Site icon Vistara News

IPL 2023 : ಕೆಕೆಆರ್​ ವಿರುದ್ಧ ಸೋಲಿನ ಸಿಟ್ಟಿಗೆ ವಿರಾಟ್​ ಕೊಹ್ಲಿ ಬೈದಿದ್ದು ಯಾರಿಗೆ?

Who did Virat Kohli scold for the loss to KKR?

Virat kohli

ಬೆಂಗಳೂರು: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023 ) ಮತ್ತೊಂದು ಸೋಲಿಗೆ ಒಳಗಾಗಿದೆ. ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ 21 ರನ್​​ಗಳಿಂದ ಸೋಲುವ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಈ ಸೋಲಿನಿಂದ ಆರ್​​ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ ಸಿಕ್ಕಾಪಟ್ಟೆ ಸಿಟ್ಟಿಗೆ ಒಳಗಾಗಿದ್ದಾರೆ. ತಂಡದ ಸೋಲಿಗೆ ಕಾರಣ ಯಾರೆಂಬುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಪಂದ್ಯದ ಮುಗಿದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ, ನಾವು ಫೀಲ್ಡಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದೇವೆ. ಈ ಕಾರಣದಿಂದಾಗಿ 25 ರಿಂದ 30 ರನ್‌ಗಳನ್ನು ಎದುರಾಳಿ ತಂಡಕ್ಕೆ ಸುಲಭವಾಗಿ ಬಿಟ್ಟುಕೊಟ್ಟೆವು. ಹಾಗಾಗಿ ಈ ಸೋಲಿಗೆ ನಾವು ಅರ್ಹರಾಗಿದ್ದೇವೆ ಎಂದು ಹೇಳಿದ್ದಾರೆ.

ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ವಾನಿಂದು ಹಸರಂಗ (24 ಕ್ಕೆ 2) ಹಾಗೂ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ (41 ಕ್ಕೆ 2) ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಆದರೆ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಸೇರಿದಂತೆ ಕೆಲವರು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರು. ಇದು ಆರ್‌ಸಿಬಿಗೆ ಬಾರಿ ಹಿನ್ನಡೆ ತಂದೊಡ್ಡಿತು. ಇದರ ಲಾಭ ಪಡೆದ ಕೆಕೆಆರ್ ಬರೋಬ್ಬರಿ 200 ರನ್‌ಗಳನ್ನು ಕಲೆ ಹಾಕಿತು. ಆದರೆ, ಆರ್‌ಸಿಬಿ 179 ರನ್​ಗಳಿಗೆ ಸೀಮಿತಗೊಂಡು ಸೋಲೊಪ್ಪಿಕೊಂಡಿತು.

ಇದನ್ನೂ ಓದಿ : Virat Kohli : ಆರ್​ಸಿಬಿ ನಾಯಕತ್ವ ತ್ಯಜಿಸಿದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಏನಂದರು ಅವರು?

,”ಪ್ರಾಮಾಣಿಕವಾಗಿ ಹೇಳುವುದಾದರೆ ನಾವೇ ಪಂದ್ಯವನ್ನು ಕೆಕೆಆರ್​​ ತಂಡಕ್ಕೆ ಬಿಟ್ಟು ಕೊಟ್ಟಿದ್ದೇವೆ. ನಮ್ಮ ಪ್ರದರ್ಶನವನ್ನು ವಿಶ್ಲೇಷಿಸಿ ನೋಡುವುದಾದರೆ ನಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನಿರ್ಣಾಯಕ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ 25ರಿಂದ 30 ಹೆಚ್ಚುವರಿ ರನ್​ ಬಿಟ್ಟುಕೊಟ್ಟೆವು, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬ್ಯಾಟರ್​ಗಳ ಬಗ್ಗೆಯೂ ನಿರಾಸೆ

