Site icon Vistara News

KL Rahul : ಆಡುವುದು ಲಕ್ನೊ ಪರ, ಥ್ಯಾಂಕ್ಸ್​ ಹೇಳಿದ್ದು ಆರ್​ಸಿಬಿಗೆ; ಏನಾಯಿತು ರಾಹುಲ್​ಗೆ?

KL Rahul

ಬೆಂಗಳೂರು: ಕೆಎಲ್ ರಾಹುಲ್ (KL Rahul) ನೇತೃತ್ವದ ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ನಡೆದ ಏಕ ದಿನ ಸರಣಿಯಲ್ಲಿ ಆತಿಥೇಯರನ್ನು 2-1 ಅಂತರದಿಂದ ಸೋಲಿಸುವ ಮೂಲಕ ಅಪರೂಪದ ಸಾಧನೆ ಮಾಡಿದೆ. ಇದು ಭಾರತ ತಂಡಕ್ಕೆ ಏಕದಿನ ಮಾದರಿಯಲ್ಲಿ ಕಾಮನಬಿಲ್ಲು ರಾಷ್ಟ್ರದಲ್ಲಿ ಐದು ವರ್ಷಗಳ ಬಳಿಕ ದೊರೆತ ಸರಣಿ ವಿಜಯ. 2018ರಲ್ಲಿ ಕೊಹ್ಲಿನೇತೃತ್ವದ ತಂಡ ಕೊನೇ ಬಾರಿ ಈ ಸಾಧನೆ ಮಾಡಿತ್ತು. ಕಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಮುಂಚೂಣಿ ಆಟಗಾರರ ಅನುಪಸ್ಥಿತಿಯಲ್ಲಿ, ರಾಹುಲ್ ಬಳಗ ಪ್ರಭಾಶಾಲಿ ಗೆಲುವನ್ನು ತನ್ನದಾಗಿಸಿಕೊಂಡಿತು.

ಸರಣಿಯದ್ದಕ್ಕೂ ಐಪಿಎಲ್​ನ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕ ತಮ್ಮ ಗೇಮ್​ ಪ್ಲ್ಯಾನ್​ನಲ್ಲಿ ಅದ್ಭುತ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ಯುವ ಭಾರತೀಯ ಬ್ರಿಗೇಡ್ ಗೆ ಭರವಸೆ ಮೂಡಿಸುವ ಕೆಲಸ ಮಾಡಿದ್ದಾರೆ.

ಅವರ ನಾಯಕತ್ವದ ಗುಣಲಕ್ಷಣಗಳನ್ನು ಹೊರತುಪಡಿಸಿ ರಾಹುಲ್ ಅವರ ಬ್ಯಾಟಿಂಗ್ ಕೂಡ ಇತ್ತೀಚಿನ ವರ್ಷಗಳಲ್ಲಿ ಗಮನ ಸೆಳೆಯುತ್ತಿದೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ವೃತ್ತಿಪರ ಕ್ರಿಕೆಟಿಗನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗಾಯದ ಸಮಸ್ಯೆಗಳ ಹೊರತಾಗಿಯೂ ಮಿಂಚುತ್ತಿದ್ದಾರೆ. ವಿಶೇಷವಾಗಿ ಅವರು ಸರಣಿಯಲ್ಲಿ ಪ್ರದರ್ಶಿಸಿರುವ ನಾಯಕತ್ವದ ಗುಣಮಟ್ವವನ್ನು ಕ್ರಿಕೆಟ್ ಪಂಡಿತರು ಮೆಚ್ಚಿ ಮಾತನಾಡಿದ್ದಾರೆ. ಅವರಿಗೆ ನಾಯಕತ್ವದ ಅವಕಾಶ ಮತ್ತು ಭದ್ರ ಅಡಿಪಾಯ ಹಾಕಿಕೊಟ್ಟಿರುವುದು ಲಕ್ನೊ ಸೂಪರ್ ಜೈಂಟ್ಸ್ ತಂಡ. ಅದಕ್ಕಿಂತ ಮೊದಲು ಅವರು ಪಂಜಾಬ್​ ತಂಡವನ್ನು ಮುನ್ನಡೆಸಿದ್ದರು. ಅದರೆ, ಸರಣಿ ಗೆಲುವಿನ ಬಳಿಕ ರಾಹುಲ್ ಧನ್ಯವಾದ ಸಲ್ಲಿಸಿದ್ದು ಆರ್​ಸಿಬಿಗೆ. ಇದು ಎಲ್ಲ ರ ಪಾಲಿಗೆ ಅಚ್ಚರಿಯ ಸಂಗತಿ. ಅವರಿಗೆ ಏನಾಯಿತು ಎಂದು ಎಲ್ಲರೂ ಪ್ರಶ್ನಿಸಿದ್ದಾರೆ.

