Site icon Vistara News

Wrestling Federation of India ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವುದು ಯಾಕೆ? ಅವರ ಆರೋಪಗಳೇನು; ಏನಿದು ಪ್ರಕರಣ?

WFI

ನವ ದೆಹಲಿ: ವಿಶ್ವ ಚಾಂಪಿಯನ್​ಗಳು, ಒಲಿಂಪಿಯನ್​ಗಳು ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ನವ ದೆಹಲಿಯ ಜಂತರ್​-ಮಂತರ್​ ಮೈದಾನದಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ (Wrestling Federation India) ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರ ಪದತ್ಯಾಗಕ್ಕಾಗಿ ಅವರು ಹಕ್ಕೊತ್ತಾಯ ಮಂಡಿಸಿದ್ದಾರೆ. ಅಧ್ಯಕ್ಷರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹಾಗೂ ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂಬುದು ಅವರೆಲ್ಲರ ಒಕ್ಕೊರಲಿನ ಆರೋಪ.

ನಮ್ಮ ಪ್ರತಿಭಟನೆ ಭಾರತೀಯ ಕುಸ್ತಿ ಒಕ್ಕೂಟ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರದ ವಿರುದ್ಧವಲ್ಲ. ಬ್ರಿಜ್​ ಭೂಷಣ್​ ಸಿಂಗ್ ಅವರ ವಿರುದ್ಧ. ಅವರು ಉನ್ನತ ಹುದ್ದೆಯಲ್ಲಿ ಇರುವ ತನಕ ಸಂಸ್ಥೆಯ ಮೂಲಕ ಅಭ್ಯಾಸ ಮುಂದುವರಿಸುವುದು ಸಾಧ್ಯವಿಲ್ಲ ಎಂಬುದಾಗಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಒಲಿಂಪಿಕ್​ ಪದಕ ವಿಜೇತರಾದ ಸಾಕ್ಷಿ ಮಲಿಕ್​, ಬಜರಂಗ್​ ಪೂನಿಯಾ, ವಿಶ್ವ ಚಾಂಪಿಯನ್​ ವಿನೇಶ್​ ಫೋಗಾಟ್​, ಸರಿತಾ ಮೊರ್​, ಸಂಗೀತಾ ಫೋಗಾಟ್​, ಸತ್ಯವೃತ್​​ ಮಲಿಕ್​, ಜಿತೇಂದ್ರ ಕಿನ್ಹಾ ಕಾಮನ್ವೆಲ್ತ್​ ಗೇಮ್ಸ್ ಪದಕ ವಿಜೇತ ಸುಮಿತ್​ ಮಲಿಕ್​ ಸೇರಿದಂತೆ ಒಟ್ಟು 30 ಕುಸ್ತಿಪಟುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಬ್ರಿಜ್​ ಭೂಷಣ್ ಸಿಂಗ್ ಅವರ ಕಿರುಕುಳದಿಂದಾಗಿ ಸ್ಪರ್ಧಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ. ಅವರು ನಮ್ಮ ಆತ್ಮಸ್ಥೈರ್ಯ ಕುಗ್ಗಿಸುತ್ತಿದ್ದಾರೆ ಎಂಬುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ.

ಮಹಿಳಾ ಕುಸ್ತಿಪಟುಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಇದನ್ನು ಪ್ರಶ್ನಿಸುವವರಿಗೆ ಬೆದರಿಸುತ್ತಿದ್ದಾರೆ. ಅಧ್ಯಕ್ಷರ ಮೇಲೆ ಮಾಡಿರುವ ನನ್ನನ್ನು ಕೊಲೆ ಮಾಡುವ ಬೆದರಿಕೆ ಒಡ್ಡಲಾಗಿದೆ ಎಂದು ವಿನೇಶ್​ ಫೊಗಾಟ್​ ದೂರಿದ್ದಾರೆ.

ಯಾರು ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ?

