Site icon Vistara News

Ishan Kishan | ಅತಿ ವೇಗದಲ್ಲಿ ದ್ವಿಶತಕ ಬಾರಿಸಿ ದಾಖಲೆ ಬರೆದ ಇಶಾನ್‌ ಕಿಶನ್‌ ಯಾರು? ಸಾಧನೆಗಳೇನು?

ishan Kishan

ಮುಂಬಯಿ : ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ೨೫ ವರ್ಷದ ಯುವ ಬ್ಯಾಟರ್ ಇಶಾನ್‌ ಕಿಶನ್‌ (Ishan Kishan)ಅಬ್ಬರಿಸಿದ್ದಾರೆ. ಕ್ರಿಕೆಟ್‌ ಅಭಿಮಾನಿಗಳಿಗೆ ಫೋರ್‌, ಸಿಕ್ಸರ್‌ಗಳ ಮೂಲಕ ಪೂರ್ಣ ಪ್ರಮಾಣದ ಮನರಂಜನೆ ನೀಡಿದ ಅವರು ವಿಶ್ವ ದಾಖಲೆಯ ವೇಗದಲ್ಲಿ ದ್ವಿಶತಕ ಬಾರಿಸಿದ್ದಾರೆ. ೧೨೬ ಎಸೆತಗಳಲ್ಲಿ ಇನ್ನೂರರ ಗಡಿ ದಾಟಿದ ಅವರು ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ರನ್‌ಗಳ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ೪೦೯ ರನ್‌ ಪೇರಿಸಿತಲ್ಲದೆ, ೨೨೭ ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಈ ಪಂದ್ಯದ ಮೂಲಕ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿರುವ ವಿಕೆಟ್‌ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್‌ ಅವರ ವಿಸ್ಫೋಟಕ ಬ್ಯಾಟಿಂಗ್‌ ಸಾಮರ್ಥ್ಯ ಐಪಿಎಲ್‌ನಲ್ಲಿ ಈ ಹಿಂದೆಯೂ ಪರಿಚಯಗೊಂಡಿತ್ತು. ಆದರೆ, ಟೀಮ್‌ ಇಂಡಿಯಾದ ಪರವಾಗಿ ಅವರು ಇಷ್ಟೊಂದು ಮಟ್ಟಿಗೆ ಅಬ್ಬರಿಸಿದ್ದು ಇದೇ ಮೊದಲು. ೨೦೨೧ರಲ್ಲಿ ಶ್ರೀಲಂಕಾ ವಿರುದ್ಧ ಏಕ ದಿನ ಮಾದರಿ ಪದಾರ್ಪಣೆ ಮಾಡಿದ ಅವರು ಇದುವರೆಗೆ ಈ ಮಾದರಿಯ ಪ್ರದರ್ಶನ ನೀಡಿಲ್ಲ. ಆದರೆ, ಬಾಂಗ್ಲಾ ವಿರುದ್ಧದ ಇನಿಂಗ್ಸ್‌ ಸ್ಮರಣೀಯ ಎನಿಸಿಕೊಂಡಿದೆ.

ಧೋನಿಯ ತವರಿನ ಪ್ರತಿಭೆ

ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ ಅವರ ತವರೂರು ಜಾರ್ಖಂಡ್‌. ವಿಶ್ವ ಕ್ರಿಕೆಟ್‌ ಕಂಡ ಯಶಸ್ವಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿಯ ಊರು. ಇಶಾನ್‌ ಕೂಡ ವಿಕೆಟ್‌ ಕೀಪರ್‌ ಬ್ಯಾಟರ್‌. ಜತೆಗೆ ಭಾರತ ತಂಡದ ಕಾಯಂ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಜತೆ ೧೯ರ ವಯೋಮಿತಿಯ ಭಾರತ ತಂಡದಲ್ಲಿ ಆಡಿದವರು. ೨೦೧೬ರಲ್ಲಿ ಢಾಕಾದಲ್ಲಿ ನಡೆದ ವಿಶ್ವ ಕಪ್‌ನಲ್ಲಿ ಭಾರತ ೧೯ರ ವಯೋಮಿತಿಯ ತಂಡದ ನಾಯಕರಾಗಿದ್ದ ಅವರು ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿದ್ದರು. ಆರು ಇನಿಂಗ್ಸ್‌ಗಳಲ್ಲಿ ೭೩ ರನ್‌ ಮಾತ್ರ ಬಾರಿಸಿದ್ದರು. ಅದರೆ, ರಿಷಭ್‌ ಪಂತ್‌ ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರು ಟೀಮ್‌ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡರು.