ರಾಹುಲ್ ಹೇಳಿದ್ದೇನು?

ಯುವ ಕ್ರಿಕೆಟಿಗನಾಗಿದ್ದ ಆರಂಭಿಕ ವರ್ಷಗಳಲ್ಲಿ, ಆರ್​ಸಿಬಿಗಾಗಿ ಆಡಿದ್ದೆ. ಆ ತಂಡಕ್ಕೆ ಆಡುವುದು ತನ್ನ ಬಾಲ್ಯದ ಕನಸಾಗಿತ್ತು ಎಂದು ರಾಹುಲ್ ಹೇಳಿದ್ದಾರೆ. ಅವರು ತಮ್ಮ ಆಟವನ್ನು ಮುಂದಿನ ಹಂತಕ್ಕೆ ಪರಿವರ್ತಿಸಲು ಸಹಾಯ ಮಾಡುವಲ್ಲಿ ತಮ್ಮ ಮಾಜಿ ಫ್ರಾಂಚೈಸಿ ಉತ್ತಮ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಕೆ. ಎಲ್​ ರಾಹುಲ್ ಹೇಳಿಕೆ ಈ ರೀತಿ ಇದೆ

ನಾನು ಚಿಕ್ಕವನಿದ್ದಾಗ ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಆರ್​ಸಿಬಿ ನನಗೆ ಅವಕಾಶವನ್ನು ನೀಡಿತು. ನಾನು ಬೆಂಗಳೂರಿನವನು. ಆದ್ದರಿಂದ ಐಪಿಎಲ್ ಪ್ರಾರಂಭವಾದಾಗ ನಾನು ಯಾವಾಗಲೂ ಆರ್​ಸಿಬಿಗಾಗಿ ಆಡುವ ಕನಸು ಕಂಡಿದ್ದೆ. ಕೆಲವು ವರ್ಷಗಳ ಕಾಲ ಆ ತಂಡಕ್ಕಾಗಿ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಆದ್ದರಿಂದ ಆರ್​ಸಿಬಿ ನನಗೆ ತುಂಬಾ ಹತ್ತಿರವಾಗಿದೆ ಎಂದು ಅವರು ಹೇಳಿದರು.

ಕಳೆದ ತಿಂಗಳು ಮುಕ್ತಾಯಗೊಂಡ ಏಕದಿನ ವಿಶ್ವಕಪ್​​ನಲ್ಲಿ ರಾಹುಲ್ ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 452 ರನ್​​ಗಳನ್ಉ ಬಾರಿಸಿದ್ದರು. ಅಲ್ಲದೆ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು.

ರೋಹಿತ್ ಶರ್ಮಾ ಅವರ ನಿವೃತ್ತಿಯ ಪ್ರಶ್ನೆಯು ಹೆಚ್ಚಾಗುತ್ತಿದ್ದಂತೆ ಕೆಎಲ್ ಅವರನ್ನು ಶೀಘ್ರದಲ್ಲೇ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ಹಸ್ತಾಂತರಿಸಬಹುದು ಎಂದು ಹೇಳಲಾಗುತ್ತಿದೆ. ಬೆಂಗಳೂರು ಮೂಲದ ವಿಕೆಟ್ ಕೀಪರ್ ಬ್ಯಾಟರ್​ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಆವೃತ್ತಿಯಲ್ಲಿ ಲಕ್ನೋ ತಂಡವನ್ನು ಮುನ್ನಡೆಸಲಿದ್ದಾರೆ.

Exit mobile version