ಕೋಲ್ಕೊತಾ: ಕೆಕೆಆರ್ ವಿರುದ್ಧದ ಐಪಿಎಲ್ (IPL 2023 ) ಪಂದ್ಯದಲ್ಲಿ ಆರ್ಸಿಬಿ ತಂಡ ಸೋಲುವುದಕ್ಕೆ ಮೂವರು ಸ್ಪಿನ್ನರ್ಗಳು ಕಾರಣ. ವರುಣ್ ಚಕ್ರವರ್ತಿ, ಸುನೀಲ್ ನರೈಲ್ ಹಾಗೂ ಸುಯಾಶ್ ಶರ್ಮಾ. ಈ ಮೂವರಲ್ಲಿ ಪಂದ್ಯದ ವೇಳೆ ಹೆಚ್ಚು ಗಮನ ಸೆಳೆದಿದ್ದು ಸುಯಾಶ್. ಅದಕ್ಕೆ ಎರಡು ಕಾರಣವಿದೆ. ಒಂದು ಅವರ ನೋಟ. ಎರಡನೆಯದು ಅವರ ಬೌಲಿಂಗ್ ಶೈಲಿ. ನೋಟದ ವಿಚಾರದಲ್ಲಿ ಹೇಳುವುದಾದರೆ ಅವರು 2021ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಂತೆಯೇ ಇದ್ದಾರೆ. ಕ್ಲೀನ್ ಶೇವ್, ಹೇರ್ಬ್ಯಾಂಡ್ ಹಾಕಿರುವ ಉದ್ದನೆಯ ಕೂದಲಿನ ಮೂಲಕ ಅವರು ನೀರಜ್ ಅವರಂತೆಯೇ ಕಾಣುತ್ತಾರೆ. ಬಲಗೈ ಲೆಗ್ಸ್ಪಿನ್ನರ್ ಆಗಿರುವ ಅವರ ಬೌಲಿಂಗ್ ಶೈಲಿಯೂ ವಿಭಿನ್ನವಾಗಿದೆ. ಅಸಾಂಪ್ರದಾಯಿಕ ಬೌಲಿಂಗ್ ಮೂಲಕ ಬ್ಯಾಟರ್ಗಳ ಏಕಾಗ್ರತೆಯನ್ನು ಕಂಗೆಡಿಸುವ ಶೈಲಿ ಅವರದ್ದು. ಹೀಗಾಗಿ ಪಂದ್ಯದುದ್ದಕ್ಕೂ ಅವರು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದರು.
ಇದನ್ನೂ ಓದಿ : IPL 2023 : ಟೋಪ್ಲೆ ಹೋದ್ರು, ಪಾರ್ನೆಲ್ ಬಂದ್ರು; ಆರ್ಸಿಬಿ ಬಳಗ ಸೇರಿಕೊಂಡ ದಕ್ಷಿಣ ಆಫ್ರಿಕಾ ವೇಗಿ
ಸುಯಾಶ್ ಶರ್ಮಾ ಪಂದ್ಯದಲ್ಲಿ ನಾಲ್ಕು ಓವರ್ಗಳನ್ನು ಎಸೆದಿದ್ದಾರೆ. 30 ರನ್ ನೀಡಿರುವರ ಅವರು ಪ್ರಮುಖ 3 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಬೌಲರ್ ಎಂಬ ಗರಿಮೆ ತನ್ನದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಸುಯಾಶ್ ಕಣಕ್ಕೆ ಇಳಿದಿದ್ದು ಇಂಪ್ಯಾಕ್ಟ್ ಪ್ಲೇಯರ್ ಆಗಿ. ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ತಂಡ 204 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ಬ್ಯಾಟ್ ಮಾಡುವ ವೇಳೆ ಪಿಚ್ ಸ್ಪಿನ್ಗೆ ನೆರವಾಗುವುದನ್ನು ಗುರುತಿಸಿದ್ದ ಕೆಕೆಆರ್ ತಂಡ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರ ಬದಲಿಗೆ ಸ್ಪಿನ್ನರ್ ಸುಯಾಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅವರು ಮೂರು ವಿಕೆಟ್ ತಮ್ಮದಾಗಿಸಿಕೊಂಡರು.
