ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 2023 ರ 65ನೇ ಪಂದ್ಯದಲ್ಲಿ (IPL 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎಂಟು ವಿಕೆಟ್ಗಳಿಂದ ಸುಲಭವಾಗಿ ಮಣಿಸಿದೆ. ಈ ಮೂಲಕ ಪ್ಲೇಆಫ್ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಿಟ್ಟಿದೆ. 187 ರನ್ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿ 19.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು. ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 100 ರನ್ ಗಳಿಸಿದರೆ ನಾಯಕ ಫಾಫ್ ಡು ಪ್ಲೆಸಿಸ್ 47 ಎಸೆತಗಳಲ್ಲಿ 71 ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಆರ್ಸಿಬಿ ಬಳಗ ಹಾಲಿ ಅವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಏಳು ಗೆಲುವು ಸಾಧಿಸಿ 14 ಅಂಕಗಳೊಂದಿಗೆ ಐಪಿಎಲ್ 2023 ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಆರ್ಸಿಬಿ ಮೇಲಕ್ಕೇರುತ್ತಿದ್ದಂತೆ ಮುಂಬಯಿ ಇಂಡಿಯನ್ಸ್ ತಂಡ ಒಂದು ಸ್ಥಾನ ಕಳೆದುಕೊಂಡಿದೆ. ಆ ತಂಡವೂ 13 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದ್ದರೂ ಆರ್ಸಿಬಿಯ ನೆಟ್ರನ್ರೇಟ್ಗೆ +0.180 ಹೋಲಿಸಿದರೆ ಮುಂಬಯಿ (-0.128) ಮೈನಸ್ ರನ್ರೇಟ್ ಹೊಂದಿದೆ. ಹೀಗಾಗಿ ಕೆಳಕ್ಕೆ ಇಳಿದಿದೆ. ಹೀಗಾಗಿ ಈ ಎರಡೂ ತಂಡಗಳಿಗೆ ಪೈಪೋಟಿ ಜೋರಾಗಿದೆ. ಮೇ 21ರಂದು ಮುಂಬಯಿ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡ ಹಾಲಿ ಅವೃತ್ತಿಯಲ್ಲಿ ತಮ್ಮ ಕೊನೇ ಪಂದ್ಯಗಳನ್ನು ಆಡಲಿವೆ. ಆ ಪಂದ್ಯದ ಫಲಿತಾಂಶದ ಬಳಿಕ ಪ್ಲೇಆಫ್ ರೇಸ್ನ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆಗಳಿವೆ.
ಇದನ್ನೂ ಓದಿ : IPL 2023 : ಎಸ್ಆರ್ಎಚ್ ವಿರುದ್ಧ ಆರ್ಸಿಬಿ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ?
ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಈಗಾಗಲೇ ಪ್ಲೇಆಪ್ ಹಂತಕ್ಕೆ ಅರ್ಹತೆ ಪಡೆದಿದ್ದು, 13 ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಲಾ 15 ಅಂಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಸಿಎಸ್ಕೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಎಲ್ಎಸ್ಜಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಸಿಎಸ್ಕೆ ಹಾಗೂ ಎಲ್ಎಸ್ಜಿ ತಂಡಗಳು ಜಯ ಗಳಿಸಿದರೆ ಪ್ಲೇಆಫ್ಗೆ ನೇರ ಅರ್ಹತೆ ಪಡೆಯಲಿವೆ. ಆದರೆ ಆರ್ಸಿಬಿ ಮತ್ತು ಮುಂಬೈ ತಂಡಗಳಿಗೆ ಗರಿಷ್ಠ 16 ಅಂಕಗಳನ್ನು ಸಂಪಾದಿಸುವ ಅವಕಾಶ ಇರುವ ಕಾರಣ ಕೊನೇ ಪಂದ್ಯದ ಸೋಲು ಗೆಲುವುಗಳು ಇತ್ತಂಡಗಳಿಗೂ ನಿರ್ಣಾಯಕ.
ಉಳಿದ ತಂಡಗಳ ಕತೆಯೇನು?
ರಾಜಸ್ಥಾನ್ ರಾಯಲ್ಸ್, ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ತಲಾ 12 ಅಂಕಗಳನ್ನು ಹೊಂದಿವೆ. ತಮ್ಮ ಅಂತಿಮ ಪಂದ್ಯದಲ್ಲಿ ಪಿಬಿಕೆಎಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮತ್ತು ಕೆಕೆಆರ್ ಎಲ್ಎಸ್ಜಿ ವಿರುದ್ಧ ಸೆಣಸಲಿದೆ. ಪ್ರತಿ ತಂಡವು ತಮ್ಮ ಅರ್ಹತಾ ಅವಕಾಶಗಳನ್ನು ಹೆಚ್ಚಿಸಲು ಗೆಲುವಿನ ಅಂತರವನ್ನು ಹೆಚ್ಚಿಸಬೇಕಾಗಿದೆ. ಆರ್ಸಿಬಿ ಮತ್ತು ಮುಂಬೈ ತಂಡಗಳ ಸೋಲಿನ ಬಳಿಕ ಈ ತಂಡಗಳ ಪ್ಲೇಆಫ್ ಅವಕಾಶ ಸೃಷ್ಟಿಯಾಗಲಿವೆ.
ಶುಕ್ರವಾರ, ಪಿಬಿಕೆಎಸ್ ತಂಡ ಆರ್ಆರ್ ವಿರುದ್ಧ 66ನೇ ಪಂದ್ಯದಲ್ಲಿ ಸೆಣಸಲಿದೆ. ಇದು ಎರಡೂ ತಂಡಗಳ ಅಂತಿಮ ಲೀಗ್ ಪಂದ್ಯ, ಎರಡೂ ತಂಡಗಳಿಗೆ ಗೆಲುವು ಅಗತ್ಯವಾಗಿದೆ. ಗೆದ್ದ ನಂತರವೂ, ಅರ್ಹತೆಯನ್ನು ಖಚಿತವಾಗುವುದಿಲ್ಲ ಏಕೆಂದರೆ ಅದು ಇತರ ಫಲಿತಾಂಶಗಳು ಮತ್ತು ನೆಟ್ ರನ್ ರೇಟ್ ಅನ್ನು ಅವಲಂಬಿಸಿರುತ್ತದೆ.