ಬೆಂಗಳೂರು : ಲೀಗ್ ಕ್ರಿಕೆಟ್ನ ಅಬ್ಬರದ ನಡುವೆಯೂ ಜನಪ್ರಿಯತೆ ಉಳಿಸಿಕೊಂಡಿರುವ ರಣಜಿ ಟ್ರೋಫಿಯ 2022-23ನೇ ಋತುವಿಗೆ ಮಂಗಳವಾರ ಚಾಲನೆ ಸಿಕ್ಕಿದೆ. ದೇಶಿ ಕ್ರಿಕೆಟ್ನ ರಾಜ ಎಂದೇ ಕರೆಯುವ ಈ ಕ್ರಿಕೆಟ್ ಟೂರ್ನಿಗೆ ಈಗಲೂ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಅಲ್ಲದೆ, ಇಲ್ಲಿ ಆಡಿ ಮಿಂಚಿದವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಛಾಪು ಮೂಡಿಸಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಮಾಜಿ ನಾಯಕ ಸೌರವ್ ಗಂಗೂಲಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಧುನಿಕ ಯುಗದ ಹಲವಾರು ಕ್ರಿಕೆಟಿಗರು ರಣಜಿ ಟ್ರೋಫಿಯಲ್ಲಿ ಸಾಧನೆ ಮಾಡಿಕೊಂಡು ಬಂದವರಾಗಿದ್ದಾರೆ. ಹೀಗಾಗಿ ರಣಜಿ ಟ್ರೋಫಿ ಭಾರತದ ಕ್ರಿಕೆಟ್ ಕಾರಿಡಾರ್ನಲ್ಲಿ ದೊಡ್ಡ ಮೌಲ್ಯವನ್ನು ಹೊಂದಿದೆ.
ಐಪಿಎಲ್ ಆರಂಭವಾಗುವುದಕ್ಕೆ ಮೊದಲಿನವರೆಗೆ ರಣಜಿ ಟ್ರೋಫಿ ಟೀಮ್ ಇಂಡಿಯಾದ ಆಯ್ಕೆಗೆ ಮಾನದಂಡವೂ ಆಗಿತ್ತು. ಆಟಗಾರರು ದೇಶೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬಳಿಕ ತೋರಿದ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗುತ್ತಿತ್ತು. ಹೀಗಾಗಿ ರಣಜಿ ತಂಡದಲ್ಲಿ ಸ್ಥಾನ ಪಡೆಯಲು ಯುವ ಕ್ರಿಕೆಟಿಗರು ಹಾತೊರೆಯುತ್ತಿದ್ದರು. ಆ ವೇಳೆಯಲ್ಲಿ ಟೆಸ್ಟ್ ಹಾಗೂ ಏಕ ದಿನ ಮಾದರಿಗೆ ಹೆಚ್ಚು ಮೌಲ್ಯವಿದ್ದ ಕಾರಣ ರಣಜಿಯ ಪ್ರ್ರದರ್ಶನದ ಮೇರೆಗೆ ಆಯ್ಕೆ ಅನಿವಾರ್ಯವೂ ಆಗಿತ್ತು. ಆದರೆ, ಐಪಿಎಲ್ ಬಂದ ಬಳಿಕ ಆಯ್ಕೆ ಮಾನದಂಡ ಸ್ವಲ್ಪ ಮಟ್ಟಿಗೆ ಬದಲಾಗಿದೆ. ಆದಾಗ್ಯೂ, ಫಸ್ಟ್ ಕ್ಲಾಸ್ ಕ್ರಿಕೆಟ್ನ ಸಾಧನೆಯನ್ನು ಈಗಲೂ ಪರಿಗಣಿಸಲಾಗುತ್ತಿದೆ. ಇಷ್ಟೆಲ್ಲ ಗೈರತ್ತು ಹೊಂದಿರುವ ರಣಜಿ ಟ್ರೋಫಿಗೆ 8 ದಶಕಗಳ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ರಣಜಿ ಟ್ರೋಫಿ ಭಾರತದಲ್ಲಿ ಚಾಲನೆಗೆ ಬಂದಿತ್ತು. ಹಾಗಾದರೆ ಈ ಟೂರ್ನಿಯ ಹುಟ್ಟು ಹೇಗಾಯಿತು ಹಾಗೂ ಅದರ ಹಸರಿನ ಹಿನ್ನೆಲೆಯೇನು ಎಂಬುದರ ಮಾಹಿತಿ ಇಲ್ಲಿದೆ.
