸೇರಿ ಒಟ್ಟು ೧೧ ದಿನಗಳ ಕಾಲ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆಯಿತು. ವಿಶ್ವದ ೫೦೫೪ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಕ್ರೀಡಾ ಜಾತ್ರೆಗೆ ಭಾರತವೂ ೧೦೬ ಪುರುಷರ ಹಾಗೂ ೧೦೪ ಮಹಿಳೆಯರು ಸೇರಿ ೨೧೦ ಕ್ರೀಡಾಪಟುಗಳನ್ನು ಕಳುಹಿಸಿತ್ತು. ಇವರೆಲ್ಲರ ಸಾಧನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ೬೧ ಪದಕಗಳು ಸಿಕ್ಕಿವೆ. ೨೨ ಚಿನ್ನದ ಪದಕ, ೧೬ ರಜತ ಪದಕ, ೨೩ ಕಂಚಿನ ಪದಕಗಳು ಭಾರತೀಯರ ಮುಡಿಗೇರಿಗೆ. ಅಂಕಪಟ್ಟಿಯಲ್ಲೂ ಭಾರತಕ್ಕೆ ೪ನೇ ಸ್ಥಾನ ದೊರಕಿದ್ದು ಕೂಡ ಕಡಿಮೆ ಸಾಧನೆಯೇನು ಅಲ್ಲ.

ಕ್ರೀಡಾಕೂಟದ ಸಮಾರೋಪ ಸಮಾರಂಭದ ದೃಶ್ಯಗಳು

೨೦೧೮ಕ್ಕೆ ಹೋಲಿಸಿದರೆ ಭಾರತದ ಸಾಧನೆ ಸ್ವಲ್ಪ ಪ್ರಮಾಣದಲ್ಲಿ ಮಂಕಾಗಿದೆ. ಅದಕ್ಕೆ ಶೂಟಿಂಗ್‌ ಸ್ಪರ್ಧೆಯನ್ನು ಕ್ರೀಡಾಕೂಟದಿಂದ ಹೊರಗಿಟ್ಟಿರುವುದೇ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ, ಕಳೆದ ಆವೃತ್ತಿಯಲ್ಲಿ ಭಾರತದ ಶೂಟರ್‌ಗಳು ಏಳು ಚಿನ್ನ ಸೇರಿದಂತೆ ೧೬ ಪದಕಗಳನ್ನು ಗೆದ್ದಿದ್ದರು. ಇಷ್ಟೊಂದು ಪದಕಗಳು ಹಾಲಿ ಪಟ್ಟಿಗೆ ಸೇರ್ಪಡೆಯಾಗಿದ್ದರೆ ಭಾರತದ ಕ್ರೀಡಾ ಕ್ಷೇತ್ರದ ಸುಧಾರಣೆ ಎಲ್ಲರ ಅರಿವಿಗೆ ಬಂದಿರುತ್ತಿತ್ತು. ಆದರೆ, ವಾಸ್ತವನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಲಾನ್‌ಬೌಲ್ಸ್‌ ಎಂಬ ಕ್ರೀಡೆಯಲ್ಲಿ ಭಾರತ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದಿರುವುದು ಆಶಾದಾಯಕ. ಅಂತೆಯೇ ಅಥ್ಲೆಟಿಕ್ಸ್‌ನಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಕೆಲವೊಬ್ಬರು ಪದಕ ಗೆದ್ದಿದ್ದರೆ, ಇನ್ನೂ ಕೆಲವರು ಮಿಲಿ ಸೆಕೆಂಡ್‌ಗಳ ಅಂತರದಿಂದ ಪದಕ ಕಳೆದುಕೊಂಡಿದ್ದರು. ಹಿಮಾ ದಾಸ್‌ ಇದಕ್ಕೆ ಸ್ಪಷ್ಟ ಉದಾಹರಣೆ. ಅದೇನೆ ಇದ್ದರೂ, ದಿನದಿಂದ ದಿನಕ್ಕೆ ಬೆಳಗುತ್ತಿರುವ ಭಾರತದ ಕ್ರೀಡಾ ಕ್ಷೇತ್ರದ ಸಾಧನೆ ಬಗ್ಗೆ ಹೆಮ್ಮೆ ಪಡಲೇಬೇಕು. ಅದಕ್ಕಾಗಿ, ೨೦೨೨ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಪಟ್ಟಿಯ ಮೇಲೆ ಕಣ್ಣು ಹಾಯಿಸೋಣ.

