Site icon Vistara News

ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ? ಎಷ್ಟು ಆಟಗಾರರನ್ನು ಖರೀದಿ ಮಾಡಬಹುದು?

IPL Auction 2024

ದುಬೈ: ದುಬೈನ(Dubai) ಕೋಕಾ-ಕೋಲಾ ಅರೆನಾದಲ್ಲಿ ನಾಳೆ(ಡಿ.19 ಮಂಗಳವಾರ) ನಡೆಯುವ ಐಪಿಎಲ್​-2024ರ ಆಟಗಾರರ ಹರಾಜು ಪ್ರಕ್ರಿಯೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ದುಬೈ ತಲುಪಿದ ವಿಡಿಯೊವನ್ನು ಐಪಿಎಲ್​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಹರಾಜಿನಲ್ಲಿ ಒಟ್ಟು 262.95 ಕೋಟಿ ರೂ. ಹಣದ ಮಿತಿಯಿದೆ. ಇದೀಗ ಈ ಬಾರಿಯ ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರು ಬೇಕು ಮತ್ತು ಫ್ರಾಂಚೈಸಿ ಬಳಿ ಇರುವ ಮೊತ್ತ ಎಷ್ಟು ಎನ್ನುವ ಕುತೂಹಲ ಕ್ರಿಕೆಟ್​ ಅಭಿಮಾನಿಗಳದ್ದು. ಇದಕ್ಕೆ ಉತ್ತರ ಇಲ್ಲಿದೆ.

ಮುಂಬೈ ಇಂಡಿಯನ್ಸ್(15.25 ಕೋಟಿ ರೂ.)

ಐಪಿಲ್​ನ ಅತ್ಯಂತ ಯಶಸ್ವಿ ತಂಡವೆನಿಸಿದ ಮುಂಬೈ ಇಂಡಿಯನ್ಸ್​ ಬಳಿ ಫ್ರಾಂಚೈಸಿ ಬಳಿ 15.25 ಕೋಟಿ ರೂ. ಹಣವಿದೆ. ತಂಡವು ಈ ಬಾರಿಯ ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶ ಹೊಂದಿದೆ. ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

ಗುಜರಾತ್ ಟೈಟಾನ್ಸ್(38.15 ಕೋಟಿ ರೂ.)

ಒಂದು ಬಾರಿ ಚಾಂಪಿಯನ್​ ಮತ್ತು ಕಳೆದ ಬಾರಿ ರನ್ನರ್​ ಅಪ್​ ಗುಜರಾತ್​ ಟೈಟಾನ್ಸ್​ ಬಳಿ 38.15 ಕೋಟಿ ರೂ. ಉಳಿಕೆ ಹಣವಿದೆ. ತಂಡಕ್ಕೆ ಮಿನಿ ಹರಾಜಿನಲ್ಲಿ ಒಟ್ಟು 8 ಆಟಗಾರರನ್ನು ಖರೀದಿಸಬಹುದು. ಇದರಲ್ಲಿ 6 ಭಾರತೀಯ ಹಾಗೂ ಎಡರು ವಿದೇಶಿ ಆಟಗಾರ ಆಯ್ಕೆ ಮಾತ್ರ ಸಾಧ್ಯವಾಗಲಿದೆ.

ಚೆನ್ನೈ ಸೂಪರ್ ಕಿಂಗ್ಸ್(31.40 ಕೋಟಿ. ರೂ.)

ಮಹೇಂದ್ರ ಸಿಂಗ್​ ಧೋನಿ ಸಾರಥ್ಯದ ಚನ್ನೈ ಸೂಪರ್​ ಕಿಂಗ್ಸ್​ ತಂಡದ ಬಳಿ 31.40 ಕೋಟಿ. ರೂ ಹಣವಿದೆ. ಈ ಬಾರಿ 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

ಸನ್‌ರೈಸರ್ಸ್ ಹೈದರಾಬಾದ್(34 ಕೋಟಿ ರೂ.)

ಒಂದು ಬಾರಿಯ ಚಾಂಪಿಯನ್​ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಬಳಿ 34 ಕೋಟಿ ರೂ. ಹಣವಿದೆ. 6 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಬಿಡ್​ ಮಾಡಬಹುದು.

ಪಂಜಾಬ್ ಕಿಂಗ್ಸ್(29.10 ಕೋಟಿ ರೂ.)

ಹೆಸರು ಬದಲಿಸಿದರು ಅದೃಷ್ಟ ಬದಲಾಗದ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಬಳಿ 29.10 ಕೋಟಿ. ರೂ.ಹಣವಿದೆ. ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಬ್ಬರು ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(14.50 ಕೋಟಿ ರೂ.)

