ಲಂಡನ್: ವಿಂಬಲ್ಡನ್ 2023ರ (Wimbledon 2023) ಫೈನಲ್ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದ ನಂತರ ಟೆನಿಸ್ ಜಗತ್ತಿನ ಗಮನ ಸೆಳೆಯ ಯುವ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಜ್ ಗ್ರಾಫಿಯಾ ಅವರ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಅಲ್ಕರಾಜ್ 1-6, 7-6 (6), 6-1, 3-6, 6-4 ಸೆಟ್ಗಳಿಂದ 23 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಜೊಕೊವಿಕ್ ಅವರ 34 ಪಂದ್ಯಗಳ ಗೆಲುವಿನ ಸರಣಿಯನ್ನು ಕೊನೆಗೊಳಿಸಿದರು. ಕೇವಲ 20 ವರ್ಷ ವಯಸ್ಸಿನ ಸ್ಪೇನ್ ಆಟಗಾರ ಈಗಾಗಲೇ ವಿಶ್ವದ ನಂ.1 ಸ್ಥಾನದಲ್ಲಿದ್ದಾರೆ. ಕಾರ್ಲೋಸ್ ಅಲ್ಕರಾಜ್ ಅವರನ್ನು ಬಿಗ್ 3 (ರೋಜರ್ ಫೆಡರರ್, ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್) ಹೋಲಿಕೆ ಮಾಡಲಾಗುತ್ತಿದೆ. ಹಾಗಾದರೆ ಟೆನಿಸ್ ಜಗತ್ತಿನ ಹೊಸ ಸೆನ್ಸೇಷನ್ ವಿಶ್ವದ ನಂ.1 ಕಾರ್ಲೋಸ್ ಅಲ್ಕರಾಜ್ ಯಾರೆಂದು ತಿಳಿದುಕೊಳ್ಳೋಣ.
The Spanish sensation has done it 🇪🇸@carlosalcaraz triumphs over Novak Djokovic, 1-6, 7-6(6), 6-1, 3-6, 6-4 in an all-time classic#Wimbledon pic.twitter.com/sPGLXr2k99
— Wimbledon (@Wimbledon) July 16, 2023
- ಕಾರ್ಲೋಸ್ ಅಲ್ಕರಾಜ್ ಅವರು ಎಲ್ ಪಾಲ್ಮರ್ (ಮುರ್ಸಿಯಾ) ಕುಟುಂಬದ ಕುಡಿ. ಈ ಕುಟುಂಬದ ಎಲ್ಲರೂ ಅಪ್ರತಿಮ ಟೆನಿಸ್ ಪ್ರೇಮಿಗಳು. ಅವರ ತಂದೆ ಮತ್ತು ಅಜ್ಜ ಇಬ್ಬರೂ ಟೆನಿಸ್ ಆಟಗಾರರಾಗಿದ್ದರು. ತಂದೆ ಟೆನಿಸ್ ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ.
- 2020ರಲ್ಲಿ ಅಲ್ಕರಾಜ್ ತಮ್ಮ 16 ನೇ ವಯಸ್ಸಿನಲ್ಲಿ ಎಟಿಪಿ ಮೇಜರ್ ಡ್ರಾಗೆ ಪದಾರ್ಪಣೆ ಮಾಡಿದರು. ಈ ಮೂಲಕ ಟೆನಿಸ್ ಕ್ಷೇತ್ರದ ಪ್ರಮುಖ ವೇದಿಕೆಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ಆಟಗಾರರಲ್ಲಿ ಒಬ್ಬರೆನಿಸಿಕೊಂಡರು. ಅವರು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಆಲ್ಬರ್ಟ್ ರಾಮೋಸ್ ವಿನೋಲಾಸ್ ಅವರನ್ನು ಸೋಲಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.
- ಸ್ಪೇನ್ನವರಾಗಿರುವ ಅಲ್ಕರಾಜ್ಗೆ ರಾಫೆಲ್ ನಡಾಲ್ ರೋಲ್ ಮಾಡೆಲ್. ಬಿಗ್- 3ಗಳಾದ ಫೆಡರರ್, ನಡಾಲ್ ಮತ್ತು ಜೊಕೊವಿಕ್ ಅವರ ಮಿಶ್ರಣ ಅಲ್ಕರಾಜ್ ಎಂದು ಅವರ ತರಬೇತುದಾರ, ಮಾಜಿ ವಿಶ್ವ ನಂ.1 ಮತ್ತು ಎರಡು ಬಾರಿಯ ಒಲಿಂಪಿಯನ್ ಜುವಾನ್ ಕಾರ್ಲೋಸ್ ಫೆರೆರೊ ಹೇಳಿದ್ದಾರೆ.