“ನಾವು ಸುಖಾಸುಮ್ಮನೆ ವಿಕೆಟ್​ ಒಪ್ಪಿಸಿದೆವು. ನಾವು ಔಟಾದ ಎಸೆತಗಳು ಕಷ್ಟವಾಗಿರಲಿಲ್ಲ. ಆದರೆ, ಫೀಲ್ಡರ್​ಗಳು ಇರುವ ಕಡೆಗೆ ಹೊಡೆದು ಕ್ಯಾಚ್​ ನೀಡಿದೆವು. ನಮಗೆ ಒಂದೇ ಒಂದು ದೊಡ್ಡ ಜೊತೆಯಾಟದ ಅಗತ್ಯವಿತ್ತು. ಅದಕ್ಕೆ ಯಾವ ಬ್ಯಾಟರ್​ಗಳು ಕೂಡ ಪೂರಕವಾಗಿ ಆಡಲಿಲ್ಲ ಎಂದು ಹೇಳಿದರು.

“ನಾವು ಗರಿಷ್ಠ ಪ್ರದರ್ಶನ ನೀಡುವ ಮೂಲಕ ಪಂದ್ಯ ಗೆಲ್ಲುವುದು ಅಗತ್ಯವಾಗಿದೆ. ನಮಗೆ ಸೋಲು, ಗೆಲುವಿನ ಮಿಶ್ರ ಫಲ ಸಿಕ್ಕಿದೆ. ಇನ್ನು ಮುಂದೆ ಟೂರ್ನಿಯ ನಿರ್ಣಾಯಕ ಹಂತ. ಹೀಗಾಗಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅವಶ್ಯಕತೆ ಇದೆ, ಎಂದು ಹೇಳಿದರು.

ಪಂದ್ಯದ ಫಲಿತಾಂಶ ಹೀಗಿತ್ತು

ಪಂದ್ಯದಲ್ಲಿ ಆರ್​ಸಿಬಿ ತಂಡ ಕೋಲ್ಕೊತಾ ನೈಟ್​ ರೈಡರ್ಸ್ ವಿರುದ್ಧ 21 ರನ್​ಗಳ ಸೋಲಿಗೆ ಒಳಗಾಯಿತು. ಹಾಲಿ ಆವೃತ್ತಿಯ ಐಪಿಎಲ್​ನ ಮೊದಲ ಚರಣದ ಪಂದ್ಯದಲ್ಲೂ ಆರ್​​ಸಿಬಿ ತಂಡ ಕೋಲ್ಕೊತಾಗೆ ಮಣಿದಿತ್ತು. ಆ ಪಂದ್ಯ ಈಡನ್​ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ನಡೆದಿತ್ತು.

ಕೋಲ್ಕೊತಾ ತಂಡದ ಆರಂಭಿಕ ಬ್ಯಾಟರ್​ ಜೇಸನ್​ ರಾಯ್​ (56) ಅವರ ಅರ್ಧ ಶತಕ ಹಾಗೂ ನಾಯಕ ನಿತೀಶ್​ ರಾಣಾ (48) ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಗೆಲುವಿನ ರೂವಾರಿಗಳೆಸಿಕೊಂಡರು. ನಾರಾಯಣ ಜಗದೀಶನ್​ (27) ಹಾಗೂ ವೆಂಕಟೇಶ್ ಅಯ್ಯರ್​ (31) ಕೂಡ ಆತಿಥೇಯರ ಬಳಕ್ಕೆ ದೊಡ್ಡ ಮೊತ್ತದ ಗುರಿಯೊಡ್ಡಲು ನೆರವಾದರು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಆರ್​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಕೆಕೆಆರ್ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ​ ಬಾರಿಸಿತು. ಗುರಿ ಬೆನ್ನಟ್ಟಿದ ಆರ್​​ಸಿಬಿ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 178 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​​ಸಿಬಿ ತಂಡ ಯಾವ ಹಂತದಲ್ಲೂ ಕೆಚ್ಚೆದೆ ತೋರಲಿಲ್ಲ. ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿತು. ವಿರಾಟ್​ ಕೊಹ್ಲಿ (54) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಐದನೇ ಅರ್ಧ ಶತಕ ಬಾರಿಸಿದ್ದೇ ಪಂದ್ಯದ ವಿಶೇಷ.

Exit mobile version