ಹೆಸರು ಎಲ್ಲಿಂದ ಬಂತು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 1935ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಗೆ ಚಾಲನೆ ಕೊಟ್ಟಿತು. ಅದು ಸ್ವಾತಂತ್ರ್ಯ ಪೂರ್ವ ಕಾಲ. ಬ್ರಿಟಿಷರ ಆಡಳಿತದ ನಡುವೆಯೂ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ನವನಗರದ ರಾಜರಾಗಿದ್ದ ರಣಜಿತ್ಸಿಂಗ್ಜಿ ಅವರ ಹೆಸರನ್ನೇ ಈ ಟೂರ್ನಿ ಇಡಲಾಗಿದೆ. 1934-35ನೇ ಋತುವಿನ ಕ್ರಿಕೆಟ್ ರಣಜಿ ಟೂರ್ನಿ ಆರಂಭವಾಗುವುದಕ್ಕಿಂತ ಒಂದು ವರ್ಷ ಮೊದಲು ರಣಜಿತ್ಸಿಂಗ್ಜಿ ಅವರು ಮೃತಪಟ್ಟಿದ್ದರು. ಹೀಗಾಗಿ ಅವರ ಸ್ಮರಣೆಗಾಗಿ ದೇಶಿಯ ಕ್ರಿಕೆಟ್ ಟೂರ್ನಿ ಆಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಪಟಿಯಾಲದ ರಾಜ ಭೂಪಿಂದರ್ ಸಿಂಗ್ ಅವರು ಮೊದಲ ಟ್ರೋಫಿಯನ್ನು ನೀಡಿದ್ದರು. ಮೊದಲ ಪಂದ್ಯ ಮದ್ರಾಸ್ ಹಾಗೂ ಮೈಸೂರು ತಂಡಗಳ ನಡುವೆ ನಡೆದಿದ್ದರೆ, ಮುಂಬಯಿ ತಂಡ ಆರಂಭಿಕ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಮುಂಬಯಿ ತಂಡ ಒಟ್ಟಾರೆ 41 ಬಾರಿ ಚಾಂಪಿಯನ್ಪಟ್ಟ ಅಲಂಕರಿಸಿದೆ.
ಯಾವ ಮಾದರಿಯಲ್ಲಿ ಪಂದ್ಯ?
ರಣಜಿ ಟ್ರೋಫಿಯನ್ನು ಟೆಸ್ಟ್ ಮಾದರಿಯ ಪಂದ್ಯವಾಗಿದೆ. ರೌಂಡ್ ರಾಬಿನ್ ಹಂತದ ಪಂದ್ಯಗಳನ್ನು ನಾಲ್ಕು ದಿನಗಳ ಕಾಲ ನಡೆದರೆ ನಾಕೌಟ್ ಹಂತದ ಪಂದ್ಯಗಳನ್ನು ಐದು ದಿನಗಳ ಕಾಲ ನಡೆಸಲಾಗುತ್ತದೆ. ಪಂದ್ಯದಲ್ಲಿ ಫಲಿತಾಂಶ ಮೂಡಿ ಬರದೇ ಹೋದರೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿರುವ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಗುತ್ತದೆ.
ಪೂರ್ಣ ಪ್ರಮಾಣದ ಟೂರ್ನಿ
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೂರು ವರ್ಷಗಳ ಕಾಲ ರಣಜಿ ಟ್ರೋಫಿ ಸರಿಯಾಗಿ ನಡೆದಿರಲಿಲ್ಲ. ಆದರೆ, ೨೦೨೨-೨೩ನೇ ಆವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ರಣಜಿ ಟ್ರೋಫಿ ಟೂರ್ನಿ ನಡೆಯಲಿದೆ. ಈ ಬಾರಿ ನಡೆಯುತ್ತಿರುವುದು 88ನೇ ಆವೃತ್ತಿಯ ಟೂರ್ನಿ. ರಣಜಿ ಟ್ರೋಫಿ 2022-23ನೇ ಆವೃತಿಯು 135 ಪಂದ್ಯಗಳನ್ನು ಒಳಗೊಂಡಿರುತ್ತದೆ, 13 ಡಿಸೆಂಬರ್ 2022ರಂದು ಆರಂಭಗೊಂಡು 20 ಫೆಬ್ರವರಿ 2023ರವರೆಗೆ ಮುಂದುವರಿಯಲಿದೆ.
