ಮುಂಬಯಿ: ಐಪಿಎಲ್ನ 16ನೇ (IPL 2023) ಆವೃತ್ತಿಯ ಮೊದಲ ಪಂದ್ಯ ರೋಚಕವಾಗಿ ಮುಕ್ತಾಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಬಳಗವನ್ನು ಗುಜರಾತ್ ಟೈಟನ್ಸ್ ತಂಡ ಐದು ವಿಕೆಟ್ಗಳಿಂದ ಮಣಿಸಿದೆ. ಕೊನೇ ಓವರ್ನಲ್ಲಿ ಬೇಕಾದ 8 ರನ್ಗಳನ್ನು ಎರಡೇ ಎಸೆತದಲ್ಲಿ ಮಾಡಿ ಮುಗಿಸಿದೆ ಗುಜರಾತ್ ತಂಡ. ಈ ಮೂಲಕ ಐಪಿಎಲ್ ಟೂರ್ನಿ ರೋಚಕವಾಗಿ ಶುಭಾರಂಭಗೊಂಡಿದೆ. ಈ ಖುಷಿಯಲ್ಲಿರುವ ಅಭಿಮಾನಿಗಳಿಗೆ ಶನಿವಾರ (ಏಪ್ರಿಲ್1) ಡಬಲ್ ಧಮಾಕ. ವಾರಾಂತ್ಯದಲ್ಲಿ ಎರಡು ಪಂದ್ಯಗಳು ನಡೆಯಲಿದ್ದು ಪ್ರೇಕ್ಷಕರಿಗೆ ಮಧ್ಯಾಹ್ನದ ಬಳಿಕದಿಂದ ಕ್ರಿಕೆಟ್ನ ರಸದೌತಣ ಸಿಗಲಿದೆ.
ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕೊತಾ ನೈಟ್ ರೈಡರ್ಸ್ ತಂಡಗಳು ಗೆಲುವಿಗಾಗಿ ಜಿದ್ದಿಗೆ ಬೀಳಲಿವೆ. ಕೋಲ್ಕತಾ ತಂಡಕ್ಕೆ ಅನನುಭವಿ ನಿತೀಶ್ ರಾಣಾ ನಾಯಕರಾಗಿದ್ದರೆ, ಪಂಜಾಬ್ ತಂಡಕ್ಕೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಕ್ಯಾಪ್ಟನ್. ಇವರಿಬ್ಬರ ಬಳಗ ಭರ್ಜರಿ ಹೋರಾಟ ಸಂಘಟಿಸಿ ಐಪಿಎಲ್ ಸಂಭ್ರಮಕ್ಕೆ ಕಿಚ್ಚು ಹಚ್ಚಲಿದೆ.
ಎರಡನೇ ಪಂದ್ಯದಲ್ಲಿ ಕೆ.ಎಲ್ ರಾಹುಲ್ ನೇತೃತ್ವದ ಲಕ್ನೊ ಸೂಪರ್ ಜೈಂಟ್ಸ್ ಹಾಗೂ ಡೇವಿಡ್ ವಾರ್ನರ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಈ ಪಂದ್ಯವೂ ಅತ್ಯಂತ ರೋಚಕವಾಗಿ ನಡೆಯುವ ಲಕ್ಷಣಗಳಿವೆ.
ಪಂಜಾಬ್ vs ಕೋಲ್ಕೊತಾ ತಂಡಗಳ ಬಲಾಬಲ
ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಯುವ ಆಟಗಾರರನ್ನೇ ಹೊಂದಿದೆ. ಕಳೆದ ಬಾರಿ ಪಂಜಾಬ್ ತಂಡಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕರಾಗಿದ್ದರು. ಈ ಬಾರಿ ಶಿಖರ್ ಧವನ್ಗೆ ಹೊಣೆಗಾರಿಕೆ ವಹಿಸಲಾಗಿದೆ. ಭಾರತ ಏಕ ದಿನ ತಂಡದ ನಾಯಕತ್ವ ವಹಿಸಿ ಅಭ್ಯಾಸ ಹೊಂದಿರುವ ಅವರು ಈ ಪಂದ್ಯದಲ್ಲಿ ಮತ್ತೊಂದು ಬಾರಿ ತಮ್ಮ ನಾಯಕತ್ವದ ಪಟ್ಟುಗಳನ್ನು ಪ್ರದರ್ಶಿಸಲಿದ್ದಾರೆ. ಶಾರುಖ್ ಖಾನ್, ಭಾನುಕಾ ರಾಜಪಕ್ಷ, ಸಿಕಂದರ್ ರಾಜಾ. ಸ್ಯಾಮ್ ಕರ್ರನ್, ರಿಶಿ ಧವನ್, ರಾಹುಲ್ ಚಾಹರ್ ಹಾಗೂ ವೇಗಿ ಅರ್ಶ್ದೀಪ್ ಸಿಂಗ್ ಈ ತಂಡದ ಬಲಶಾಲಿ ಆಟಗಾರರು. ಅತ್ತ ಕೆಕೆಆರ್ ತಂಡಕ್ಕೆ ಸವಾಲು ಹೆಚ್ಚಿದೆ. ಕಾಯಂ ನಾಯಕರ ಕೊರತೆಯಲ್ಲಿ ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ಸುನೀಲ್ ನರೈನ್, ಶಾರ್ದುಲ್ ಠಾಕೂರ್, ವರುಣ್ ಚಕ್ರವರ್ತಿ, ರಮನುಲ್ಲಾ ಗುರ್ಬಜ್, ಲಾಕಿ ಫರ್ಗ್ಯೂಸನ್, ಉಮೇಶ್ ಯಾದವರ್ ಅವರ ಶಕ್ತಿಯನ್ನು ಬಳಸಿಕೊಂಡು ಗೆಲ್ಲಬೇಕಾಗಿದೆ.
ಪಂದ್ಯದ ಸ್ಥಳ : ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ ಮೊಹಾಲಿ
ಸಮಯ: ಮಧ್ಯಾಹ್ನ 3.30
ಲಕ್ನೊ vs ಡೆಲ್ಲಿ
ಲಕ್ನೊ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯ ಹೆಚ್ಚು ರೋಚಕವಾಗಿ ನಡೆಯುವ ಸಾಧ್ಯತೆಗಳಿವೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಲಖನೌ ತಂಡದಲ್ಲಿ ಕ್ವಿಂಟನ್ ಡಿಕಾಕ್, ನಿಕೋಲಸ್ ಪೂರನ್, ಮಾರ್ಕ ಸ್ಟೋಯ್ನಿಸ್, ಆಯುಶ್ ಬದೋನಿ, ಕೃಣಾಲ್ ಪಾಂಡ್ಯ, ದೀಪಕ್ ಹೂಡ, ಜಯದೇವ್ ಉನಾದ್ಕಟ್, ಆವೇಶ್ ಖಾನ್, ರವಿ ಬಿಷ್ಟೋಯಿ, ಅಮಿತ್ ಮಿಶ್ರಾ ಹೀಗೆ ಅನೇಕ ಆಯ್ಕೆಗಳಿವೆ. ಇತ್ತ ಡೆಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಪಿಲಿಪ್ ಸಾಲ್ಟ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಇಶಾಂತ್ ಶರ್ಮಾ, ಕುಲ್ದೀಪ್ ಯಾದವ್ ತಂಡದಲಿದ್ದಾರೆ.
ಸ್ಥಳ: ಏಕನಾ ಕ್ರಿಕೆಟ್ ಸ್ಟೇಡಿಯಮ್, ಲಖನೌ
ಸಮಯ : ಸಂಜೆ 7.30