ಬ್ರಿಜ್​ಭೂಷಣ್​ ಶರಣ್​ ಸಿಂಗ್ ಉತ್ತರ ಪ್ರದೇಶದ ಕೈಸರ್​ಗಂಜ್​ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದಾರೆ. 2011ರಿಂದ ಸತತವಾಗಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಬ್ರಿಜ್​ ಭೂಷಣ್ ಸಿಂಗ್​ ಮತ್ತು ವಿದಾದಗಳಿಗೆ ಬಿಡದ ನಂಟು. ಸ್ವತಃ ಕುಸ್ತಿಪಟುವಾಗಿರುವ ಅವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಕೇಸ್​ ಹಾಕಿಸಿಕೊಂಡವರು. ಬಳಿಕ ಮಾಫಿಯಾ ಗೂಂಡಾಗಳಿಗೆ ಆಶ್ರಯ ನೀಡಿ ಟಾಡಾ ಕೇಸ್​ ಹಾಕಿಸಿಕೊಂಡಿದ್ದರು. ಈ ಎಲ್ಲ ಪ್ರಕರಣಗಳು ಖುಲಾಸೆಯಾಗಿವೆ. ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ರಾಜ್ಯ ಸರಕಾರ ಹಾಗೂ ಯೋಗ ಗುರು ಬಾಬಾ ರಾಮ್​ದೇವ್​ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕವೂ ವಿವಾದಕ್ಕೆ ಒಳಗಾಗಿದ್ದರು. ಯುವ ಕುಸ್ತಿಪಟುವೊಬ್ಬರಿಗೆ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಹಲ್ಲೆ ಮಾಡಿಯೂ ಸುದ್ದಿಯಾಗಿದ್ದರು. ಕಾನೂನು ಪದವಿ ಪಡೆದಿರುವ ಬ್ರಿಜ್​ ಭೂಷಣ್ ಕಾಲೇಜು ದಿನಗಳಲ್ಲಿ ಕುಸ್ತಿಪಟುವಾಗಿದ್ದರು. ಭುಜ, ಬಲದ ಮೂಲಕ ತಮ್ಮ ಕ್ಷೇತ್ರದಲ್ಲಿ ಚಿರಪರಿಚಿತರು. ಅವರನ್ನು ಮಸಲ್​ ಮ್ಯಾನ್​ ಎಂದೂ ಜನ ಕರೆಯುತ್ತಾರೆ.

ಕುಸ್ತಿಪಟುಗಳು ಬೇಡಿಕೆ ಏನು?

ಬ್ರಿಜ್​ ಭೂಷಣ್​ ಸಿಂಗ್​ 2011ರಿಂದ ಮೂರು ಅವಧಿಗೆ ಕುಸ್ತಿ ಒಕ್ಕೂಟದ ಅಧ್ಯಕ್ಷರ ಹುದ್ದೆಯಲ್ಲಿದ್ದಾರೆ. 2019ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ನಿರಂಕುಶ ಆಡಳಿತಕ್ಕೆ ನಾವೆಲ್ಲ ಬಲಿಯಾಗುತ್ತಿದ್ದೇವೆ. ಅವರನ್ನು ತಕ್ಷಣದಿಂದಲೇ ವಜಾಗೊಳಿಸಬೇಕು.

ಕೋಚಿಂಗ್​ ಕ್ಯಾಂಪ್​ಗಳು, ತರಬೇತುದಾರರು, ಫಿಸಿಯೊಗಳು ನವ ದೆಹಲಿಗೆ ಬಂದು ತರಬೇತಿ ನೀಡಬೇಕು. ಅವರೆಲ್ಲರೂ ಲಖನೌನಲ್ಲಿದ್ದು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ.

ಕುಸ್ತಿ ಒಕ್ಕೂಟದಲ್ಲಿ ಹಣಕಾಸಿನ ಅಕ್ರಮ ನಡೆಯತ್ತಿದೆ. ಬಿಡುಗಡೆಯಾಗಿರುವ ಹಣ ಕುಸ್ತಿಪಟುಗಳಿಗೆ ವಿನಿಯೋಗ ಆಗುತ್ತಿಲ್ಲ. ಅಧಿಕಾರಿಗಳು ಸ್ವಂತಕ್ಕೆ ಬಳಸುತ್ತಿದ್ದಾರೆ.

ಯಾರ ಮೇಲೆ ದೌರ್ಜನ್ಯ?

ಕುಸ್ತಿ ಒಕ್ಕೂಟದಲ್ಲಿ ತರಬೇತಿ ಪಡೆದಯುತ್ತಿರುವ 10ರಿಂದ 15 ಮಹಿಳಾ ಕುಸ್ತಿಪಟುಗಳ ಮೇಲೆ ದೌರ್ಜನ್ಯ ನಡೆದಿದೆ. ಅವರ ಹೆಸರನ್ನು ನಾನೀಗ ಬಹಿರಂಗ ಮಾಡುವುದಿಲ್ಲ. ಒಂದು ವೇಳೆ ಗೃಹ ಸಚಿವ ಅಮಿತ್​ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲು ಅವಕಾಶ ಕೊಟ್ಟರೆ ಅವರ ಮುಂದೆ ಹೇಳುತ್ತೇವೆ ಎಂದು ವಿನೇಶ್​ ಫೋಗಾಟ್​ ಹೇಳಿದ್ದಾರೆ.

ಬ್ರಿಜ್​ ಭೂಷಣ್​ ಏನು ಹೇಳುತ್ತಾರೆ ?

ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿರುವ ಬ್ರಿಜ್​ ಭೂಷಣ್ ಅವರು ಕುಸ್ತಿಪಟುಗಳ ಆರೋಪವನ್ನು ನಿರಾಕರಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಒಂದೇ ಒಂದು ಪ್ರಕರಣ ನಡೆದಿಲ್ಲ.ನಾನು ತನಿಖೆಗೆ ಸಿದ್ದ. ಒಂದು ವೇಳೆ ಅದು ಸಾಬೀತಾದರೆ ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಕ್ರೀಡಾ ಸಚಿವರ ಜತೆ ಸಭೆ

ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಹಾಗೂ ಕುಸ್ತಿ ಒಕ್ಕೂಟದ ಪದಾಧಿಕಾರಿಗಳು ಗುರುವಾರ ರಾತ್ರಿ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಈ ಸಭೆಯ ಬಳಿಕವೂ ರಾಜೀನಾಮೆ ನೀಡಲು ಬ್ರಿಜ್​ ಭೂಷಣ್​ ಒಪ್ಪಿಲ್ಲ. ನಾನು ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. ಆರೋಪಗಳನ್ನು ಹೊತ್ತುಕೊಂಡು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಶುಕ್ರವಾರವೂ ಪ್ರತಿಭಟನೆ ಮುಂದುವರಿದಿದೆ.

ಪಟ್ಟು ಬಿಡದ ಅಥ್ಲೀಟ್​ಗಳು

ಕ್ರೀಡಾ ಸಚಿವರ ಭೇಟಿ ನಂತರವೂ ಕುಸ್ತಿಪಟುಗಳು ತಮ್ಮ ಪಟ್ಟು ಬಿಟ್ಟಿಲ್ಲ. ಅವರೆಲ್ಲರೂ ಬ್ರಿಜ್​ ಭೂಷಣ್​ ರಾಜೀನಾಮೆ ನೀಡುವ ತನಕ ಪ್ರತಿಭಟನೆ ಕೊನೆಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಯುವ ತನಕ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ಮುಂದುವರಿಯಲಿದೆ. ಒಂದು ವೇಳೆ ಅಥ್ಲೀಟ್​ಗಳು ಇದೇ ರೀತಿ ಪ್ರತಿಭಟನೆ ಮುಂದುವರಿಸಿದರೆ ಅವರ ಅಭ್ಯಾಸಕ್ಕೆ ತೊಂದರೆಯಾಗಲಿದೆ. 2023ರಲ್ಲಿ ಏಷ್ಯಾ ಕಪ್​ ಸೇರಿದಂತೆ ಹಲವಾರು ಕೂಟಗಳಿವೆ.

ಮೂಗು ತೂರಿಸಿದ ರಾಜಕಾರಣಿಗಳು

ಕುಸ್ತಿಪಟುಗಳು ಪ್ರತಿಭಟನೆಗೆ ದೇಶಾದ್ಯಂತ ಬೆಂಬಲದ ದೊರೆಯುತ್ತಿದೆ. ಇದೇ ವೇಳೆ ರಾಜಕಾರಣಿಗಳು ಕೂಡ ಮೂಗು ತೂರಿಸಲು ಆರಂಭಿಸಿದ್ದಾರೆ. ಬ್ರಿಜ್​ ಭೂಷಣ್​ ಬಿಜೆಪಿ ಲೋಕ ಸಭಾ ಸದಸ್ಯರಾಗಿರುವ ಕಾರಣ ಅವರ ವಿರುದ್ಧ ಧ್ವನಿ ಎತ್ತಲು ಸಿಕ್ಕಿರುವ ಅವಕಾಶವನ್ನು ಪ್ರತಿಪಕ್ಷಗಳ ಮುಖಂಡರು ಬಳಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಅಥ್ಲೀಟ್​ಗಳ ಪ್ರತಿಭಟನೆ ನಮ್ಮ ಬೆಂಬಲ ಎಂದಿದ್ದಾರೆ. ಆದರೆ, ಕುಸ್ತಿಪಟುಗಳು ನಮ್ಮ ಪ್ರತಿಭಟನೆಯನ್ನು ಯಾರೂ ರಾಜಕೀಯಕ್ಕೆ ಬಳಸಬಾರದು ಎಂದು ಮನವಿ ಮಾಡಿದ್ದಾರೆ. ಬುಧವಾರ ಪ್ರತಿಭಟನಾ ಸ್ಥಳಕ್ಕೆ ಹೋಗಿ ವೇದಿಕೆ ಹತ್ತಲು ಯತ್ನಿಸಿದ ಸಿಪಿಎಂ ನಾಯಕ ಬೃಂದಾ ಕಾರಟ್​ ಅವರನ್ನು ಕುಸ್ತಿಪಟುಗಳು ಕೆಳಕ್ಕೆ ಇಳಿಸಿದ್ದರು.

ಇದನ್ನು ಓದಿ | Priyanka Gandhi | ಕುಸ್ತಿ ಪಟುಗಳ ಲೈಂಗಿಕ ಕಿರುಕುಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿ; ಪ್ರಿಯಾಂಕಾ ಗಾಂಧಿ ಆಗ್ರಹ

Exit mobile version