ಒರೆಗಾನ್: ಶುಕ್ರವಾರ ಬೆಳಗ್ಗೆ ಎದ್ದ ಭಾರತದ ಕ್ರೀಡಾ ಪ್ರೇಮಿಗಳಿಗೆ ಮೂವರು ಶುಭ ಸುದ್ದಿ ಕೊಟ್ಟಿದ್ದಾರೆ. ಅವರೇ ನೀರಜ್ ಚೋಪ್ರಾ, ರೋಹಿತ್ ಯಾದವ್ ಹಾಗೂ ಎಲ್ದೋಸ್ ಪಾಲ್. World Athletics Championships 2022 ಸ್ಪರ್ಧೆಯಲ್ಲಿ ನೀರಜ್ ಹಾಗೂ ರೋಹಿತ್ ಜಾವೆಲಿನ್ ಎಸೆತ ಸ್ಪರ್ಧೆಯ ಫೈನಲ್‌ಗೆ ಪ್ರವೇಶ ಪಡೆದಿದ್ದರೆ, ಎಲ್ದೋಸ್ ಪಾಲ್ ಟ್ರಿಪಲ್ ಜಂಪನಲ್ಲಿ ಪ್ರಶಸ್ತಿಗೆ ಸುತ್ತಿಗೆ ಎಂಟ್ರಿ ಪಡೆದುಕೊಂಡಿದ್ದಾರೆ.
ಎಲ್ದೋಸ್ World Athletics Championships ಕೂಟದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಫೈನಲ್‌ಗೆ ಏರಿದ ಮೊದಲ ಭಾರತೀಯ ಅಥ್ಲೀಟ್. ೨೫ ವರ್ಷದ ಈ ಟ್ರಿಪಲ್ ಜಂಪ್ ಪಟು, 16.68 ಮೀಟರ್ ದೂರಕ್ಕೆ ಜಿಗಿಯುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದ ಒಟ್ಟು ೧೨ ಸ್ಪರ್ಧಿಗಳ ಪಟ್ಟಿಯಲ್ಲಿ ಕೊನೆಯರವರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲಿ 16.12 ಮೀಟರ್ ದೂರ ಜಿಗಿದ ಎಲ್ದೋಸ್, ಎರಡನೇ ಪ್ರಯತ್ನದಲ್ಲಿ 16.68 ಮೀಟರ್ ಜಿಗಿದರು. ಇದು ಅರ್ಹತಾ ಸುತ್ತಿನಲ್ಲಿ ಅವರ ಉತ್ತಮ ಪ್ರದರ್ಶನವಾಗಿದ್ದು, ಅದರ ಆಧಾರದಲ್ಲಿ ಫೈನಲ್‌ಗೆ ಎಂಟ್ರಿ ಪಡೆದುಕೊಂಡರು. ಎಲ್ದೋಸ್ ಮೂರನೇ ಹಾಗೂ ಕೊನೇ ಜಂಪ್‌ನಲ್ಲಿ 16.34 ಮೀಟರ್ ಮಾತ್ರ ಜಿಗಿಯಲು ಯಶಸ್ವಿಯಾದರು.
India🇮🇳 created history at @WCHoregon22 !
— Anurag Thakur (@ianuragthakur) July 22, 2022
✅ For the 1st time two Indian Javelin throwers reach the Final at World Championships @Neeraj_chopra1 (88.39m)@RohitJavelin (80.42m)
✅️ Eldhose Paul becomes the 1st Indian to reach the Men’s Triple Jump Final (16.68m) pic.twitter.com/DJeGy7GCJg
ಎಲ್ದೋಸ್ ಎಲ್ಲಿಯವರು?
ಎಲ್ದೋಸ್ ಪಾಲ್ ಕೇರಳದ ಎರ್ನಾಕುಲಮ್‌ನವರು. ಅವರು ಟ್ರಿಪಲ್ ಜಂಪ್ ಕ್ಷೇತ್ರಕ್ಕೆ ಏಕಾಏಕಿ ಪರಿಚಿತಗೊಂಡ ಅಥ್ಲೀಟ್. ೨೫ ವರ್ಷದ ಕೇರಳದ ಪ್ರತಿಭೆ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದ ನಡುವೆ ಕ್ರೀಡಾ ಕ್ಷೇತ್ರಕ್ಕೆ ಪ್ರವೇಶ ಪಡೆದುಕೊಂಡರು. ಕಾಲೇಜ್‌ನಲ್ಲಿ ನಡೆದ ಅಥ್ಲೆಟಿಕ್ಸ್ ಕೂಟದಲ್ಲಿ ಅವರ ಕ್ರೀಡಾ ಪ್ರತಿಭೆ ಅನಾವರಣಗೊಂಡಿತ್ತು. ಕಾಲೇಜು ಬಿಟ್ಟ ಅವರು ಟಿ.ಪಿ ಒಸೇಫ್ ಅವರಿಂದ ತರಬೇತಿ ಪಡೆದು ಪೂರ್ಣ ಪ್ರಮಾಣದ ಅಥ್ಲೀಟ್ ಎನಿಸಿಕೊಂಡರು. ಆರಂಭದಲ್ಲಿ ಪೋಲ್ ವಾಲ್ಟ್ ಅಭ್ಯಾಸ ನಡೆಸಿದ್ದ ಅವರು ಬಳಿಕ ಟ್ರಿಪಲ್ ಜಂಪ್ ಕಡೆಗೆ ವಾಲಿದರು.