ಕಳೆದ ಬಾರಿಯ ಚಾಂಪಿಯನ್ ಯಾರು?
2021-22ರ ಆವೃತ್ತಿಯ ಟೂರ್ನಿಯಲ್ಲಿ ಮುಂಬೈ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮಧ್ಯಪ್ರದೇಶ ಗೆದ್ದಿತು. ಆದಾಗ್ಯೂ, ಮುಂಬೈ 41 ಪ್ರಶಸ್ತಿಗಳೊಂದಿಗೆ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.
ಎಷ್ಟು ತಂಡಗಳಿವೆ ಈ ಬಾರಿ
ಹಾಲಿ ಆವೃತ್ತಿಯಲ್ಲಿ ಒಟ್ಟಾರೆ 38 ತಂಡಗಳಿವೆ. ಎಲ್ಲ ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ತಲಾ ಎಂಟು ತಂಡಗಳಿರುವ ನಾಲ್ಕು ಎಲೈಟ್ ಗ್ರೂಪ್‌ಗಳಿಗೆ ಸೇರಿದ್ದರೆ ಆರು ತಂಡಗಳನ್ನು ಪ್ಲೇಟ್ ಗುಂಪಿನಲ್ಲಿ ಇರಿಸಲಾಗಿದೆ.
ಹಾಲಿ ಋತುವಿನ ರಣಜಿ ಟ್ರೋಫಿಯಲ್ಲಿ ಇಬ್ಬರು ಪ್ರತ್ಯೇಕ ವಿಜೇತರು ಇರುತ್ತಾರೆ – ಒಬ್ಬರು ಎಲೈಟ್ ಗ್ರೂಪ್‌ಗಳಿಗೆ ಮತ್ತು ಇನ್ನೊಬ್ಬರು ಪ್ಲೇಟ್ ಗ್ರೂಪ್‌ಗೆ.
ಹೋಮ್ ಮತ್ತು ಅವೇ ಪಂದ್ಯಗಳ ನಂತರ ಪ್ರತಿ ಎಲೈಟ್ ಗ್ರೂಪ್‌ನಿಂದ ಅಗ್ರ ಎರಡು ತಂಡಗಳು ಕ್ವಾರ್ಟರ್-ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಗುಂಪಿನ ಕೆಳಗಿನ ಸ್ಥಾನದಲ್ಲಿರುವ ತಂಡಗಳನ್ನು ಮುಂದಿನ ಋತುವಿನಲ್ಲಿ ಪ್ಲೇಟ್ ಗ್ರೂಪ್‌ಗೆ ಕೆಳಗಿಳಿಸಲಾಗುತ್ತದೆ.
ಪ್ಲೇಟ್ ಗುಂಪಿನಲ್ಲಿ, ಪ್ರತಿ ತಂಡವು ಇತರ ಐದು ತಂಡಗಳ ವಿರುದ್ಧ ಆಡಲಿದೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಐದು ಮತ್ತು ಆರನೇ ಸ್ಥಾನಗಳಿಗಾಗಿ ಕೆಳಗಿನ ಎರಡು ತಂಡಗಳಿರುತ್ತವೆ. ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಮತ್ತೊಂದು ಪ್ಲೇಆಫ್ ಇರುತ್ತದೆ. ಇಬ್ಬರು ಫೈನಲಿಸ್ಟ್‌ಗಳನ್ನು 2023-24 ಋತುವಿಗಾಗಿ ಎಲೈಟ್ ಗ್ರೂಪ್‌ಗೆ ಬಡ್ತಿ ನೀಡಲಾಗುತ್ತದೆ.