ಕುಸ್ತಿ: ಭಾರತಕ್ಕೆ ಹೆಚ್ಚು ಚಿನ್ನದ ಪದಕಗಳನ್ನು ತಂದುಕೊಟ್ಟಿರುವುದು ಕುಸ್ತಿ. ಈ ಕ್ರೀಡೆಯ ಸಾಧಕರ ಪಟ್ಟಿ ಇಂತಿದೆ.

ಸಾಕ್ಷಿ ಮಲಿಕ್‌

ಚಿನ್ನ ಗೆದ್ದವರು: ಬಜರಂಗ್ ಪುನಿಯಾ (ಪುರುಷರ 65 ಕೆ.ಜಿ), ಸಾಕ್ಷಿ ಮಲಿಕ್‌ (ಮಹಿಳೆಯರ 62 ಕೆ.ಜಿ), ದೀಪಕ್ ಪುನಿಯಾ (ಪುರುಷರ86 ಕೆ.ಜಿ), ರವಿ ಕುಮಾರ್ ದಹಿಯಾ (ಪುರುಷರ 57 ಕೆ.ಜಿ) ವಿನೇಶ್ ಫೋಗಾಟ್‌ (ಮಹಿಳೆಯರ 53 ಕೆ.ಜಿ) ನವೀನ್ ಕುಮಾರ್‌ (ಪುರುಷರ 74 ಕೆ.ಜಿ). ಬೆಳ್ಳಿ ಗೆದ್ದವರು: ಅಂಶು ಮಲಿಕ್ (ಮಹಿಳೆಯರ 57 ಕೆ.ಜಿ), ಕಂಚು ಗೆದ್ದವರು: ದಿವ್ಯಾ ಕಾಕ್ರನ್‌ (ಮಹಿಳೆಯರ 68 ಕೆ.ಜಿ), ಮೋಹಿತ್ ಗ್ರೇವಾಲ್ (ಪುರುಷರ 125 ಕೆ.ಜಿ) , ಪೂಜಾ ಗೆಹ್ಲೋಟ್ (ಮಹಿಳೆಯರ 50 ಕೆ.ಜಿ), ಪೂಜಾ ಸಿಹಾಗ್ (ಮಹಿಳೆಯರ 76 ಕೆ.ಜಿ)

ಅಥ್ಲೆಟಿಕ್ಸ್: ಅಥ್ಲೆಟಿಕ್ಸ್‌ನಲ್ಲಿ ಭಾರತ ಈ ಸಲ ಸುಧಾರಣೆ ಕಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಭರವಸೆ ಮೂಡಿಸಿದೆ.

ಎಲ್ದೋಸ್‌ ಪಾಲ್‌

ಚಿನ್ನ ಗೆದ್ದವರು: ಎಲ್ದೋಸ್ ಪಾಲ್(ಪುರುಷರ ಟ್ರಿಪಲ್ ಜಂಪ್). ಬೆಳ್ಳಿ ಗೆದ್ದವರು: ಅಬ್ದುಲ್ಲಾ ಅಬೂಬಕರ್ಪು (ಪುರುಷರ ಟ್ರಿಪಲ್ ಜಂಪ್), ಅವಿನಾಶ್ ಸಾಬ್ಲೆ (ಪುರುಷರ 3000ಮೀ ಸ್ಟೀಪಲ್‌ಚೇಸ್), ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 10 ಕಿಮೀ ರೇಸ್‌ವಾಕ್‌), ಎಂ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್), ತೇಜಸ್ವಿನ್ ಶಂಕರ್ (ಪುರುಷರ ಹೈ ಜಂಪ್). ಕಂಚು ಗೆದ್ದವರು: ಅನ್ನು ರಾಣಿ (ಮಹಿಳೆಯರ ಜಾವೆಲಿನ್ ಥ್ರೋ), ಸಂದೀಪ್ ಕುಮಾರ್ (ಪುರುಷರ 10 ಕಿ.ಮೀ ರೇಸ್‌ ವಾಕ್‌_

ಬ್ಯಾಡ್ಮಿಂಟನ್: ಭಾರತದ ಜನಪ್ರಿಯ ಆಟ. ಈ ಕ್ಷೇತ್ರದ ಕ್ರೀಡಾಪಟುಗಳು ವಿಶ್ವ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಿದ್ದು, ಇದೀಗ ಕಾಮನ್ವೆಲ್ತ್‌ನಲ್ಲೂ ಮಿಂಚಿದ್ದಾರೆ.

