ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಕನಿಷ್ಠ ಎರಡು ಸಂದರ್ಭಗಳಲ್ಲಿ ವೃತ್ತಿಪರ ಕೋಚ್ಗಳ ನೆರವು ನೀಡಲು ಲೈಂಗಿಕ ಅನುಕೂಲಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿದಂತೆ ಪ್ರತಿಭಟನಾ ನಿರತ ಏಳು ಕುಸ್ತಿಪಟುಗಳು (Wrestlers Protest) ಆರೋಪಿಸಿದ್ದಾರೆ. 15 ಬಾರಿ ಕಿರುಕುಳ ಮತ್ತು ಇದೇ ರೀತಿಯ ಲೈಂಗಿಕ ಕಿರುಕುಳದ ಘಟನೆಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಶುಕ್ರವಾರ ವರದಿ ಮಾಡಿದೆ.
ಬಿಜೆಪಿ ಸಂಸದರಾಗಿರುವ ಸಿಂಗ್ ವಿರುದ್ಧ ಡೆಲ್ಲಿ ಪೊಲೀಸರು ಎರಡು ಎಫ್ಐಆರ್ ದಾಖಲಿಸಿದ್ದಾರೆ. ಮೊದಲ ಎಫ್ಐಆರ್ನಲ್ಲಿ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯ ತಂದೆ ನೀಡಿರುವ ದೂರಿನ ಮೇರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ಗಳ (ಪೋಕ್ಸೊ) ಅಡಿಯಲ್ಲೂ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಲಿಂಪಿಕ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ವಿಜೇತರು ಸೇರಿದಂತೆ ಹಲವಾರು ಕುಸ್ತಿಪಟುಗಳು ಕುಸ್ತಿ ಒಕ್ಕೂಟದ ಅಧ್ಯಕ್ಷನ ಬಂಧನ ಮತ್ತು ಪದಚ್ಯುತಿಗೆ ಒತ್ತಾಯಿಸಿ ಏಪ್ರಿಲ್ನಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದಾಗ್ಯೂ, ಅವರನ್ನು ಡೆಲ್ಲಿ ಪೊಲೀಸರು ಇನ್ನೂ ಬಂಧಿಸಿಲ್ಲ.
ಪ್ರಮುಖ ಆರೋಪಗಳೇನು?
ಬ್ರಿಜ್ಭೂಷಣ್ ಸಿಂಗ್ ತಮ್ಮನ್ನು ತಬ್ಬಿಕೊಂಡಿದ್ದಾರೆ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ದೂರುದಾರ ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ. ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಮೂವರು ಕುಸ್ತಿಪಟುಗಳ ಸ್ತನಗಳು ಮತ್ತು ಹೊಟ್ಟೆಯನ್ನು ಸಿಂಗ್ ಸ್ಪರ್ಶಿಸಿದ್ದಾರೆ ಎಂಬುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ.
ಒಂದು ದಿನ ನಾನು ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ಹೋಗಿದ್ದಾಗ, ಬ್ರಿಜ್ಭೂಷಣ್ ಸಿಂಗ್ ಪ್ರತ್ಯೇಕವಾಗಿ ತಮ್ಮ ಊಟದ ಟೇಬಲ್ ಬಳಿಗೆ ಕರೆದಿದ್ದರು. ನನ್ನ ಒಪ್ಪಿಗೆಯಿಲ್ಲದೆ ನನ್ನ ಸ್ತನದ ಮೇಲೆ ಕೈ ಇಟ್ಟು ನನ್ನನ್ನು ತಬ್ಬಿಕೊಂಡಿದ್ದರು ಎಂಬುದಾಗಿ ಮಹಿಳಾ ಕುಸ್ತಿಪಟುವೊಬ್ಬರು ದೂರಿದ್ದಾರೆ.
ಕಚೇರಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸಿಂಗ್ ಅವರು ನನ್ನ ಅಂಗೈ, ಮೊಣಕಾಲು, ತೊಡೆಗಳು ಮತ್ತು ಭುಜಗಳ ಮೇಲೆ ತಮ್ಮ ಕೈಗಳನ್ನು ಇರಿಸಿದ್ದಾರೆ. ನನ್ನ ಉಸಿರಾಟ ಪರೀಕ್ಷಿಸುವ ನೆಪದಲ್ಲಿ ಸ್ತನಗಳನ್ನು ಸ್ಪರ್ಶಿಸಿದ್ದಾರೆ ಎಂದು ಕುಸ್ತಿಪಟುಗೊಬ್ಬರು ಆರೋಪಿಸಿದ್ದಾರೆ.
