ಕೋಲ್ಕೊತಾ: ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಪ್ಲೇಆಫ್ಗೇರುವ ಅವಕಾಶವನ್ನು ಜೀವಂತವಾಗಿರಿಸಲು ಜಿದ್ದಿಗೆ ಬಿದ್ದಿರುವ ಕೋಲ್ಕೊತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮೇ 8 ರಂದು ಪರಸ್ಪರ ಮುಖಾಮುಖಿಯಾಗಿವೆ. ಇದು ಹಾಲಿ ಆವೃತ್ತಿಯ 53ನೇ ಪಂದ್ಯವಾಗಿದೆ. ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಮ್ನಲ್ಲಿ ಈ ಹಣಾಹಣಿ ಆಯೋಜನೆಗೊಂಡಿದ್ದು, ದುರ್ಬಲರ ನಡುವಿನ ಹೋರಾಟ ಎಂದೇ ಹೇಳಬಹುದು.
ನಿತೀಶ್ ರಾಣಾ ನೇತೃತ್ವದ ತಂಡವು ತನ್ನ ಹಿಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಕಂಡಿತ್ತು. ಐದುರನ್ಗಳಿಂದ ಹೈದರಾಬಾದ್ ವಿರುದ್ಧ ಗೆದ್ದ ಕಾರಣ ಖುಷಿಯಲ್ಲಿದೆ. ಅಂತೆಯೇ ತಂಡದ ಆರಂಭಿಕ ಬ್ಯಾಟರ್ ಜೇಸನ್ ರಾಯ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ನಾಯಕ ನಿತೀಶ್ ರಾಣಾ ಹಾಗೂ ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟರ್ ರಿಂಕು ಸಿಂಗ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ, ವೆಸ್ಟ್ ಇಂಡೀಸ್ ದೈತ್ಯ ಆ್ಯಂಡ್ರೆ ರಸೆಲ್ ನ್ನೂ ಗಮನಾರ್ಹ ಕೊಡುಗೆ ನೀಡದ ಕಾರಣ ಅವರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಬೌಲರ್ಗಳ ವಿಷಯಕ್ಕೆ ಬಂದರೆ, ವರುಣ್ ಚಕ್ರವರ್ತಿ ತಮ್ಮ ಫಾರ್ಮ್ ಅನ್ನು ಮರಳಿ ಪಡೆದಿದ್ದಾರೆ. ಅವರು ಹಾಲಿ ಆವೃತ್ತಿಯ ಐಪಿಎಲ್ನ ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಈ ಬಲಗೈ ಸ್ಪಿನ್ನರ್ ಹತ್ತು ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಪಡೆದಿದ್ದಾರೆ. ಜತೆಗೆ ಬೌಲಿಂಗ್ ದಾಳಿಯಲ್ಲಿ ಎದುರಾಳಿಗೆ ಹೆಚ್ಚು ರನ್ ಬಿಟ್ಟುಕೊಟ್ಟಿಲ್ಲ. ಈ ತಂಡದ ವೇಗಿ ಶಾರ್ದೂಲ್ ಠಾಕೂರ್ ಹಿಂದಿನ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದಾರೆ. ಅಲ್ಲದೆ ಡೆತ್ ಓವರ್ಗಳಲ್ಲಿ ತಂಡವನ್ನು ಕಾಪಾಡಿದ್ದಾರೆ. ಅವರು ಫಾರ್ಮ್ ಉಳಿಸಿಕೊಂಡರೆ ಕೆಕೆಆರ್ ಬಳಗಕ್ಕೆ ಹೆಚ್ಚಿನ ಅನುಕೂಲ ಆಗಲಿದೆ.
ಪಂಜಾಬ್ ಸಾಮರ್ಥ್ಯ ಹೇಗಿದೆ?
ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 214 ರನ್ ಗಳಿಸಿದ್ದರೂ, ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳಿಂದ ಸೋತಿತ್ತು. ಈ ಮೂಲಕ ಬೌಲಿಂಗ್ ದೌರ್ಬಲ್ಯ ಪ್ರದರ್ಶಿಸಿತ್ತು. ಲಿಯಾಮ್ ಲಿವಿಂಗ್ಸ್ಟನ್ ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿದ್ದಾರೆ. ವಿಕೆಟ್ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕೂಡ ಸ್ಫೋಟಿಸುತ್ತಿದ್ದಾರೆ. ಆದಾಗ್ಯೂ, ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಐದು ಬಾರಿಯ ಚಾಂಪಿಯನ್ಸ್ ಮುಂಬೈ ವಿರುದ್ಧ 3.5 ಓವರ್ಗಳಲ್ಲಿ 66 ರನ್ ನೀಡಿ ದುಬಾರಿ ಎನಿಸಿದ್ದರು. ಅವರೇ ಸೋಲಿಗೆ ಕಾರಣರೂ ಆಗಿದ್ದರು. ಹೀಗಾಗಿ ಕೆಕೆಆರ್ ವಿರುದ್ಧ ಅವರು ಎಚ್ಚೆತ್ತುಕೊಳ್ಳಬೇಕಾಗಿದೆ. ಉಳಿದ ಬೌಳರ್ಗಳು ಕೂಡ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಸುಧಾರಿಸಿಕೊಳ್ಳಬೇಕಾಗಿದೆ.
ಇದನ್ನೂ ಓದಿ: IPL 2023 : ವೃದ್ಧಿಮಾನ್ ಸಾಹಸಕ್ಕೆ ಶಹಬ್ಬಾಸ್ ಎಂದ ವಿರಾಟ್ ಕೊಹ್ಲಿ
ಈಡನ್ ಗಾರ್ಡನ್ಸ್ ಪಿಚ್ ಹೇಗಿದೆ?
ಈಡನ್ ಗಾರ್ಡನ್ಸ್ ಪಿಚ್ ಪ್ರಸಕ್ತ ಋತುವಿನಲ್ಲಿ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಮಧ್ಯಮ ಓವರ್ಗಳಿಗೆ ಸ್ಪಿನ್ನರ್ಗಳು ಸ್ವಲ್ಪ ಅಪಾಯಕಾರಿಯಾಗಬಹುದು. 200 ಸಮೀಪದ ಮೊತ್ತದಿಂದ ಮಾತ್ರ ತಂಡವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಹೆಚ್ಚು ಅನುಕೂಲ.
ಸಂಭಾವ್ಯ ಆಡುವ ಬಳಗ
ಕೋಲ್ಕೊತಾ ನೈಟ್ ರೈಡರ್ಸ್ : ಜೇಸನ್ ರಾಯ್, ರಹ್ಮನುಲ್ಲಾ ಗುರ್ಬಜ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರ್ರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್ದೀಪ್ಸಿಂಗ್.
ತಂಡಗಳ ಮುಖಾಮುಖಿ
ಇತ್ತಂಡಗಳ ಒಟ್ಟು ಮುಖಾಮುಖಿ- 31
ಕೋಲ್ಕೊತಾ ನೈಟ್ ರೈಡರ್ಸ್ ಗೆಲುವು- 20
ಪಂಜಾಬ್ ಕಿಂಗ್ಸ್ ಗೆಲುವು- 11
ಪಂದ್ಯದ ವಿವರ
ಪಂದ್ಯದ ಸಮಯ: ಸಂಜೆ 07:30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್