ಇಂಡಿಯನ್ ಗ್ರ್ಯಾನ್‌ಪಿಯಲ್ಲಿ ಅವರು ಮುಕ್ತ ವಿಭಾಗಕ್ಕೆ ಎಂಟ್ರಿ ಪಡೆದರು. ಇಂಡಿಯನ್ ಓಪನ್‌ನಲ್ಲಿ ಅವರು 16.93 ಮೀಟರ್ ದೂರ ಜಿಗಿದಿದ್ದರು. ಇದು ಇಂಡಿಯನ್ ಗ್ರ್ಯಾನ್‌ಪಿಗಿಂತ 0.2 ಸೆಂಟಿ ಮೀಟರ್ ಉತ್ತಮ ಪ್ರದರ್ಶನ. ಈ ಸಾಧನೆಯೊಂದಿಗೆ ಅವರು ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು.
೬ ಮಂದಿ ಫೈನಲ್‌ಗೆ ಲಗ್ಗೆ: ಭಾರತದ ಕ್ರೀಡಾಪಟುಗಳು ಈ ಸಲದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್‌ನಲ್ಲಿ ಇದುವರೆಗಿನ ಅಮೋಘ ಪ್ರದರ್ಶನವನ್ನು ದಾಖಲಿಸಿದ್ದಾರೆ. ಇದುವರೆಗೆ ೬ ಮಂದಿ ನಾನಾ ಸ್ಪರ್ಧೆಗಳಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶ್ರೀ ಶಂಕರ್ ಅವರಿಗೆ ಫೈನಲ್‌ನಲ್ಲಿ ಪದಕ ಕೈತಪ್ಪಿದೆ. ಉಳಿದ ಐವರ ಫೈನಲ್ ಪಂದ್ಯಗಳು ನಡೆಯಲಿದೆ. ವಿವರ ಇಂತಿದೆ
- ಶ್ರೀಶಂಕರ್- ಲಾಂಗ್ ಜಂಪ್
- ನೀರಜ್ ಚೋಪ್ರಾ- ಜಾವೆಲಿನ್ ಎಸೆತ
- ರೋಹಿತ್ ಯಾದವ್- ಜಾವೆಲಿನ್ ಎಸೆತ
- ಎಲ್ದೋಸ್ ಪಾಲ್ -ಟ್ರಿಪಲ್ ಜಂಪ್
- ಅವಿನಾಶ್ ಸಬಲ್-ಸ್ಟೀಪಲ್ಚೇಸ್
- ಅನ್ನು ರಾಣಿ- ಮಹಿಳೆಯರ ಜಾವೆಲಿನ್ ಎಸೆತ
ಭಾರತಕ್ಕೆ ಇದುವರೆಗೆ ಸಿಕ್ಕಿದ್ದು ಒಂದು ಕಂಚಿನ ಪದಕ ಮಾತ್ರ!
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ಸ್ ಇತಿಹಾಸದಲ್ಲಿ ಭಾರತಕ್ಕೆ ಇದುವರೆಗೆ ಸಿಕ್ಕಿದ್ದು ೨೦೦೩ರಲ್ಲಿ ಅಂಜು ಬಾಬಿ ಜಾರ್ಜ್ ಅವರು ಲಾಂಗ್ ಜಂಪ್‌ನಲ್ಲಿ ಗಳಿಸಿದ ಕಂಚಿನ ಪದಕ ಮಾತ್ರ. ಆದರೆ ಇದು ಭಾರತೀಯ ಕ್ರೀಡಾ ಇತಿಹಾಸ ದೃಷ್ಟಿಯಿಂದ ಮಹತ್ವದ್ದಾಗಿದೆ. ಹೀಗಾಗಿ ಇದೀಗ ಜಾವೆಲಿನ್ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೇಲೆ ಇಡೀ ದೇಶದ ಗಮನ ಹರಿದಿದೆ. ಭಾರತಕ್ಕೆ ಕ್ರೀಡಾಕೂಟದ ಇತಿಹಾಸದಲ್ಲೇ ಎರಡನೇ ಪದಕ ತಂದುಕೊಡುತ್ತಾರೆಯೇ ಎಂಬ ಕಾತರ ಹೆಚ್ಚಿದೆ.
ಇದನ್ನೂ ಓದಿ | World Athletics Championships 2022| ನೀರಜ್ ಛೋಪ್ರಾ ಜತೆ ರೋಹಿತ್ ಯಾದವ್ ಕೂಡ ಫೈನಲ್‌ಗೆ ಎಂಟ್ರಿ!