ಕನ್ನಡಿಗರ ನೆಚ್ಚಿನ ತಂಡ, ಸ್ಟಾರ್​ ಆಟಗಾರರ ಪಡೆಯನ್ನೇ ಹೊಂದಿದ್ದರೂ ಇದುವರೆಗೂ ಕಪ್​ ಗೆಲ್ಲದ ಐಪಿಎಲ್​ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ ಫ್ರಾಂಚೈಸಿ ಬಳಿ ಕೇವಲ 14.50 ಕೋಟಿ ರೂ. ಮಾತ್ರ ಉಳಿಕೆ ಹಣವಿದೆ. ಈ ಮೊತ್ತದಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸುವುದು ಕಷ್ಟ ಸಾಧ್ಯ. ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸಬಹುದು. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರು.

ಇದನ್ನೂ ಓದಿ IPL Auction 2024: ಮಿನಿ ಹರಾಜಿಗೆ ಕ್ಷಣಗಣನೆ; ಬಹುಬೇಡಿಕೆಯ ಟಾಪ್​ 5 ಆಟಗಾರರು ಯಾರು?

ರಾಜಸ್ಥಾನ್ ರಾಯಲ್ಸ್(14.50 ಕೋಟಿ ರೂ.)

ಚೊಚ್ಚಲ ಆವೃತ್ತಿಯ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿ ಬಳಿ 14.50 ಕೋಟಿ ರೂ. ಮೊತ್ತ ಬಾಕಿ ಇದೆ. ಈ ಬಾರಿ​ 8 ಸ್ಲಾಟ್​ಗಳಲ್ಲಿ ಮೂವರು ವಿದೇಶಿ ಹಾಗೂ 5 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಈಗಾಗಲೇ ಟ್ರೆಡಿಂಗ್​ ಮೂಲಕ ಲಕ್ನೋ ತಂಡದ ಅವೇಶ್​ ಖಾನ್​ ಅವರನ್ನು ಖರೀದಿಸಿ ದೇವದತ್ತ ಪಡಿಕ್ಕಲ್ ಅವರನ್ನು​ ಲಕ್ನೋಗೆ ಬಿಟ್ಟುಕೊಟ್ಟಿದೆ.

ಲಕ್ನೋ ಸೂಪರ್ ಜೈಂಟ್ಸ್(13.15 ಕೋಟಿ. ರೂ.)

ಕನ್ನಡಿಗ ಕೆ.ಎಲ್ ರಾಹುಲ್​ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಬಳಿ ಕೇವಲ 13.15 ಕೋಟಿ. ರೂ. ಮಾತ್ರ ಬಾಕಿ ಉಳಿದಿದ್ದು ಸ್ಟಾರ್​ ಆಟಗಾರರನ್ನು ಖರೀದಿ ಮಾಡಲು ಕಷ್ಟವಾಗಬಹುದು. ಈ ಬಾರಿಯ ಹರಾಜಿನಲ್ಲಿ ಒಟ್ಟು 6 ಆಟಗಾರರನ್ನು ಖರೀದಿ ಮಾಡಬಹುದು. ನಾಲ್ವರು ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರು.

ಇದನ್ನೂ ಓದಿ IPL Auction 2024: ಐಪಿಎಲ್​ ಹರಾಜಿನಲ್ಲಿರುವ ಕರ್ನಾಟಕದ ಕಲಿಗಳು ಇವರು…

ಡೆಲ್ಲಿ ಕ್ಯಾಪಿಟಲ್ಸ್

ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಬಳಿ 28.95 ಕೋಟಿ ರೂ. ಹಣವಿದೆ. ಈ ಬಾರಿ 9 ಆಟಗಾರರನ್ನು ಖರೀದಿ ಮಾಡಬಹುದು. ಇದರಲ್ಲಿ 4 ವಿದೇಶಿ ಆಟಗಾರರಿಗೆ, ಐವರು ಭಾರತೀಯ ಅವಕಾಶ ನೀಡಬಹುದು. ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ರಿಷಭ್​ ಪಂತ್​ 16ನೇ ಆವೃತ್ತಿಯ ಐಪಿಎಲ್​ನಿಂದ ದೂರ ಉಳಿದಿದ್ದರು. ಈ ಬಾರಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ. ಇದರಿಂದ ತಂಡ ಮತ್ತೆ ಬಲಿಷ್ಠವಾಗುವ ಸಾಧ್ಯತೆ ಇದೆ.

ಕೋಲ್ಕತ್ತಾ ನೈಟ್ ರೈಡರ್ಸ್(32.70 ಕೋಟಿ ರೂ.)

2 ಬಾರಿಯ ಚಾಂಪಿಯನ್​ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ಬಳಿ 32.70 ಕೋಟಿ ರೂ. ಉಳಿಕೆ ಹಣವಿದೆ. ಹೀಗಾಗಿ ಸ್ಟಾರ್​ ಆಟಗಾರರನ್ನು ತನ್ನ ತಂಡಕ್ಕೆ ಸೆಳೆಯಬಹುದು. ಗರಿಷ್ಠ 12 ಆಟಗಾರರ ಅಗತ್ಯವಿದೆ. ಇದರಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರಿಗೆ ಅವಕಾಶ ನೀಡಬಹುದು.

Exit mobile version