Site icon Vistara News

World Athletics Championships 2022 | ನೀರಜ್‌ ವಿರುದ್ಧವೇ ಸೆಣಸಾಡಲಿರುವ ರೋಹಿತ್‌ ಯಾರು?

World Athletics Championships 2022

ಒರೆಗಾನ್‌ : World Athletics Championships 2022 ಕ್ರೀಡಾಕೂಟದ ಜಾವೆಲಿನ್‌ ಎಸೆತದಲ್ಲಿ ಭಾರತದ ರೋಹಿತ್‌ ಯಾದವ್ ಕೂಡ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಇವರು ಹಾಲಿ ಆವೃತ್ತಿಯ ಜಾವೆಲಿನ್‌ ಎಸೆತದಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆದ ಎರಡನೇ ಆಟಗಾರ. ಇವರು ಯಾರು ಎಂಬುದು ಎಲ್ಲರ ಕುತೂಹಲ. ನೀರಜ್‌ ಅವರ ಮಾತಿನಲ್ಲಿ ಹೇಳುವುದಾದರೆ ಅವರಿಬ್ಬರು ಉತ್ತಮ ಗೆಳೆಯರು.

ಇವರಿಬ್ಬರು ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಬೆಳಗ್ಗೆ ೭ ಗಂಟೆಗೆ ನಡೆಯಲಿರುವ ಫೈನಲ್‌ ಸ್ಪರ್ಧೆಯಲ್ಲಿ ಪದಕಗಳಿಗಾಗಿ ಪರಸ್ಪರ ಸೆಣಡಾಲಿದ್ದಾರೆ. ಇವರ ಜತೆಗೆ ವಿಶ್ವದ ಇನ್ನೂ ಹತ್ತು ಜಾವೆಲಿನ್‌ ಎಸೆತಗಾರರು ಪದಕಗಳ ಬೇಟೆ ನಡೆಸಲಿದ್ದಾರೆ. ನೀರಜ್‌ ಚೋಪ್ರಾ ಹರಿಯಾಣದ ಪ್ರತಿಭೆಯಾದರೆ, ರೋಹಿತ್‌ ಯಾದವ್‌ ಉತ್ತರ ಪ್ರದೇಶದ ಯುವ ಅಥ್ಲೀಟ್‌.

ಭಾರತದ ಪದಕದ ಭರವಸೆ ಎನಿಸಿಕೊಂಡಿರುವ ನೀರಜ್‌ ಚೋಪ್ರಾ ಅವರು ೮೮.೩೯ ಮೀಟರ್‌ ದೂರಕ್ಕೆ ಈಟಿ ಎಸೆಯುವ ಮೂಲಕ ಎ ಗುಂಪಿನಿಂದ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಪ್ರಶಸ್ತಿ ವೇದಿಕೆಯನ್ನೇರುವ ವಿಶ್ವಾಸ ಮೂಡಿಸಿದ್ದಾರೆ. ಇದೇ ವೇಳೆ ಬಿ ಗುಂಪಿನಿಂದ ರೋಹಿತ್‌ ಯಾದವ್ ಕೂಡ ಫೈನಲ್‌ಗೇರಿದ್ದಾರೆ. ಆದರೆ, ನೀರಜ್‌ಗೆ ಹೋಲಿಸಿದರೆ ಅವರು ಜಾವೆಲಿನ್‌ ಎಸೆದಿರುವ ದೂರ ಸಾಕಷ್ಟು ಕಡಿಮೆಯಿದೆ. ಅವರು ೮೨.೫೪ ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಪ್ರಶಸ್ತಿ ಸುತ್ತಿನ ಹಣಾಹಣಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಆಂಡರ್ಸನ್‌ ಸವಾಲು

