ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ(team india ಆಯ್ಕೆಯಾದ ಆಕಾಶ್ ದೀಪ್(Akash Deep) ಯಾರು? ಇವರ ಸಾಧನೆ ಏನು? ದೇಶೀಯ ಕ್ರಿಕೆಟ್ನಲ್ಲಿ ಯಾವ ತಂಡದ ಪರ ಆಡುತ್ತಾರೆ? ಹೀಗೆ ಹಲವು ಪ್ರಶ್ನೆಗಳು ಮತ್ತು ಕುತೂಹಲ ಟೀಮ್ ಇಂಡಿಯಾ ಅಭಿಮಾನಿಗಳದ್ದು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
27 ವರ್ಷದ ಆಕಾಶ್ ದೀಪ್ ಬಿಹಾರ ಮೂಲದ ಕ್ರಿಕೆಟಿಗನಾಗಿದ್ದರೂ ದೇಶೀಯ ಕ್ರಿಕೆಟ್ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಡೆಹ್ರಿ ಪಟ್ಟಣದಲ್ಲಿ ಜನಿಸಿದ ಆಕಾಶ್ ದೀಪ್ ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಅನಧಿಕೃತ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಇದಲ್ಲದೇ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ 2 ವಿಕೆಟ್ ಕೂಡ ಪಡೆದಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ
ಆಕಾಶ್ ದೀಪ್ 2019ರಲ್ಲಿ ಆಂಧ್ರಪ್ರದೇಶ ವಿರುದ್ಧದ ಪಂದ್ಯವಾನ್ನಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 29 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 23.18 ಬೌಲಿಂಗ್ ಸರಾಸರಿಯಲ್ಲಿ 103 ವಿಕೆಟ್ ಪಡೆದಿದ್ದಾರೆ. ಜತೆಗೆ ನಾಲ್ಕು ಬಾರಿ ಇನ್ನಿಂಗ್ಸ್ವೊಂದರಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಂದು ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಕೀರ್ತಿಯೂ ಇವರದ್ದಾಗಿದೆ.
ಆರ್ಸಿಬಿ ಆಟಗಾರ
ಇಂಡಿಯನ್ ಪ್ರೀಮಿಯರ್ ಲೀಗ್(IPL)ನಲ್ಲಿ ಆಕಾಶ್ ದೀಪ್ ಆರ್ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2022ರಲ್ಲಿ ಆರ್ಸಿಬಿ ಪರ ಆಡಿದ ಅವರು ಇದುವರೆಗೆ 7 ಪಂದ್ಯಗಳನ್ನಾಡಿ 5 ವಿಕೆಟ್ ಉರುಳಿಸಿದ್ದಾರೆ. 45 ರನ್ಗೆ 3 ವಿಕೆಟ್ ಕಿತ್ತದ್ದು ಇವರ ಐಪಿಎಲ್ನ ವೈಯಕ್ತಿಕ ಬೌಲಿಂಗ್ ದಾಖಲೆಯಾಗಿದೆ.
ಇದನ್ನೂ ಓದಿ IND vs ENG: ಕೊನೆಗೂ ಭಾರತ ತಂಡ ಪ್ರಕಟ; ವಿರಾಟ್ ಕೊಹ್ಲಿ ಸರಣಿಯಿಂದಲೇ ಔಟ್
ಮೂರನೇ ಪಂದ್ಯದಲ್ಲಿ ಆಡುವ ಸಾಧ್ಯತೆ?
ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾದ ಆಕಾಶ್ ದೀಪ್ ಮೂರನೇ ಪಂದ್ಯದಲ್ಲಿ ಆಡುವ ಸಾಧ್ಯತೆಯೂ ಇದೆ. ದ್ವಿತೀಯ ಪಂದ್ಯದಲ್ಲಿ ಆಡಿದ ಮುಖೇಶ್ ಕುಮಾರ್ ನಿರೀಕ್ಷಿತ ಮಟ್ಟದ ಬೌಲಿಂಗ್ ದಾಳಿ ನಡೆಸಿ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು. ಮತ್ತೊಂದೆಡೆ ಮೂರನೇ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಬುಮ್ರಾ ಮತ್ತು ಮುಖೇಶ್ ಇಬ್ಬರಲ್ಲಿ ಯಾರಾದರು ಮೂರನೇ ಪಂದ್ಯದಿಂದ ಹೊರಗುಳಿದರೆ ಆಗ ಆಕಾಶ್ ದೀಪ್ಗೆ ಅವಕಾಶ ಖಚಿತ ಎನ್ನಬಹುದು.
3⃣ Royal Challengers feature in the squad for the remaining 3⃣ Tests 👊
— Royal Challengers Bangalore (@RCBTweets) February 10, 2024
Congratulations to Akash Deep on receiving his maiden Test call up 🤩#PlayBold #TeamIndia #INDvENG #IndianCricket pic.twitter.com/TGYVt01wx4
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.