ಲಿಸ್ಟ್ ಎ ಪಂದ್ಯವೂ ಆಡಿಲ್ಲ ಸುಯಾಶ್
ಸುಯಾಶ್ ಶರ್ಮಾ ಬೌಲಿಂಗ್‌ನಿಂದ ಕೇವಲ ಕೆಕೆಆರ್‌ಗೆ ಮಾತ್ರವಲ್ಲ ಇಡೀ ಐಪಿಎಲ್ ಟೂರ್ನಿಯ ಎಲ್ಲಾ ತಂಡಗಳಿಗೂ ಅಚ್ಚರಿಯಾಗಿದೆ. ಯಾಕೆಂದರೆ, ಅವರು ಒಂದೇ ಒಂದು ಲಿಸ್ಟ್ ‘ಎ’ ಪಂದ್ಯವಾಗಲಿ, ಪ್ರಥಮ ದರ್ಜೆ ಪಂದ್ಯವಾಗಲಿ ಅಥವಾ ದೇಶಿ ಕ್ರಿಕೆಟ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ನೇರವಾಗಿ ಐಪಿಎಲ್ಗೆ ಪ್ರವೇಶ ಪಡೆದುಕೊಂಡು ಗಮನ ಸೆಳೆದಿದ್ದಾರೆ.
2023ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಸುಯಾಶ್ ಶರ್ಮಾ ಅವರನ್ನು ಕೋಲ್ಕತಾ ಫ್ರಾಂಚೈಸಿ 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು. ಆ ಮೂಲಕ ಕೆಕೆಆರ್ ತಂಡದ 25 ಸದಸ್ಯರ ಬಳಗ ಸೇರಿಕೊಂಡಿದ್ದರು. ಕೆಕೆಆರ್ ಟೀಮ್ ಅಭ್ಯಾಸ ನಡೆಸುವಾಗ ಸುಯಾಶ್ ಬೌಲಿಂಗ್ ಮಾಡಿದ್ದರು. ಅವರ ವಿಭಿನ್ನ ಶೈಲಿ ಹಾಗೂ ನಿಖರತೆ ತಂಡದ ಮ್ಯಾನೇಜ್ಮೆಂಟ್ ಗಮನ ಸೆಳೆದಿತ್ತು. ಹೀಗಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವಕಾಶ ಗಿಟ್ಟಿಸಿಕೊಂಡರು.
ಬ್ಯಾಟ್ಸ್ಮನ್ ಬೌಲರ್ ಆದರು
ಸುಯಾಶ್ ಶರ್ಮಾ ಬ್ಯಾಟ್ಸ್ಮನ್ ಆಗಿದ್ದರು. ಆದರೆ, ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ವಿಕೆಟ್ ಪಡೆಯುವ ತಂತ್ರ ಕಲಿತುಕೊಂಡ ಅವರು ಬಳಿಕ ಸ್ಪಿನ್ ಬೌಲರ್ ಆಗಿ ಪರಿವರ್ತನೆಗೊಂಡರು. ಪಂದ್ಯದ ಬಳಿಕ ಮಾತನಾಡಿದ ಅವರು ಈ ಸತ್ಯವನ್ನು ಹೇಳಿದ್ದಾರೆ. ಆದಾಗ್ಯೂ ತಮಗೆ ಬೌಲಿಂಗ್ ಮಾಡುವುದೇ ಖುಷಿಯ ವಿಚಾರ ಎಂದಿದ್ದಾರೆ. ಅದರಲ್ಲೂ ದೊಡ್ಡ ದೊಡ್ಡ ಬ್ಯಾಟ್ಸ್ಮನ್ಗಳಿಗೆ ಬೌಲಿಂಗ್ ಮಾಡುವಾಗ ಖುಷಿಯಾಗುತ್ತದೆ ಎಂದು ಅವರು ನುಡಿದಿದ್ದಾರೆ.
19 ವರ್ಷದ ಸುಯಾಶ್ ಶರ್ಮಾ ಮೊದಲ ಅವಕಾಶದಲ್ಲಿಯೇ ಗಮನ ಸೆಳೆದಿದ್ದಾರೆ. ಹೀಗಾಗಿ ಐಪಿಎಲ್ ಹಾಲಿ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಚಾನ್ಸ್ ಪಡೆಯಬಹುದು.