ಬಾರ್ಬಡಾಸ್: ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು(West Indies vs India, 1st ODI) ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಗೆದ್ದು ಬೀಗಿದೆ. ಆದರೆ ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಸಂಜು ಸ್ಯಾಮ್ಸನ್(Sanju Samson’s jersey) ಅವರ ಜೆರ್ಸಿಯನ್ನು ಧರಿಸಿ ಕಣಕ್ಕಿಳಿದಿದ್ದರು. ಸೂರ್ಯಕುಮಾರ್ ಅವರು ತಮ್ಮ ಜೆರ್ಸಿಯನ್ನು ಬಿಟ್ಟು ಸಂಜು ಅವರ ಜೆರ್ಸಿ ತೊಡಲು ಕಾರಣ ಏನೆಂಬುದು ಇದೀಗ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ ಇದರ ಕಾರಣ ಕೇಳಿದರೆ ಎಂತವರಿಗೂ ನಗು ಬರುವುದು ಗ್ಯಾರಂಟಿ.
ವಿಂಡೀಸ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಬಹುದು ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಸಂಜು ಬದಲು ಇಶಾನ್ ಕಿಶನ್ಗೆ ಅವಕಾಶ ನೀಡಲಾಗಿತ್ತು. ಇದೇ ವೇಳೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯ ವಿರುದ್ಧ ಹಲವರು ಕಿಡಿಕಾರಲು ಪ್ರಾರಂಭಿಸಿದರು. ಆದರೆ ಟೀಮ್ ಇಂಡಿಯಾ ಆಟಗಾರರು ಮೈದಾನಕ್ಕೆ ಬರುತ್ತಿದ್ದ ವೇಳೆ ಸಂಜು ಅವರ ಜೆರ್ಸಿ ಕಾಣಿಸಿಕೊಂಡಿತು. ಟಾಸ್ ವೇಳೆ ತಂಡದಲ್ಲಿ ಸ್ಥಾನ ಪಡೆಯದ ಸಂಜು ಅವರು ಹೇಗೆ ಆಡುವ ಬಳಗದಲ್ಲಿ ಕಾಣಿಸಿಕೊಂಡರು ಎಂದು ಎಲ್ಲರೂ ಒಮ್ಮೆ ಆಲೋಚಿಸತೊಡಗಿದರು. ಬಳಿಕ ಇದು ಸಂಜು ಅಲ್ಲ ಅವರ ಜೆರ್ಸಿಯಲ್ಲಿ ಆಡಲಿಳಿದ ಸೂರ್ಯಕುಮಾರ್ ಎಂದು ತಿಳಿದು ಬಂದಿದೆ.
ಇದನ್ನೂ ಓದಿ IND vs WI 1st ODI: ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಗೆ ಕಾರಣ ತಿಳಿಸಿದ ನಾಯಕ ರೋಹಿತ್
Surya wearing the Jersey of Sanju Samson. pic.twitter.com/xTUTwrmyhk
— Johns. (@CricCrazyJohns) July 27, 2023
ಸಂಜು ಸ್ಥಾನ ಪಡೆಯದಿದ್ದರೂ ಅವರ ಅಭಿಮಾನಿಗಳಿಗೆ ಬೇಸರವಾಗಬಾರದೆಂದು ಸೂರ್ಯಕುಮಾರ್ ಈ ಜೆರ್ಸಿ ತೊಟ್ಟಿದ್ದಾರೆ ಎಂದು ಎಲ್ಲರು ಭಾವಿಸಿದ್ದಾರೆ. ಆದರೆ ಅಸಲಿಗೆ ಕಾರಣ ಬೇರೆಯೇ ಇದೆ. ಹೌದು ಸೂರ್ಯಕುಮಾರ್ ಅವರ ಜೆರ್ಸಿಯ ಸೈಜ್ ಬದಲಾದ ಕಾರಣ ಅವರು ಸಂಜು ಅವರ ಜೆರ್ಸಿಯನ್ನು ಧರಿಸಿ ಕಣಕ್ಕಿಳಿದರು. ಪಂದ್ಯಕ್ಕೂ ಮುನ್ನ ನಡೆದ ಫೋಟೊಶೂಟ್ ವೇಳೆ ಸೂರ್ಯ ಅವರ ಜೆರ್ಸಿಯ ಸೈಜ್ ಬದಲಾಗಿರುವುದು ಗಮನಕ್ಕೆ ಬಂದಿದೆ. ಈ ವಿಚಾರವನ್ನು ಟೀಮ್ ಮ್ಯಾನೆಜ್ಮೆಂಟ್ಗೆ ಗಮನಕ್ಕೆ ತಂದರೂ ತಕ್ಷಣ ಜರ್ಸಿಯನ್ನು ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಸೂರ್ಯ ಅವರು ಸಂಜು ಜೆರ್ಸಿ ತೊಟ್ಟು ಆಡಿದರು. ಸಂಜು ಜೆರ್ಸಿಯಲ್ಲಿ ಕಾಣಿಸಿಕೊಂಡ ಸೂರ್ಯಕುಮಾರ್ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಸೂರ್ಯಕುಮಾರ್ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸಲು ವಿಫಲರಾದರು. 25 ಎಸೆತ ಎದುರಿಸಿ ಕೇವಲ 19 ರನ್ಗೆ ಆಟಮುಗಿಸಿದರು. ದ್ವಿತೀಯ ಪಂದ್ಯದಲ್ಲಿ ಸಿಡಿಯದೇ ಹೋದರೆ ಅಂತಿಮ ಪಂದ್ಯದಲ್ಲಿ ಅವರ ಬದಲು ಸಂಜು ಆಡುವ ಅವಕಾಶ ಪಡೆಯಬಹುದು.