ಪಿ ವಿ ಸಿಂಧೂ

ಬಂಗಾರ ಗೆದ್ದವರು : ಪಿ. ವಿ ಸಿಂಧೂ (ಮಹಿಳೆಯರ ಸಿಂಗಲ್ಸ್) , ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್), ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್). ಬೆಳ್ಳಿ ಗೆದ್ದವರು : ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್‌), ಸಾತ್ವಿಕ್ ಸಾಯಿರಾಜ್, ಬಿ ಸುಮೀತ್ ರೆಡ್ಡಿ, ಲಕ್ಷ್ಯ ಸೇನ್, ಚಿರಾಗ್ ಶೆಟ್ಟಿ, ತ್ರಿಸಾ ಜೊಲ್ಲಿ, ಆಕರ್ಷಿ ಕಶ್ಯಪ್, ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್, ಪಿ.ವಿ ಸಿಂಧೂ (ಮಿಶ್ರ ತಂಡ). ಕಂಚು ಗೆದ್ದವರು: ತ್ರಿಸಾ ಜೊಲ್ಲಿ ಮತ್ತು ಗಾಯತ್ರಿ ಗೋಪಿಚಂದ್ (ಮಹಿಳೆಯರ ಡಬಲ್ಸ್) ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್).

ಬಾಕ್ಸಿಂಗ್: ಭಾರತಕ್ಕೆ ಪದಕಗಳ ಸುರಿಮಳೆಗೈದ ಇನ್ನೊಂದು ಸ್ಪರ್ಧೆ ಬಾಕ್ಸಿಂಗ್‌. ಕುಸ್ತಿಯಂತೆ ಬಾಕ್ಸಿಂಗ್‌ನಲ್ಲೂ ಭಾರತ ಆಟಗಾರ ವಿಶ್ವ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.

ನಿಖತ್‌ ಜರೀನ್‌


ಬಂಗಾರ ಗೆದ್ದವರು: ನಿಖತ್ ಜರೀನ್ (ಮಹಿಳೆಯರ 50 ಕೆ.ಜಿ), ನೀತೂ ಗಂಗಾಸ್‌ (ಮಹಿಳೆಯರ 48 ಕೆ.ಜಿ), ಅಮಿತ್ ಪಂಘಾಲ್‌ (ಪುರುಷರ 51 ಕೆ.ಜಿ), ಬೆಳ್ಳಿ ಗೆದ್ದವರು: ಸಾಗರ್ ಅಹ್ಲಾವತ್ (ಪುರುಷರ 92 ಕೆ.ಜಿ). ಕಂಚು ಗೆದ್ದವರು: ರೋಹಿತ್ ಟೋಕಸ್‌ (ಪುರುಷರ 67 ಕೆ.ಜಿ), ಜಾಸ್ಮಿನ್‌ (ಮಹಿಳೆಯರ 60 ಕೆ.ಜಿ), ಮೊಹಮ್ಮದ್ ಹುಸಾಮುದ್ದೀನ್ (ಪುರುಷರ 57 ಕೆ.ಜಿ).

ವೇಟ್​ಲಿಫ್ಟಿಂಗ್: ಈ ಸ್ಪರ್ಧೆಯಲ್ಲಿ ಹಲವು ಪದಕಗಳು ಭಾರತಕ್ಕೆ ಬರಲಿವೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ಬರ್ಮಿಂಗ್ಹಮ್‌ನಲ್ಲಿ ಈ ಕ್ರೀಡೆಯ ಸಾಧಕರು ಇವರು.

ಮೀರಾ ಬಾಯಿ ಚಾನು

ಚಿನ್ನ ಗೆದ್ದವರು : ಮೀರಾಬಾಯಿ ಚಾನು–(ಮಹಿಳೆಯರ 49 ಕೆ.ಜಿ), ಜೆರೆಮಿ ಲಾಲ್‌ರಿನುಂಗಾ (ಪುರುಷರ 67 ಕೆ.ಜಿ), ಅಚಿಂತಾ ಶೆಯುಲಿ (ಪುರುಷರ 73 ಕೆ.ಜಿ) ಬೆಳ್ಳಿ ಗೆದ್ದವರು: ಸಂಕೇತ್ ಮಹದೇವ್‌ ಸರ್ಗರ್ (ಪುರುಷರ 55 ಕೆ.ಜಿ), ಬಿಂದ್ಯಾರಾಣಿ ದೇವಿ (ಮಹಿಳೆಯರ 55 ಕೆ.ಜಿ), ವಿಕಾಸ್ ಠಾಕೂರ್ (ಪುರುಷರ 96 ಕೆ.ಜಿ) ಕಂಚು ಗೆದ್ದವರು: ಗುರುರಾಜ ಪೂಜಾರಿ (ಪುರುಷರ 61 ಕೆ.ಜಿ), ಹರ್ಜಿಂದರ್ ಕೌರ್–(ಮಹಿಳೆಯರ 71 ಕೆ.ಜಿ),–ಲವ್‌ಪ್ರೀತ್‌ ಸಿಂಗ್‌ (ಪುರುಷರ 109 ಕೆ.ಜಿ), ಗುರುದೀಪ್ ಸಿಂಗ್ (ಪುರುಷರ 109 ಕೆ.ಜಿ).