ಭಾರತ ತಂಡದಲ್ಲಿ ಅವಕಾಶ ಕಳೆದುಕೊಂಡ ಹೊರತಾಗಿಯೂ ಇಶಾನ್‌ ಕಿಶನ್‌ ಜಾರ್ಖಂಡ್‌ ತಂಡದ ಪರ ರಣಜಿಯಲ್ಲಿ ಉತ್ತಮ ಸಾಧನೆ ಮಾಡಿದ್ದರು. ಅದೇ ಕ್ರಿಕೆಟ್ ಋತುವಿನ ರಣಜಿಯಲ್ಲಿ ೭೯೯ ರನ್‌ ಬಾರಿಸಿದ್ದರು. ಅದರಲ್ಲೂ ಅವರು ಡೆಲ್ಲಿ ವಿರುದ್ಧ ೨೭೩ ರನ್‌ ಗಳಿಸಿ ಸಾಧನೆ ಮಾಡಿದ್ದರು. ಇದು ಜಾರ್ಜಂಡ್‌ ಪರ ಇದುವರೆಗೂ ಗರಿಷ್ಠ ರನ್‌ಗಳ ದಾಖಲೆಯಾಗಿದೆ.

ಸ್ಥಿರತೆಯ ಕೊರತೆ

ಇಶಾನ್‌ ಕಿಶನ್‌ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಹೊಂದಿಲ್ಲ. ಇದರಿಂದಾಗಿ ಅವರು ಆಯ್ಕೆಗಾರರ ಗಮನ ತಮ್ಮತ್ತ ಸೆಳೆಯುವಲ್ಲಿ ಪದೇ ಪದೆ ವಿಫಲಗೊಳ್ಳುತ್ತಿದ್ದಾರೆ. ಕೆಲವೊಂದು ಬಾರಿ ಅಬ್ಬರದ ಬ್ಯಾಟಿಂಗ್ ಮಾಡಿದರೆ ಇನ್ನೂ ಕೆಲವೊಂದು ಸಲ ಸಣ್ಣ ಮೊತ್ತವನ್ನು ಪೇರಿಸಲು ಒದ್ದಾಡುತ್ತಾರೆ. ಹೀಗಾಗಿ ಪ್ರತಿ ಬಾರಿಯೂ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ, ಐಪಿಎಲ್‌ ಕೆರಿಯರ್‌ ಇಶಾನ್‌ ಅವರ ಜೀವನ ಬದಲಿಸಿತು. ೨೦೧೬ರಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಆಡಿದ್ದ ಅವರು ಅಲ್ಲಿ ಹೆಚ್ಚಿನ ಅವಕಾಶ ಪಡೆದಿರಲಿಲ್ಲ. ಆದರೆ, ೨೦೧೭ರ ಆವೃತ್ತಿಯಲ್ಲಿ ಗುಜರಾತ್‌ ಲಯನ್ಸ್ ಪರ ಕೆಳಕ್ರಮಾಂಕದಲ್ಲಿ ಬ್ಯಾಟ್‌ ಮಾಡಲು ಇಳಿದು ದೊಡ್ಡ ದೊಡ್ಡ ಹೊಡೆತಗಳ ಮೂಲಕ ಗಮನ ಸೆಳೆದರು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಶಾನ್‌ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಕ್ಕೆ ಐಪಿಎಲ್ ಫ್ರಾಂಚೈಸಿಗಳು ಜಿದ್ದಿಗೆ ಬಿದ್ದಿದ್ದವು. ಅಂತಿಮವಾಗಿ ೬.೨ ಕೋಟಿ ರೂಪಾಯಿಗೆ ಮುಂಬಯಿ ಇಂಡಿಯನ್ಸ್‌ ಪಾಲಾಗಿದ್ದರು.