ಭಾನುವಾರ World Athletics Championships 2022 ಜಾವೆಲಿನ್‌ ಎಸೆತದ ಫೈನಲ್‌ ಸ್ಪರ್ಧೆ ನಡೆಯಲಿದೆ. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ವಿಶ್ವದ ೩೨ ಜಾವೆಲಿನ್‌ ಪಟುಗಳು ಪಾಲ್ಗೊಂಡಿದ್ದರು. ಎ ಮತ್ತು ಬಿ ಗುಂಪಿನಿಂದ ತಲಾ ೧೬ ಸ್ಪರ್ಧಿಗಳು ಫೈನಲ್‌ ಪ್ರವೇಶಕ್ಕಾಗಿ ಅರ್ಹತಾ ಸುತ್ತಿನಲ್ಲಿ ಸ್ಪರ್ಧೆ ನಡೆಸಿದ್ದರು. ಪ್ರತಿ ಗುಂಪಿನಿಂದ ಆರು ಸ್ಪರ್ಧಿಗಳು ಫೈನಲ್‌ಗೆ ಪ್ರವೇಶ ಪಡೆದರು. ಎ ಗುಂಪಿನಿಂದ ನೀರಜ್‌ ಅಗ್ರಸ್ಥಾನಿಯಾಗಿ ಪ್ರವೇಶ ಪಡೆದರೆ, ಬಿ ಗುಂಪಿನಲ್ಲಿ ಕೊನೆಯವರಾಗಿ ನೀರಜ್‌ ಪ್ರವೇಶ ಗಿಟ್ಟಿಸಿಕೊಂಡರು. ಆದರೆ, ಒಟ್ಟಾರೆ ೧೨ ಸ್ಪರ್ಧಿಗಳ ಪಟ್ಟಿಯಲ್ಲಿ ನೀರಜ್‌ ಎರಡನೇ ಸ್ಥಾನದಲ್ಲಿದ್ದಾರೆ. ವಾರಗಳ ಹಿಂದೆ ನಡೆದಿದ್ದ ಸ್ಟಾಕ್‌ಹೋಮ್‌ ಡೈಮಂಡ್‌ ಲೀಗ್‌ನಲ್ಲಿ ೯೦ ಮೀಟರ್‌ಗೂ ಅಧಿಕ ದೂರ ಎಸೆದಿದ್ದ ಗ್ರೆನೆಡಾ ದೇಶದ ಡೆರ್ಸನ್‌ ಪೀಟರ್‌ ೮೯.೯೧ ಮೀಟರ್‌ ಎಸೆದು ಅಗ್ರಸ್ಥಾನದಲ್ಲಿದ್ದಾರೆ. ಇವರು ಎರಡು ಬಾರಿಯ ವಿಶ್ವ ಚಾಂಪಿಯನ್‌ ಕೂಡ.

ಶನಿವಾರ ನಡೆಯಲಿರುವ ಫೈನಲ್‌ ಸ್ಪರ್ಧೆಯಲ್ಲಿ ನೀರಜ್‌ ಹಾಗೂ ರೋಹಿತ್‌ ಸೇರಿದಂತೆ ೧೨ ಸ್ಪರ್ಧಿಗಳು ಪದಕಗಳ ಬೇಟೆ ನಡೆಸಲಿದ್ದಾರೆ. ವಾರಗಳ ಹಿಂದೆ ನಡೆದ ಸ್ಟಾಕ್‌ ಹೋಮ್‌ ಡೈಮಂಡ್ ಲೀಗ್‌ನಲ್ಲಿ ತಮ್ಮ ರಾಷ್ಟ್ರೀಯ ದಾಖಲೆ ಉತ್ತಮ ಪಡಿಸಿಕೊಳ್ಳುವ ಜತೆಗೆ ೮೯.೯೪ ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದಿರುವ ನೀರಜ್‌ ಚೋಪ್ರಾ ಅವರು ಹಾಲಿ ಚಾಂಪಿಯನ್‌ಷಿಪ್‌ನಲ್ಲಿ ಕನಿಷ್ಠ ಪಕ್ಷ ಒಂದು ಪದಕವನ್ನಾದರೂ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಒಂದು ಪದಕ ಗೆದ್ದರೂ ಅವರು ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಅಂಜು ಬಾಬಿ ಜಾರ್ಜ್‌ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