ಕ್ರಿಕೆಟ್ ತಂಡಕ್ಕೆ ಬೆಳ್ಳಿ : ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತು ರಜತ ಪದಕ ಗೆದ್ದ ಮಹಿಳೆಯರ ಟಿ೨೦ ಸದಸ್ಯರು ಇವರು..

ಮಹಿಳೆಯರ ಟಿ೨೦ ತಂಡ

ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂಧಾನಾ, ತಾನಿಯಾ ಭಾಟಿಯಾ, ಯಸ್ತಿಕಾ ಭಾಟಿಯಾ, ಹರ್ಲೀನ್ ದೇವಲ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸ್ನೇಹ್‌ ರಾಣಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್, ರಾಧಾ ಯಾದವ್‌.

ಪುರುಷರ ಹಾಕಿ ತಂಡಕ್ಕೆ ಬೆಳ್ಳಿ : ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ೦-೭ ಗೋಲ್‌ಗಳಿಂದ ಸೋತು ರಜತ ಪದಕ ತಮ್ಮದಾಗಿಸಿಕೊಂಡ ಭಾರತ ಹಾಕಿ ತಂಡದ ಸದಸ್ಯರು ಇವರು…

ಪುರುಷರ ಹಾಕಿ ತಂಡ

ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ನೈನ್, ಸುರೇಂದರ್ ಕುಮಾರ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಕ್ರಿಶನ್ ಬಹದ್ದೂರ್ ಪಾಠಕ್, ಲಲಿತ್ ಕುಮಾರ್ ಉಪಾಧ್ಯಾಯ, ಪಿ.ಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್, ಜಿಗರಾಜ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಕಂಚು ಗೆದ್ದ ಮಹಿಳಾ ಹಾಕಿ ತಂಡ : ಕಂಚಿನ ಪದಕದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ ಗೋಲ್‌ ಮೂಲಕ ಸೋಲಿಸಿ ಕಂಚು ಗೆದ್ದ ಭಾರತ ಮಹಿಳೆಯರ ತಂಡದ ಸದಸ್ಯರು ಇವರು…

ಮಹಿಳೆಯರ ಹಾಕಿ ತಂಡ

ಸವಿತಾ ಪುನಿಯಾ, ಗುರ್ಜಿತ್ ಕೌರ್, ದೀಪ್ ಗ್ರೇಸ್ ಎಕ್ಕಾ, ಮೋನಿಕಾ, ಸೋನಿಕಾ, ಶರ್ಮಿಳಾ ದೇವಿ, ನಿಕ್ಕಿ ಪ್ರಧಾನ್, ರಜನಿ ಎಟಿಮಾರ್ಪು, ಸಂಗೀತಾ ಕುಮಾರಿ, ನಿಶಾ, ವಂದನಾ ಕಟಾರಿಯಾ, ಉದಿತಾ, ಲಾಲ್‌ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್, ಸುಶೀಲಾ ಚಾನು, ಸಲಿಮಾ ಟೆಟೆ.

ಜುಡೊ: ಮಾರ್ಷಲ್‌ ಆರ್ಟ್‌ ಗುಂಪಿಗೆ ಸೇರಿದ ಈ ಕ್ರೀಡೆಯಲ್ಲೂ ಭಾರತ ಭರವಸೆ ಮೂಡಿಸಿದೆ.

ಸುಶೀಲಾ ದೇವಿ

ಬೆಳ್ಳಿ ಗೆದ್ದವರು: ಸುಶೀಲಾ ದೇವಿ ಲಿಕ್ಮಾಬಮ್ (ಮಹಿಳೆಯರ 48 ಕೆ.ಜಿ), ತುಲಿಕಾ ಮಾನ್ (ಮಹಿಳೆಯರ 78 ಕೆ.ಜಿ) ಕಂಚು ಗೆದ್ದವರು: ವಿಜಯ್ ಕುಮಾರ್ ಯಾದವ್ (ಪುರುಷರ 60 ಕೆ.ಜಿ)

ಲಾನ್ ಬೌಲ್ಸ್: ಮೊಟ್ಟ ಮೊದಲ ಬಾರಿಗೆ ಈ ಕ್ರೀಡೆಯಲ್ಲಿ ಭಾರತ ಸಾಧನೆ ಮಾಡಿದೆ. ಸಾಧಕರು ಇವರು..

