ದುಬೈ : ಏಷ್ಯಾ ಕಪ್ ಸೂಪರ್-೪ ಹಂತದಲ್ಲಿ ಸೆಪ್ಟೆಂಬರ್ ೪ರಂದು ಏಷ್ಯಾ ಖಂಡದ ಬಲಿಷ್ಠ ತಂಡಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ (IND vs PAK) ಹಣಾಹಣಿ ನಡೆಯಲಿದೆ. ಕಳೆದ ಭಾನುವಾರ ಈ ಎರಡೂ ತಂಡಗಳು ಪರಸ್ಪರ ಎದುರಾಗಿದ್ದವು. ಅದರಲ್ಲಿ ಭಾರತ ತಂಡ ೫ ವಿಕೆಟ್‌ಗಳಿಂದ ಜಯ ಸಾಧಿಸಿತ್ತು. ಇದೀಗ ಮತ್ತೆ ಕಣಕ್ಕಿಳಿದು ವಿಜಯಕ್ಕಾಗಿ ಕಾದಾಡಲಿವೆ. ಹಾಗಾದರೆ ಈ ಹೈವೋಲ್ಟೇಜ್ ಪಂದ್ಯ ಎಲ್ಲಿ, ನಡೆಯುತ್ತದೆ ಹಾಗೂ ಯಾವಾಗ ಆರಂಭವಾಗುತ್ತದೆ ಎಂಬ ವಿವರ ಇಲ್ಲಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಹಣಾಹಣಿ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಆಯೋಜನೆಗೊಂಡಿದೆ. ಆಗಸ್ಟ್ ೨೮ರಂದು ಕೂಡ ಇದೇ ಮೈದಾನದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ ಭಾರತ ಜಯ ಸಾಧಿಸಿತ್ತು.
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಭಾರತೀಯ ಕಾಲಮಾನ ರಾತ್ರಿ ೭.೩೦ಕ್ಕೆ ಆರಂಭವಾಗಲಿದೆ. ಹಿಂದಿನ ಬಾರಿಯೂ ಅದೇ ಸಮಯಕ್ಕೆ ಆರಂಭಗೊಂಡಿತ್ತು. ಆದರೆ, ಕಳೆದ ಬಾರಿ ಪಂದ್ಯ ಮುಕ್ತಾಯದ ಅವಧಿ ಮಿತಿ ದಾಟಿತ್ತು. ನಿಗದಿತ ಅವಧಿಗಿಂತ ಐದು ಓವರ್‌ಗಳಷ್ಟು ಹೆಚ್ಚುವರಿಯಾಗಿ ನಡೆದಿತ್ತು. ಅದಕ್ಕಾಗಿ ಎರಡೂ ತಂಡಗಳು ದಂಡ ಹಾಕಿಸಿಕೊಂಡಿದ್ದವು.
ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಮ್‌ನ ಪಿಚ್ ಸ್ಪರ್ಧಾತ್ಮಕವಾಗಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ಗೆ ನೆರವಾಗುತ್ತದೆ. ಹೊಸ ಚೆಂಡಿನಲ್ಲಿ ವೇಗಿಗಳಿಗೆ ಸಾಕಷ್ಟು ಅನುಕೂಲ. ಎರಡನೇ ಇನಿಂಗ್ಸ್‌ನಲ್ಲಿ ಟ್ರ್ಯಾಕ್ ನಿಧಾನಗೊಳ್ಳುವ ಕಾರಣ ಸ್ಪಿನ್ನರ್‌ಗಳಿಗೆ ಅನುಕೂಲಕರ. ಮೈದಾನ ದೊಡ್ಡದಿರುವ ಕಾರಣ ಸಿಕ್ಸರ್ ಎತ್ತುವುದು ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಪರಿಕ್ಷೆಯಾಗಿದೆ.
ದುಬೈ ಪಿಚ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಅನುಭವವಿದೆ. ಉಗ್ರರ ಕಾಟಕ್ಕೆ ಹೆದರಿ ವಿದೇಶಿ ತಂಡಗಳು ಪಾಕ್‌ಗೆ ಹೋಗದ ಕಾರಣ ಪಾಕ್ ವಿರುದ್ಧದ ದ್ವಿ ಪಕ್ಷೀಯ ಸರಣಿಗಳೆಲ್ಲವೂ ದುಬೈನಲ್ಲಿ ನಡೆದಿದ್ದವು. ಇದು ಭಾರತದ ಎದುರಾಳಿ ತಂಡಕ್ಕೆ ಅನುಕೂಲಕರ ಸಂಗತಿ. ಅಂತೆಯೇ ಭಾರತ ತಂಡವೂ ಈ ಸ್ಟೇಡಿಯಮ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿದೆ.
ಟಾಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲಿದೆ. ಯಾಕೆಂದರೆ ಚೇಸಿಂಗ್ ತಂಡಕ್ಕೆ ಇಲ್ಲಿ ಹೆಚ್ಚು ಗೆಲುವು ಲಭಿಸಿದೆ. ೨೧೧ ರನ್ ಈ ಸ್ಟೇಡಿಯಮ್‌ನ ಗರಿಷ್ಠ ಸ್ಕೋರ್.
ತಂಡಗಳು ಇಂತಿವೆ
ಭಾರತ ತಂಡ : ರೋಹಿತ್ ಶರ್ಮ(ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್, ಆರ್. ಅಶ್ವಿನ್, ಯಜ್ವೇಂದ್ರ ಚಹಲ್.
ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಶ್ದಿಲ್ ಶಾ, ಆಸಿಫ್ ಅಲಿ, ಶದಾಬ್ ಖಾನ್, ಹಾರಿಸ್ ರವೂಫ್, ಮೊಹಮ್ಮದ್ ನವಾಜ್, ನಾಸಿಮ್ ಶಾ, ಹಸನ್ ಅಲಿ.
ನೇರ ಪ್ರಸಾರ : ಭಾರತ ಮತ್ತು ಪಾಕಿಸ್ತಾನ ತಂಡಗಳು ನಡುವಿನ ಪಂದ್ಯ ಸ್ಟಾರ್ ಸ್ಪೋಟ್ಸ್ ನೆಟ್ವರ್ಕ್ ಚಾನೆಲ್‌ಗಳಲ್ಲಿ ಆರಂಭವಾಗಲಿದೆ. ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಇದನ್ನೂ ಓದಿ | Ind vs Pak | ಅಗ್ರ ಕ್ರಮಾಂಕದ ಬ್ಯಾಟಿಂಗ್, ಡೆತ್ ಓವರ್ ಬೌಲಿಂಗ್ ಸುಧಾರಣೆಗೆ ಭಾರತ ತಂಡದ ಒತ್ತು