೨೦೧೭ರ ಲಂಡನ್‌ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದ ನೀರಜ್‌ ೮೨.೨೬ ಮೀಟರ್‌ ಜಾವೆಲಿನ್‌ ಎಸೆದು ಫೈನಲ್‌ಗೆ ಏರುವ ಅವಕಾಶವನ್ನೂ ಕಳೆದುಕೊಂಡಿದ್ದರು. ೨೦೧೯ರಲ್ಲಿ ಗಾಯದ ಸಮಸ್ಯೆಯಿಂದ ಪಾಲ್ಗೊಂಡಿರಲಿಲ್ಲ.

ರೋಹಿತ್‌ ಸಾಧನೆಗಳೇನು?

ಉತ್ತರ ಪ್ರದೇಶ ಮೂಲದ ರೋಹಿತ್‌ ಯಾದವ್‌ ಭಾರತದ ಪ್ರತಿಭಾನ್ವಿತ ಜಾವೆಲಿನ್‌ ಎಸೆತಗಾರ. ಕಳೆದ ಮೂರು ತಿಂಗಳಲ್ಲಿ ಹಲವು ಬಾರಿ ೮೦ ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಹೀಗಾಗಿ ಹಾಲಿ ಅವೃತ್ತಿಯಲ್ಲಿ ಅವರು ಫೈನಲ್‌ಗೆ ಪ್ರವೇಶ ಮಾಡಲು ಸಾಧ್ಯವಾಗಿದೆ.

೨೦೨೨ರ ಜೂನ್‌ನಲ್ಲಿ ನಡೆದ ಚೆನ್ನೈನಲ್ಲಿ ನಡೆದಿದ್ದ ನ್ಯಾಷನಲ್‌ ಇಂಟರ್‌ಸ್ಟೇಟ್‌ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗರಿಷ್ಠ 82.54 ಮೀಟರ್‌ ದೂರ ಜಾವೆಲಿನ್‌ ಎಸೆದು ಬೆಳ್ಳಿ ಪದಕ ಗೆದ್ದಿದ್ದರು.

೨೦ ವರ್ಷದ ರೋಹಿತ್‌ ನ್ಯಾಷನಲ್‌ ಫೆಡರೇಷನ್‌ ಕಪ್‌ನಲ್ಲಿ 81.83 ಮೀಟರ್‌ ದೂರ ಜಾವೆಲಿನ್‌ ಎಸೆದು ಚಿನ್ನದ ಪದಕ ಗೆದ್ದಿದ್ದರು. ಅದೇ ರೀತಿ ಮೇ ತಿಂಗಳಲ್ಲಿ ಭುವನೇಶ್ವರದಲ್ಲಿ ನಡೆದ ಇಂಡಿಯನ್‌ ಗ್ರ್ಯಾನ್‌ಪ್ರಿನಲ್ಲಿ ೮೦. ೮೮ ಮೀಟರ್‌ ದೂರ ಎಸೆದು ಬೆಳ್ಳಿ ಪದಕ ಗೆದಿದ್ದರು. ಅದೇ ರೀತಿ ಜುಲೈ ತಿಂಗಳ ಅಂತ್ಯಕ್ಕೆ ಆರಂಭವಾಗಲಿರುವ ಕಾಮನ್ವೆಲ್ತ್‌ ಗೇಮ್ಸ್‌ಗೂ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ | World Athletics Championships 2022| ಮೊದಲ ಜಾವೆಲಿನ್ ಎಸೆತದಲ್ಲೇ ನೀರಜ್‌ ಛೋಪ್ರಾ ಫೈನಲ್‌ಗೆ ಲಗ್ಗೆ

Exit mobile version