ಬೆಂಗಳೂರು: ವಿಶ್ವ ಕಪ್ನ ಲೀಗ್ (ICC World Cup 2023) ಹಂತದ 44 ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನೊಂದು ಪಂದ್ಯ ಬಾಕಿ ಇದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಸೆಮಿಫೈನಲ್ ಸ್ಥಾನಗಳು ಖಾತರಿಯಾಗಿವೆ. ಮೊದಲ ಸ್ಥಾನದಲ್ಲಿರುವ ಭಾರತ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ನಡುವೆ ನವೆಂಬರ್ 15ರಂದು ಮೊದಲ ಸೆಮಿ ಹಾಗೂ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ನಡುವೆ ಎರಡನೇ ಉಪಾಂತ್ಯದ ಪಂದ್ಯ ನಡೆಯಲಿದೆ. ಆದಾಗ್ಯೂ ಶನಿವಾರ ನಡೆದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದವರೆಗೂ ಮೊದಲ ಸೆಮಿಯಲ್ಲಿ ಭಾರತಕ್ಕೆ ಯಾರು ಎಂಬುದು ನಿಗದಿಯಾಗಿರಲಿಲ್ಲ. ಇದೀಗ ಪಾಕ್ ತಂಡ ಆಂಗ್ಲರ ವಿರುದ್ಧ ಸೋಲುವ ಮೂಲಕ ಅದು ನಿಗದಿಯಾಗಿದೆ. ಈ ಪಂದ್ಯದ ಬಳಿಕ ವಿಶ್ವ ಕಪ್ ಅಂಕಪಟ್ಟಿಯಲ್ಲಿ ಸ್ಥಾನಗಳು ಪಲ್ಲಟಗೊಂಡಿಲ್ಲ. ಆದಾಗ್ಯೂ ಯಾವ ತಂಡಗಳು ಎಷ್ಟನೇ ಸ್ಥಾನದಲ್ಲಿವೆ ಎಂದು ನೋಡೋಣ.
ಆಡಿರುವ 8ರಲ್ಲಿ ಅಷ್ಟನ್ನೂ ಗೆದ್ದಿರುವ ಭಾರತ 16 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 7 ಗೆಲುವಿನೊಂದಿಗೆ ಎರಡನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಶನಿವಾರ ಆಸೀಸ್ ಪಡೆ ಬಾಂಗ್ಲಾದೇಶ ವಿರುದ್ದ 8 ವಿಕೆಟ್ ಸುಲಭ ಜಯ ದಾಖಲಿಸಿದೆ. ಆದಾಗ್ಯೂ ಅದರಿಂದ ಹೆಚ್ಚಿನ ಲಾಭ ಆಗಿಲ್ಲ. ಏಳು ಪಂದ್ಯಗಳಲ್ಲಿ ಗೆದ್ದು 14 ಅಂಕಗಳನ್ನು ಪಡೆದುಕೊಂಡಿದ್ದು, 0.841 ನೆಟ್ರನ್ರೇಟ್ ಪಡೆದುಕೊಂಡಿದೆ.
ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಸೋತ ತಕ್ಷಣವೇ ನ್ಯೂಜಿಲ್ಯಾಂಡ್ ತಂಡದ ಸೆಮೀಸ್ ಹಾದಿ ಸುಗಮವಾಗಿದೆ. ಆ ತಂಡ 10 ಅಂಕಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಅದರ ನೆಟ್ರನ್ರೇಟ್ +0.743.
ಇದನ್ನೂ ಓದಿ: ICC World Cup 2023 : ಸೋತು ಸುಣ್ಣವಾಗಿ ವಿಶ್ವ ಕಪ್ನಲ್ಲಿ ಆಟ ಮುಗಿಸಿದ ಪಾಕಿಸ್ತಾನ
ಇಂಗ್ಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನ ಐದನೇ ಸ್ಥಾನ ಪಡೆದುಕೊಂಡು ಹಾಲಿ ವಿಶ್ವ ಕಪ್ ಅಭಿಯಾನ ಮುಗಿಸಿದೆ. ಅಫಘಾನಿಸ್ತಾನ 6ನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ತಂಡ ಪಾಕ್ ವಿರುದ್ದ ಗೆದ್ದು ಒಟ್ಟು 3 ಗೆಲುವಿನ ಶ್ರೇಯಸ್ಸಿಗೆ ಪಾತ್ರವಾಗಿದೆ. ಆ ತಂಡ ಬಳಿ 6 ಅಂಕಗಳಿವೆ ಹಾಗೂ -0.572 ನೆಟ್ರನ್ರೇಟ್ ಇದೆ. ಪಾಕ್ ವಿರುದ್ಧ ಗೆದ್ದ ಕಾರಣ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅರ್ಹತೆ ಗಳಿಸಿಕೊಂಡಿದೆ. ಆಸೀಸ್ ವಿರುದ್ಧ ಶನಿವಾರದ ಪಂದ್ಯದಲ್ಲಿ ಸೋತ ಬಾಂಗ್ಲಾದೇಶ ಎಂಟನೇ ಹಾಗೂ ಶ್ರೀಲಂಕಾ 9ನೇ ಹಾಗೂ ನೆದರ್ಲ್ಯಾಂಡ್ಸ್ 10ನೇ ಸ್ಥಾನ ಪಡೆದುಕೊಂಡಿದೆ.
ಅಂಕಪಟ್ಟಿ ಈ ರೀತಿ ಇದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 8 | 8 | 0 | 16 | +2.456 |
ದಕ್ಷಿಣ ಆಫ್ರಿಕಾ | 9 | 7 | 2 | 14 | +1.261 |
ಆಸ್ಟ್ರೇಲಿಯಾ | 9 | 7 | 2 | 14 | +0.841 |
ನ್ಯೂಜಿಲ್ಯಾಂಡ್ | 9 | 5 | 4 | 10 | +0.743 |
ಪಾಕಿಸ್ತಾನ | 9 | 4 | 5 | 8 | -0.199 |
ಅಫಘಾನಿಸ್ತಾನ | 9 | 4 | 5 | 8 | -0.336 |
ಇಂಗ್ಲೆಂಡ್ | 9 | 3 | 6 | 6 | -0.572 |
ಬಾಂಗ್ಲಾದೇಶ | 9 | 2 | 7 | 4 | -1.419 |
ಶ್ರೀಲಂಕಾ | 9 | 2 | 7 | 4 | -1.419 |
ನೆದರ್ಲ್ಯಾಂಡ್ಸ್ | 8 | 2 | 6 | 4 | -1.635 |
ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ನೆದರ್ಲೆಂಡ್ ವಿರುದ್ಧ ಜಯ ಗಳಿಸುವುದು ಬಹುತೇಕ ಖಚಿತ. ಹೀಗಾಗಿ ಈ ಅಂಕಪಟ್ಟಿಯಲ್ಲಿ ಹೆಚ್ಚಿನ ಬದಲಾವಣೆ ಉಂಟಾಗದು.