ಮೊಹಾಲಿ : ೨೦೦ಕ್ಕೂ ಅಧಿಕ ರನ್ ಪೇರಿಸಿದ್ದರಿಂದ ಎದುರಾಳಿ ತಂಡಕ್ಕೆ ಚೇಸ್ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ, ನಮ್ಮ ಬೌಲರ್‌ಗಳು ಪ್ರವಾಸಿ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಲು ವಿಫಲಗೊಂಡರು. ಹೀಗೆಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ೨೦ ಸರಣಿಯ ಮೊದಲ ಪಂದ್ಯದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರೂ ಬೌಲಿಂಗ್‌ನಲ್ಲಿ ನಾವೆಲ್ಲೋ ಎಡವಿದೆವು ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು.
ಮಂಗಳವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಸೋತಿರುವುದು ಯಾಕೆ ಎಂಬ ಪ್ರಶ್ನೆಗೆ ಇದು ಸಮರ್ಪಕ ಉತ್ತರ. ಕ್ರಿಕೆಟ್ ಪಂಡಿತರೂ ಇದೇ ಮಾತನ್ನು ಹೇಳುತ್ತಿದ್ದಾರೆ. ಟಿ೨೦ ವಿಶ್ವ ಕಪ್‌ಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಚೈತನ್ಯ ಪಡೆದುಕೊಂಡಿಲ್ಲ. ಏಷ್ಯಾ ಕಪ್ ಸೋಲಿಗೆ ಕಾರಣವೂ ಬೌಲಿಂಗ್ ವಿಭಾಗದ ವೈಫಲ್ಯ ಎಂಬ ಅರಿವಿನ ಹೊರತಾಗಿಯೂ ಬಿಗು ದಾಳಿ ನಡೆಸುತ್ತಿಲ್ಲ ಎಂಬುದು ಎಲ್ಲರ ಅಭಿಪ್ರಾಯ.
ಮೊಹಾಲಿ ಪಿಚ್ ಬ್ಯಾಟಿಂಗ್‌ಗೆ ಪೂರಕ ಹಾಗೂ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡವರು ಸೋಲುತ್ತಾರೆ ಎಂಬುದಕ್ಕೆ ಹಲವು ಪಂದ್ಯಗಳ ನಿದರ್ಶನಗಳಿವೆ. ಆದರೆ, ಮಂಗಳವಾರದ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲ್ಲುವ ಅವಕಾಶವಿತ್ತು. ಆದರೆ, ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬುದು ಪಂದ್ಯ ವೀಕ್ಷಣೆ ಮಾಡಿರುವ ಎಲ್ಲರ ಅನುಭವಕ್ಕೆ ಬಂದಿರುವ ವಿಚಾರ.
ಬುಮ್ರಾ ಅಲಭ್ಯ
ಮೊದಲ ಪಂದ್ಯದಲ್ಲಿ ಬೌಲಿಂಗ್ ವಿಭಾಗದ ಶಕ್ತಿ ಕಡಿಮೆಯಾಗಲು ಜಸ್‌ಪ್ರಿತ್ ಬುಮ್ರಾ ಅವರ ಅಲಭ್ಯತೆಯೇ ಕಾರಣ. ಅವರಿಗೆ ವಿಶ್ರಾಂತಿ ನೀಡಿ ಉಮೇಶ್ ಯಾದವ್ ಅವರಿಗೆ ಅವಕಾಶ ನೀಡಲಾಗಿದ್ದರೂ ಅವರು ಎದುರಾಳಿ ಬ್ಯಾಟರ್‌ಗಳಿಗೆ ಭಯ ಹುಟ್ಟಿಸಲು ವಿಫಲಗೊಂಡರು. ಭುವನೇಶ್ವರ್ ಕುಮಾರ್ ಅನುಭವಿ ಬೌಲರ್ ಆಗಿದ್ದರೂ, ೪ ಓವರ್‌ಗಳ ಸ್ಪೆಲ್‌ನಲ್ಲಿ ೫೨ ರನ್ ಬಿಟ್ಟುಕೊಟ್ಟರಲ್ಲದೆ ಒಂದೇ ಒಂದು ವಿಕೆಟ್ ಕಬಳಿಸಲಿಲ್ಲ. ಒಟ್ಟಾರೆ ನಾಲ್ಕು ವೈಡ್‌ಗಳನ್ನು ಕೂಡ ಅವರ ಎಸೆದಿದ್ದಾರೆ. ೧೯ನೇ ಓವರ್‌ನಲ್ಲಿ ೧೬ ರನ್ ಬಿಟ್ಟುಕೊಟ್ಟರು. ಹೀಗಾಗಿ ಭಾರತಕ್ಕೆ ಗೆಲುವಿಗೆ ಇದ್ದ ಕೊನೇ ಅವಕಾಶವೂ ನಷ್ಟವಾಯಿತು. ಆಡುವ ೧೧ರ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದ ಹರ್ಷಲ್ ಪಟೇಲ್ ಇನಿಂಗ್ಸ್‌ನ ೧೮ನೇ ಓವರ್‌ನಲ್ಲಿ ೨೨ ರನ್ ಬಿಟ್ಟುಕೊಟ್ಟಿದ್ದರು. ಅಲ್ಲದೆ, ೪ ಓವರ್‌ಗಳ ಸ್ಪೆಲ್‌ನಲ್ಲಿ ೪೯ ರನ್ ನೀಡಿದ್ದರು. ಯಜ್ವೇಂದ್ರ ಚಹಲ್ ೩.೨ ಓವರ್‌ಗಳಲ್ಲಿ ೪೨ ರನ್ ಬಿಟ್ಟುಕೊಟ್ಟಿದ್ದಾರೆ.
ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಪ್ರಭಾವ ಬೀರಿದ್ದು ಅಕ್ಷರ್ ಪಟೇಲ್ ಒಬ್ಬರೇ. ೪ ಓವರ್‌ಗಳಲ್ಲಿ ೧೭ ರನ್ ವೆಚ್ಚದಲ್ಲಿ ಪ್ರಮುಖ ೩ ವಿಕೆಟ್ ಪಡೆದರು. ಅಲ್ಲದೆ, ಪ್ರವಾಸಿ ತಂಡದ ಬ್ಯಾಟರ್‌ಗಳ ಮೇಲೆ ನಿರಂತರ ಒತ್ತಡ ಹೇರಿದರು. ಈ ಕೆಲಸವನ್ನು ಉಳಿದ ಬೌಲರ್‌ಗಳಲ್ಲಿ ಒಬ್ಬರು ಮಾಡಿದ್ದರೆ ವಿಜಯಲಕ್ಷ್ಮಿ ಭಾರತಕ್ಕೆ ಒಲಿಯುತ್ತಿದ್ದಳು.
ಕ್ಯಾಚ್ ಬಿಟ್ಟರು
ಭಾರತ ತಂಡ ಫೀಲ್ಡಿಂಗ್‌ನಲ್ಲೂ ಜಿದ್ದು ತೋರಲಿಲ್ಲ. ಪ್ರಮುಖವಾಗಿ ಎರಡು ಕ್ಯಾಚ್‌ಗಳನ್ನು ಕೈ ಚೆಲ್ಲಿದರು. ಆಸ್ಟ್ರೇಲಿಯಾ ಪರ ೬೧ ರನ್ ಬಾರಿಸಿದ್ದ ಕ್ಯಾಮೆರಾನ್ ಗ್ರೀನ್ ಕ್ಯಾಚ್ ಅನ್ನು ಕೆ.ಎಲ್ ರಾಹುಲ್ ಕೈ ಚೆಲ್ಲಿದರೆ, ಸ್ಟೀವ್ ಸ್ಮಿತ್‌ಗೆ ಅಕ್ಷರ್ ಪಟೇಲ್ ಜೀವದಾನ ನೀಡಿದ್ದರು.
ಇಬ್ಬನಿ ಪರಿಣಾಮ
ಮೊಹಾಲಿಯಲ್ಲಿ ಕತ್ತಲಾಗುತ್ತಿದ್ದಂತೆ ಇಬ್ಬನಿ ಶುರುವಾಗುತ್ತದೆ. ಇದರಿಂದ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ಮಾಡುವ ತಂಡಕ್ಕೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುವುದಿಲ್ಲ. ಅಂತೆಯೇ ಆಯಿತು. ಭಾರತದ ಬೌಲರ್‌ಗಳಿಗೆ ಎದುರಾಳಿ ತಂಡದ ಬ್ಯಾಟರ್‌ಗಳು ಚೆನ್ನಾಗಿ ದಂಡಿಸಿದರು. ಭಾರತ ತಂಡದ ಪ್ರಮುಖ ಬೌಲರ್‌ಗಳು ಪಿಚ್‌ನ ಯಾವುದೇ ಅನುಕೂಲಗಳನ್ನು ಪಡೆದುಕೊಳ್ಳಲಿಲ್ಲ.
ಟಾಸ್ ಸೋಲು
ಮೊಹಾಲಿಯಲ್ಲಿ ಟಾಸ್ ಸೋತರೆ ಬಹುತೇಕ ಪಂದ್ಯ ಸೋತಂತೆ. ಅಂತೆಯೇ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮ ಟಾಸ್ ಸೋತರು. ಆಸ್ಟ್ರೇಲಿಯಾ ತಂಡದ ಆರೋನ್ ಫಿಂಚ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅವರಿಗೆ ಗೆಲುವಿನ ನಿರೀಕ್ಷೆ ಇತ್ತು. ಅದನ್ನು ದಕ್ಕಿಸಿಕೊಂಡರು.
ಇದನ್ನೂ | IND vs AUS | ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ 4 ವಿಕೆಟ್ ಸೋಲು