ಲಾನ್‌ ಬೌಲ್ಸ್‌ ಮಹಿಳೆಯರ ತಂಡ

ಚಿನ್ನ ಗೆದ್ದವರು : ಮಹಿಳೆಯರ ಫೋರ್‌ ತಂಡದ ಸದಸ್ಯರಾದ ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ನೈನ್ಮೋನಿ ಸೈಕಿಯಾ, ಪಿಂಕಿ. ಬೆಳ್ಳಿ ಗೆದ್ದವರು : ಪುರುಷರ ಫೋರ್‌ ತಂಡದ ಸದಸ್ಯರಾದ ಚಂದನ್ ಕುಮಾರ್ ಸಿಂಗ್, ದಿನೇಶ್ ಕುಮಾರ್, ನವನೀತ್ ಸಿಂಗ್, ಸುನಿಲ್ ಬಹದ್ದೂರ್.

ಪವರ್ಲಿಫ್ಟಿಂಗ್: ಇಲ್ಲೂ ಒಂದು ಚಿನ್ನ ಗೆದ್ದ ಭಾರತ ಹೊಸ ಸಂಚಲನ ಮೂಡಿಸಿದೆ.
ಚಿನ್ನ ಗೆದ್ದವರು: ಸುಧೀರ್‌ (ಪುರುಷರ ಹೆವಿವೇಟ್)

ಸ್ಕ್ವ್ಯಾಷ್: ಭಾರತ ಈ ಕ್ರೀಡೆಯಲ್ಲಿ ಸ್ವಲ್ಪ ಮಟ್ಟಿಗೆ ಪ್ರಭಾವ ಹೊಂದಿದೆ. ಹೊಸ ಪೀಳಿಗೆಯ ಕ್ರೀಡಾಪಟುಗಳು ಈ ಮಾದರಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.

ದೀಪಿಕಾ ಪಲ್ಲಿಕಲ್‌ ಮತ್ತು ಸೌರವ್‌ ಘೋಷಾಲ್‌

ಕಂಚು ಗೆದ್ದವರು : ಸೌರವ್ ಘೋಷಾಲ್‌ (ಪುರುಷರ ಸಿಂಗಲ್ಸ್) ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಷಾಲ್‌ (ಮಿಶ್ರ ಡಬಲ್ಸ್).

ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್: ಹಿಂದಿನ ಹಲವು ಕಾಮನ್ವೆಲ್ತ್‌ನಲ್ಲಿ ಭಾರತದ ಟಿಟಿ ಪಟುಗಳು ಸಾಧನೆ ಮಾಡಿದ್ದಾರೆ. ಅಂತೆಯೇ ಈ ಬಾರಿಯೂ ಉತ್ತಮ ಫಲಿತಾಂಶ ದೊರಕಿದೆ. ಈ ಕ್ರೀಡೆಯ ಸಾಧಕರು ಇಂತಿದ್ದಾರೆ.

ಶ್ರೀಜಾ ಅಕುಲಾ ಮತ್ತು ಅಚಂತಾ ಶರತ್‌ ಕಮಲ್‌

ಚಿನ್ನ ಗೆದ್ದವರು : ಅಚಂತ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ (ಮಿಶ್ರ ಡಬಲ್ಸ್), ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ (ಪುರುಷರ ತಂಡ) ಭಾವಿನಾ ಪಟೇಲ್–(ಮಹಿಳೆಯರ ಪ್ಯಾರಾ ಸಿಂಗಲ್ಸ್‌), ಅಚಂತ ಶರತ್ ಕಮಲ್ (ಪುರುಷರ ಸಿಂಗಲ್ಸ್). ಬೆಳ್ಳಿ ಗೆದ್ದವರು: ಅಚಂತ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ (ಪುರುಷರ ಡಬಲ್ಸ್). ಕಂಚು ಗೆದ್ದವರು : ಸತ್ಯನ್ ಜ್ಞಾನಶೇಖರನ್–(ಪುರುಷರ ಸಿಂಗಲ್ಸ್), ಸೋನಾಲ್ ಪಟೇಲ್ (ಮಹಿಳೆಯರ ಪ್ಯಾರಾ ಸಿಂಗಲ್ಸ್).

Exit mobile version