೨೦೧೮ರ ಐಪಿಎಲ್‌ನ ಆರಂಭದಲ್ಲಿ ಮುಂಬಯಿ ಇಂಡಿಯನ್ಸ್‌ ವಿಶ್ವಾಸ ಮೂಡಿಸಿದ್ದ ಅವರ ಬಳಿಕ ಪ್ರದರ್ಶನ ವೈಫಲ್ಯ ಕಂಡರು. ಆದಾಗ್ಯೂ ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ೨೧ ಎಸೆತಗಳಲ್ಲಿ ಬಾರಿಸಿದ್ದ ೬೨ ರನ್ ಸ್ಮರಣೀಯ. ಅದರಲ್ಲೂ ಸ್ಪಿನ್ನರ್ ಕುಲ್ದೀಪ್‌ ಯಾದವ್ ಅವರ ಸತತ ನಾಲ್ಕು ಎಸೆತಗಳಿಗೆ ಸಿಕ್ಸರ್ ಬಾರಿಸಿದ್ದರು. ಇಲ್ಲೂ ಪ್ರದರ್ಶನದಲ್ಲಿ ಏರುಪೇರು ಕಂಡಿರುವ ಅವರು ಸ್ಟ್ರೈಕ್‌ರೇಟ್ ಮಾತ್ರ ೧೫೦ಕ್ಕೂ ಹೆಚ್ಚಿದೆ.

ಸಾಧನೆಗಳು

ಅಂತಾರಾಷ್ಟ್ರೀಯ ಏಕ ದಿನ ಮಾದರಿಯಲ್ಲಿ ಇದುವರೆಗೆ ೧೦ ಪಂದ್ಯಗಳನ್ನು ಆಡಿರುವ ಇಶಾನ್‌ ಕಿಶನ್‌ ೪೭೭ ರನ್ ಬಾರಿಸಿದ್ದಾರೆ. ೨೧೦ ಗರಿಷ್ಠ ಸ್ಕೋರ್‌. ಒಂದು ದ್ವಿಶತಕ ಹಾಗೂ ೩ ಅರ್ಧ ಶತಕಗಳು ಇದರಲ್ಲಿ ಸೇರಿಕೊಂಡಿವೆ. ಭಾರತ ಟಿ೨೦ ತಂಡದ ಪರ ೨೧ ಪಂದ್ಯಗಳನ್ನು ಆಡಿದ್ದು, ಒಟ್ಟಾರೆ ೫೮೯ ರನ್‌ ಬಾರಿಸಿದ್ದಾರೆ. ೮೯ ಅವರ ಗರಿಷ್ಠ ರನ್‌ಗಳಾಗಿದ್ದು, ನಾಲ್ಕು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ೭೫ ಐಪಿಎಲ್‌ ಪಂದ್ಯಗಳನ್ನು ಆಡಿದ್ದು, ಒಟ್ಟು ೧೮೭೦ ರನ್‌ ಬಾರಿಸಿದ್ದಾರೆ. ೯೯ ಗರಿಷ್ಠ ರನ್‌ಗಳಾಗಿದ್ದು, ೧೨ ಅರ್ಧ ಶತಕಗಳು ಅವರ ಖಾತೆಯಲ್ಲಿವೆ.

ಇದನ್ನೂ ಓದಿ | Ishan Kishan | ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದರೂ ತೃಪ್ತಿಯಾಗದ ಇಶಾನ್​ ಕಿಶನ್​; ಕಾರಣ ಏನು?

Exit mobile version