ಲಖನೌ: ಐಪಿಎಲ್ 16ನೇ ಆವೃತ್ತಿಯ (IPL 2023) 30ನೇ ಪಂದ್ಯದಲ್ಲಿ ಕೆ. ಎಲ್ ರಾಹುಲ್ ನೇತೃತ್ವದ ಲಕ್ನೊ ಸೂಪರ್ ಜಯಂಟ್ಸ್ ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಗಳು ಸೆಣಸಾಡಲಿದೆ. ಟೀಮ್ ಇಂಡಿಯಾದಲ್ಲಿ ಅವರಿಬ್ಬರೂ ಗೆಳೆಯರಾಗಿರುವ ಕಾರಣ ಇದನ್ನು ಗೆಳೆಯರ ನಡುವಿನ ಕಾದಾಟವೆಂದೇ ಹೇಳಲಾಗುತ್ತದೆ. ಇದು ಶನಿವಾರದ ಡಬ್ಬಲ್ ಹೆಡರ್ನ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಲಖನೌದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಕಳೆದ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿದ್ದ ಗುಜರಾತ್ ಟೈಟನ್ಸ್ ತಂಡ ಆರ್ಆರ್ ವಿರುದ್ಧ ಸೋಲು ಕಂಡಿತ್ತು. ಅಂತಿಮ ಓವರ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮಾಯರ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರಿಂದ 3 ವಿಕೆಟ್‌ಗಳ ಸೋಲಿಗೆ ಒಳಗಾಗಿತ್ತು. ಆದಾಗ್ಯೂ ಈವರೆಗೆ ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಅಂಕಪಟ್ಟಿಯ 4ನೇ ಸ್ಥಾನದಲ್ಲಿದೆ. ಇದೇ ವೇಳೆ ಲಖನೌ ಸೂಪರ್ ಜಯಂಟ್ಸ್ ತನ್ನ ಹಿಂದಿನ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ 10 ರನ್‌ಗಳ ಗೆಲುವು ಕಂಡಿದ್ದು, 8 ಪಾಯಿಂಟ್ಸ್ ಕಲೆ ಹಾಕಿ 2ನೇ ಸ್ಥಾನದಲ್ಲಿ.
ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಆಡಿರುವ 5 ಪಂದ್ಯಗಳಲ್ಲಿ 228 ಬಾರಿಸಿದ್ದಾರೆ. ಆದರೆ ಅವರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಬಗ್ಗೆ ಹಿರಿಯ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ತಂಡದ ಸ್ಪಿನ್ ಬೌಲರ್ ರಶೀದ್ ಖಾನ್ 11 ವಿಕೆಟ್ ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. 2 ಅರ್ಧ ಶತಕ ಸಿಡಿಸಿರುವ ಸಾಯಿ ಸುದರ್ಶನ್, 10 ವಿಕೆಟ್ ಕಬಳಿಸಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಕೂಡ ತಂಡದ ಮ್ಯಾಚ್ ವಿನ್ನರ್‌ಗಳಾಗಿದ್ದಾರೆ.
ಎಲ್ಎಸ್ಜಿ ತಂಡವೂ ಉತ್ತಮ ಪ್ರದರ್ಶನ ನೀಡುತ್ತಿದೆ. ವೆಸ್ಟ್ ಇಂಡೀಸ್ ತಂಡದ ಕೈಲ್ ಮೇಯರ್ಸ್ 3 ಅರ್ಧ ಶತಕಗಳಗೊಂದಿಗೆ 219 ರನ್ ಗಳಿಸಿ ಶ್ರೇಷ್ಠ ಲಯದಲ್ಲಿದ್ದಾರೆ. ಕೆ.ಎಲ್ ರಾಹುಲ್, ಮಾರ್ಕ್ ಸ್ಟೋಯ್ನಿಸ್, ನಿಕೋಲಸ್ ಪೂರನ್ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. 4 ಪಂದ್ಯಗಳಿಂದ 11 ವಿಕೆಟ್ ಕಬಳಿಸಿರುವ ವೇಗಿ ಮಾರ್ಕ್ ವುಡ್ ತಂಡದ ಪ್ರಮುಖ ಬೌಲರ್.
ಇದನ್ನೂ ಓದಿ : IPL 2023 : ಐಪಿಎಲ್ನಲ್ಲಿ ನೂತನ ದಾಖಲೆ ಬರೆದ ಮಹೇಂದ್ರ ಸಿಂಗ್ ಧೋನಿ; ಏನಿದು ರೆಕಾರ್ಡ್?
ಲಖನೌ ಪಿಚ್ನಿಂದ ಯಾರಿಗೆ?
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಇದುವರೆಗೂ 3 ಐಪಿಎಲ್ ಪಂದ್ಯಗಳು ನಡೆದಿದೆ. 1 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದ್ದರೆ, 2 ಬಾರಿ ಚೇಸಿಂಗ್ ತಂಡ ಯಶಸ್ಸು ಕಂಡಿದೆ. ವೇಗಿಗಳಿಗಿಂತ ಸ್ಪಿನ್ನರ್ ಗಳಿಗೆ ಹೆಚ್ಚು ನೆರವು ನೀಡುವ ಪಿಚ್ ಇದು. ಮೊದಲು ಬ್ಯಾಟ್ ಮಾಡಿದ ತಂಡದ ಸರಾಸರಿ ಸ್ಕೋರ್ 157 ರನ್ ಆಗಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು..
ಸಂಭಾವ್ಯ ತಂಡಗಳು
ಲಖನೌ ಸೂಪರ್ ಜಯಂಟ್ಸ್: ಕೆ.ಎಲ್.ರಾಹುಲ್ (ನಾಯಕ), ಕೈಲ್ ಮೇಯರ್ಸ್, ಕೃಣಾಲ್ ಪಾಂಡ್ಯ, ಮಾರ್ಕ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ದೀಪಕ್ ಹೂಡ, ಆಯುಶ್ ಬದೋನಿ, ಮಾರ್ಕ್ ವುಡ್, ರವಿ ಬಿಷ್ಣೋಯ್, ಯಶ್ ಠಾಕೂರ್, ಜಯದೇವ್ ಉನದ್ಕತ್.
ಗುಜರಾತ್ ಟೈಟನ್ಸ್ : ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ (ನಾಯಕ), ಸಾಯ್ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಅಝ್ಜಾರಿ ಜೋಸೆಫ್, ಮೋಹಿತ್ ಶರ್ಮಾ.