ರಣಜಿ ಟ್ರೋಫಿ 2022-23 ಗುಂಪುಗಳು
ಎಲೈಟ್ ಎ: ಬರೋಡಾ, ಬಂಗಾಳ, ಹರಿಯಾಣ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಒಡಿಶಾ, ಉತ್ತರಾಖಂಡ, ಉತ್ತರ ಪ್ರದೇಶ.
ಎಲೈಟ್ ಬಿ: ಆಂಧ್ರಪ್ರದೇಶ, ಅಸ್ಸಾಂ, ಮಹಾರಾಷ್ಟ್ರ, ಮುಂಬಯಿ, ಸೌರಾಷ್ಟ್ರ, ತಮಿಳುನಾಡು, ಹೈದರಾಬಾದ್, ದೆಹಲಿ.
ಎಲೈಟ್ ಸಿ: ಕೇರಳ, ಗೋವಾ, ಪುದುಚೇರಿ, ಜಾರ್ಖಂಡ್, ಛತ್ತೀಸ್‌ಗಢ, ರಾಜಸ್ಥಾನ, ಸರ್ವಿಸಸ್, ಕರ್ನಾಟಕ.
ಎಲೈಟ್ ಡಿ: ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ಮಧ್ಯಪ್ರದೇಶ, ತ್ರಿಪುರಾ, ರೈಲ್ವೆ, ಗುಜರಾತ್, ವಿದರ್ಭ.
ಪ್ಲೇಟ್ ಗುಂಪು: ಅರುಣಾಚಲ ಪ್ರದೇಶ, ಬಿಹಾರ, ಮೇಘಾಲಯ, ಸಿಕ್ಕಿಂ, ಮಣಿಪುರ, ಮಿಜೋರಾಂ.
ನೇರ ಪ್ರಸಾರ ಎಲ್ಲಿ?
ರಣಜಿ ಟ್ರೋಫಿ 2022-23 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ ಹಾಟ್ಸ್ಟಾರ್ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಎಲ್ಲ ಪಂದ್ಯಗಳು ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
ಕರ್ನಾಟಕದ ಪಂದ್ಯಗಳು
ದಿನಾಂಕ | ಎದುರಾಳಿ | ಸ್ಥಳ |
ಡಿಸೆಂಬರ್ 13ರಿಂದ 16 | ಸರ್ವಿಸಸ್ | ಬೆಂಗಳೂರು |
ಡಿಸೆಂಬರ್ 20ರಿಂದ 23 | ಪುದುಚೆರಿ | ಬೆಂಗಳೂರು |
ಡಿಸೆಂಬರ್ 27ರಿಂದ 30 | ಗೋವಾ | ಪಣಜಿ |
ಜನವರಿ 3ರಿಂದ 6 | ಛತ್ತೀಸ್‌ಗಢ | ರಾಯ್ಪುರ |
ಜನವರಿ 10ರಿಂದ13 | ರಾಜಸ್ಥಾನ | ಬೆಂಗಳೂರು |
ಜನವರಿ 17ರಿಂದ21 | ಕೇರಳ | ತಿರುವನಂತಪುರ |
ಜನವರಿ 24ರಿಂದ 27 | ಜಾರ್ಖಂಡ್ | ರಾಂಚಿ |
ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಸಾಧನೆ ಏನು?
ಮುಂಬಯಿ ತಂಡ ರಣಜಿ ಟ್ರೋಫಿಯನ್ನು ಗರಿಷ್ಠ ಬಾರಿ ಗೆದ್ದಿರುವ ತಂಡವಾಗಿದೆ. ನಂತರದ ಸ್ಥಾನವನ್ನು ಕರ್ನಾಟಕ ಹೊಂದಿದೆ. ಕರುನಾಡ ಬಳಗ ಒಟ್ಟು 8 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಂತರದ ಸ್ಥಾನಗಳನ್ನು ಡೆಲ್ಲಿ (7 ಬಾರಿ) ಹಾಗೂ ಬರೋಡಾ (5 ಬಾರಿ) ತಂಡ ಹೊಂದಿದೆ.
ಇದನ್ನೂ ಓದಿ | Ranji Trophy 2022 | ಐದು ದಶಕಗಳ ನಂತರ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