- ಆವೇ ಮಣ್ಣಿನ (ಕ್ಲೇ ಕೋರ್ಟ್) ಅಂಗಣದ ಒಂದೇ ಟೂರ್ನಿಯಲ್ಲಿ ರಾಫೆಲ್ ನಡಾಲ್ ಮತ್ತು ಜೊಕೊವಿಕ್ ಅವರನ್ನು ಸೋಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡವರು. 19ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಸ್ಪೇನ್ನ ಈ ಆಟಗಾರ 2021ರಲ್ಲಿ ತನ್ನ ಮೊದಲ ಸಿಂಗಲ್ಸ್ ಎಟಿಪಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2008ರಲ್ಲಿ ಜಪಾನ್ನ ಕೀ ನಿಶಿಕೊರಿ ರಿಚರ್ಡ್ ಅವರನ್ನು 6–2, 6–2 ಸೆಟ್ಗಳಿಂದ ಸೋಲಿಸಿದ ನಂತರ ಪ್ರಶಸ್ತಿ ಗೆದ್ದರು.
- ಕಾರ್ಲೋಸ್ ಅಲ್ಕರಾಜ್ 2022ರಲ್ಲಿ ಮ್ಯಾಡ್ರಿಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಟೂರ್ನಿಯಲ್ಲಿ ವಿಶ್ವದ ಅಗ್ರ ಆಟಗಾರರಾದ ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಸೋಲಿಸಿದ್ದರು. 2023ರಲ್ಲಿ ಮತ್ತೆ ಪ್ರಶಸ್ತಿ ಉಳಿಸಿಕೊಂಡಿದ್ದರು. ಫೈನಲ್ನಲ್ಲಿ ಜಾನ್-ಲೆನ್ನಾರ್ಡ್ ಸ್ಟ್ರಫ್ ವಿರುದ್ಧ ಗೆದ್ದಿದ್ದರು. ಯುಎಸ್ ಓಪನ್ 2022ರ ಫೈನಲ್ನಲ್ಲಿ ಕ್ಯಾಸ್ಪರ್ ರುಡ್ ವಿರುದ್ಧ ಹಾಗೂ ವಿಂಬಲ್ಡನ್ 2023ರಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಗೆದ್ದು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ಕರಾಜ್ ಒಟ್ಟು 12 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
- ಎಟಿಪಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅಲ್ಕರಾಜ್ ಪಾತ್ರರಾಗಿದ್ದಾರೆ. 2022ರ ಯುಎಸ್ ಓಪನ್ ಫೈನಲ್ನಲ್ಲಿ ಕಾರ್ಲೋಸ್ ಅಲಾಕರಾಜ್ ಎದುರಾಳಿ ಕ್ಯಾಸ್ಪರ್ ರುಡ್ ಅವರನ್ನು ಸೋಲಿಸಿ ವಿಶ್ವದ ನಂ.1 ಸ್ಥಾನಕ್ಕೇರಿದ್ದರು. ಆ ವರ್ಷದ ಆರಂಭದಲ್ಲಿ 32ನೇ ಸ್ಥಾನ ಹೊಂದಿದ್ದ ಅವರು ಅಂತ್ಯದ ವೇಳೆಗೆ ೧ ನೇ ಸ್ಥಾನಕ್ಕೇರಿದ್ದು ಕೂಡ ಐತಿಹಾಸಿಕ ದಾಖಲೆಯಾಗಿದೆ.
- ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೂರನೇ ಸ್ಪ್ಯಾನಿಷ್ ಆಟಗಾರ. ರಾಫೆಲ್ ನಡಾಲ್ (2008, 2010) ಮತ್ತು ಮ್ಯಾನುಯೆಲ್ ಸ್ಯಾಂಟನಾ (1966) ರಲ್ಲಿ ಈ ಸಾಧಣೆ ಮಾಡಿದ್ದರು.
- ಕಾರ್ಲೋಸ್ ಅಲ್ಕರಾಜ್ ಎಲ್ಲ ಮೂರು ಮಾದರಿಯ ಕೋರ್ಟ್ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆವೆ ಮಣ್ಣಿನ ಕೋರ್ಟ್ನಲ್ಲಿ 2 ಎಟಿಪಿ 1000 ಪ್ರಶಸ್ತಿಗಳು, ಹಾರ್ಡ್ ಕೋರ್ಟ್ನಲ್ಲಿ 2 ಎಟಿಪಿ 1000 ಪ್ರಶಸ್ತಿಗಳು ಹಾಗೂ ಒಂದು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಹುಲ್ಲಿನಂಗಣದಲ್ಲಿ (ಗ್ರಾಸ್ ಕೋರ್ಟ್) ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. ಗ್ರಾಸ್ ಕೋರ್ಟ್ನಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಂಬಿರಲಿಲ್ಲ ಎಂದು ಜೊಕೊವಿಕ್ ಹೇಳಿದ್ದಾರೆ.
ಇದನ್ನೂ ಓದಿ : Wimbledon 2023: ಅಲ್ಕರಾಜ್ ಆಟಕ್ಕೆ ‘ಕ್ರಿಕೆಟ್ ದೇವರು’ ಫಿದಾ; ಟೆನಿಸ್‌ನ ಈ ಲೆಜೆಂಡ್ ಜತೆಗೂ ಹೋಲಿಕೆ