ಕುಸ್ತಿ ಮ್ಯಾಟ್ ಮೇಲೆ ಮಲಗಿದ್ದಾಗ ಸಿಂಗ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳಾ ಕುಸ್ತಿಪಟುವೊಬ್ಬರು ಹೇಳಿದ್ದಾರೆ. ತನ್ನನ್ನು ತನ್ನ ಕಚೇರಿಗೆ ಕರೆದಿದ್ದರು. ನನ್ನ ಸಹೋದರನಿಗೆ ಹೊರಗೆ ಕಾಯುವಂತೆ ಹೇಳಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಬ್ರಿಜ್ಭೂಷಣ್ ಸಿಂಗ್ ಯಾವಾಗಲೂ ಅನುಚಿತ ಸನ್ನೆಗಳನ್ನು ಮಾಡುತ್ತಿದ್ದರು ಎಂದು ಮತ್ತೊಬ್ಬರು ಕುಸ್ತಿಪಟು ಆರೋಪಿಸಿದ್ದಾರೆ. ಅಲ್ಲಿಂದ ನಾನು ಸೇರಿದಂತೆ ಮಹಿಳಾ ಕುಸ್ತಿಪಟುಗಳಾದ ನಾವೆಲ್ಲೂ ರಾತ್ರಿಯ ಊಟಕ್ಕೆ ಏಕಾಂಗಿಯಾಗಿ ಹೋಗದಿರಲು ನಿರ್ಧರಿಸದ್ದೆವು ಎಂಬುದಾಗಿ ದೂರಿನಲ್ಲಿ ಮಹಿಳೆಯರು ತಿಳಿಸಿದ್ದಾರೆ.
ಬಾಲಕಿಯ ದೂರಿನಲ್ಲೇನಿದೆ?
ಫೋಟೋ ತೆಗೆಯುವ ನೆಪದಲ್ಲಿ ಸಿಂಗ್ ನನ್ನನ್ನು ಬಲವಂತವಾಗಿ ತನ್ನ ಕಡೆಗೆ ಎಳೆದುಕೊಂಡು ತಬ್ಬಿದ್ದಾರೆ. ಅವರು ಎಷ್ಟು ಬಿಗಿಯಾಗಿ ಹಿಡಿದಿದ್ದನೆಂದರೆ ಚಲಿಸಲು ಅಥವಾ ಹಿಡಿತದಿಂದ ಮುಕ್ತಿ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಬಾಲಕಿಯೊಬ್ಬಳ ಹೇಳಿಕೆ ಪ್ರಕಾರ ಆಕೆಯ ತಂದೆ ದೂರು ದಾಖಲಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಇದನ್ನೂ ಓದಿ : Wrestlers Protest: ವೈರಮುತ್ತು ವಿಷಯದಲ್ಲಿ ಸ್ಟಾಲಿನ್ ಮೌನವೇಕೆ? ಕುಸ್ತಿಪಟುಗಳಿಗೆ ಬೆಂಬಲ ಬಳಿಕ ಗಾಯಕಿ ಚಿನ್ಮಯಿ ಪ್ರಶ್ನೆ
ಸಿಂಗ್ ಉದ್ದೇಶಪೂರ್ವಕವಾಗಿ ತನ್ನ ಕೈಯನ್ನು ಭುಜದ ಕೆಳಗೆ ಸರಿಸಿ ಸ್ತನಗಳ ಮೇಲೆ ಉಜ್ಜಿದ್ದನು ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಬ್ರಿಜ್ಭೂಷಣ್ ತಮ್ಮೊಂದಿಗೆ ಸತತವಾಗಿ ಸಂಪರ್ಕದಲ್ಲಿ ಇರುವಂತೆ ಅಪ್ರಾಪ್ತ ಬಾಲಕಿಗೆ ಒತ್ತಾಯ ಮಾಡಿದ್ದ ಎಂಬುದಾಗಿಯೂ ದೂರಲಾಗಿದೆ.
ತಮಗೆ ಲೈಂಗಿಕವಾಗಿ ಸಹಕರಿಸಿದರೆ ಕುಸ್ತಿಗೆ ಅಗತ್ಯವಿರುವ ಸಪ್ಲಿಮೆಂಟ್ಗಳನ್ನು ಕೊಡಿಸುವುದಾಗಿ ಆಮಿಷ ಒಡ್ಡಿದ್ದರು. ಅಲ್ಲದೆ, ಲೈಂಗಿಕವಾಗಿ ಸಹಕರಿಸಲು ಲಂಚ ನೀಡಲು ಮುಂದಾದರು ಎಂದು ಮಹಿಳಾ ಕುಸ್ತಿಪಟುವೊಬ್ಬರು ದೂರಿದ್ದಾರೆ.
ಫೋಟೋ ತೆಗೆಯುವ ನೆಪದಲ್ಲಿ ಮಹಿಳಾ ಕುಸ್ತಿಪಟುವೊಬ್ಬರನ್ನು ಬ್ರಿಜ್ಭೂಷಣ್ ಹತ್ತಿರಕ್ಕೆ ಸೆಳೆದಿರುವ ಕುರಿತು ಎಫ್ಐಆರ್ನಲ್ಲಿ ದಾಖಲಾಗಿದೆ. ಪ್ರತಿರೋಧ ಒಡ್ಡಿದ್ದಕ್ಕೆ ಕುಸ್ತಿ ಕ್ಷೇತ್ರದ ಭವಿಷ್ಯವನ್ನು ಚಿವುಟಿ ಹಾಕುವ ಬೆದರಿಕೆಯೂ ಹಾಕಿದ್ದರೂ ಎಂದು ಹೇಳಿದ್ದಾರೆ.