ಮುಂಬಯಿ: ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ (INDvsWI) ಬಹು ಸ್ವರೂಪದ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ತಂಡದ ಆಯ್ಕೆ ಸಮಿತಿಯು ಅಧಿಕೃತವಾಗಿ ತಂಡಗಳನ್ನು ಪ್ರಕಟಿಸಿದೆ. ಟೆಸ್ಟ್ ಮತ್ತು ಏಕದಿನ ಸರಣಿಗೆ ತಂಡಗಳನ್ನು ಪ್ರಕಟಿಸಲಾಗಿದ್ದು ಮುಂದಿನ ದಿನಗಳಲ್ಲಿ ಟಿ20 ತಂಡವನ್ನು ಪ್ರಕಟಿಸುವುದಾಗಿ ಹೇಳಿದೆ. ಈ ತಂಡದ ಪ್ರಮುಖ ಹೈಲೈಟ್ ಎಂದರೆ ಟೆಸ್ಟ್ ಸರಣಿಗೆ ಚೇತೇಶ್ವರ್ ಪೂಜಾರ ಅವರನ್ನು ಹೊರಗಿಟ್ಟಿರುವುದು. ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ಅವರನ್ನು ವಿಂಡೀಸ್ ಸರಣಿಗೆ ಕೈ ಬಿಟ್ಟಿರುವ ವಿಚಾರ ಚರ್ಚೆಗೆ ಕಾರಣವಾಗಿದೆ. ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಎಲ್ಲರೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವಾಗ ಪೂಜಾರ ಅವರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : INDvsWI 2023 : ರಿಷಭ್, ರಾಹುಲ್ ಅನುಪಸ್ಥಿತಿಯಲ್ಲಿ ಕೇರಳದ ವಿಕೆಟ್‌ಕೀಪರ್‌ಗೆ ಸಿಕ್ಕಿತು ಚಾನ್ಸ್!
ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) 2021-23 ರ ಫೈನಲ್‌ನಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿತ್ತು. ಅದಕ್ಕೆ ಭಾರತ ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಕಾರಣ. ಭಾರತೀಯ ತಂಡದ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವನ್ನು ಗವಾಸ್ಕರ್ ಇಲ್ಲಿ ಉಲ್ಲೇಖಿಸಿದ್ದಾರೆ. ಫೈನಲ್‌ನಲ್ಲಿ ಸಂದರ್ಭಕ್ಕೆ ತಕ್ಕಂತೆ ಎಲ್ಲ ಆಟಗಾರರು ಆಡದೇ ಇರುವಾಗ ವೈಫಲ್ಯಗಳಿಗೆ ಪೂಜಾರ ಅವರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಆಯ್ಕೆ ಸಮಿತಿ ಸ್ಪಷ್ಟವಾಗಿ, ಒಬ್ಬ ಆಟಗಾರನನ್ನು ಮಾತ್ರ ಪ್ರತ್ಯೇಕಿಸಿ ನೋಡುತ್ತಿದೆ. ಇತರರು ಸಹ ಬ್ಯಾಟಿಂಗ್‌ನಲ್ಲಿ ವಿಫಲರಾಗಿರುವುದು ಇಲ್ಲಿ ಸ್ಪಷ್ಟ. ಅಜಿಂಕ್ಯ ರಹಾನೆ ಹೊರತುಪಡಿಸಿ ಯಾರೂ ಪ್ರತಿರೋಧ ಒಡ್ಡಿಲ್ಲ. ಅವರು ಎರಡೂ ಇನ್ನಿಂಗ್ಸ್ ಅವರು 89 ಮತ್ತು 46 ರನ್ ಗಳಿಸಿದರು, ಹಾಗಾದರೆ ಅವರನ್ನು (ಚೇತೇಶ್ವರ ಪೂಜಾರ) ಏಕೆ ಕೈಬಿಡಲಾಗಿದೆ? ನಮ್ಮ ಬ್ಯಾಟಿಂಗ್ ವೈಫಲ್ಯಗಳಿಗೆ ಅವರನ್ನು ಏಕೆ ಬಲಿಪಶು ಮಾಡಲಾಗುತ್ತಿದೆ. ಅವರು ಭಾರತೀಯ ಕ್ರಿಕೆಟ್ ತಂಡದ ನಿಜವಾದ ಆಟಗಾರ ಏಕೆಂದರೆ ಅವರು ಎಲ್ಲಿಯೂ ಲಕ್ಷಾಂತರ ಅನುಯಾಯಿಗಳನ್ನು ಹೊಂದಿಲ್ಲ. ಹೀಗಾಗಿ ಟೀಕೆಗಳು ವ್ಯಕ್ತವಾಗುವುದಿಲ್ಲ ಎಂದು ಅವರನ್ನು ಕೈ ಬಿಡಲಾಗಿದೆ ಎಂಬುದಾಗಿ ಗವಾಸ್ಕರ್ ಟೀಕೆ ಮಾಡಿದ್ದಾರೆ
ಪೂಜಾರ ಅವರನ್ನು ಬಲಿಪಶು ಮಾಡಲಾಗಿದೆ. ಅವರನ್ನು ತಂಡದಿಂ ಕೈಬಿಡಲು ಮತ್ತು ವಿಫಲವಾದ ಇತರರನ್ನು ಉಳಿಸಿಕೊಳ್ಳಲು ಇರುವ ಮಾನದಂಡಗಳು ಯಾವುದು? ಅವರು ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದಾರೆ. ಅದು ಏನು ಎಂದು ಅವರಿಗೆ ತಿಳಿದಿದೆ. 40 ಅಥವಾ 39 ವರ್ಷದವರೆಗೆ ಟೆಸ್ಟ್ ಕ್ರಿಕೆಟ್ ಆಡಬಹುದು. ಅವರೆಲ್ಲರೂ ತುಂಬಾ ಫಿಟ್ ಆಗಿರುವುದರಿಂದ ಯಾವುದೇ ತಪ್ಪಿಲ್ಲ. ಎಲ್ಲಿಯವರೆಗೆ ನೀವು ರನ್ ಗಳಿಸುತ್ತೀರೋ ಮತ್ತು ವಿಕೆಟ್ ಪಡೆಯುತ್ತೀರೋ ಅಲ್ಲಿಯವರೆಗೆ ಆಡಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.
ಡಬ್ಲ್ಯುಟಿಸಿ ಫೈನಲ್‌ನಲ್ಲಿ ಪೂಜಾರ ಅವರು 14 ಮತ್ತು 27 ರನ್ ಗಳಿಸಲು ಮಾತ್ರ ಗಳಿಸಿದ್ದರು. ಅವರ ಮೇಲೆ ತಂಡ ಇಟ್ಟಿದ್ದ ನಿರೀಕ್ಷೆ ಸುಳ್ಳಾಗಿತ್ತು. ಹೀಗಾಗಿ ವಿಂಡಿಸ್ ಸರಣಿಗೆ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಅವರನ್ನು ಮುಂಬರುವ ಪ್ರವಾಸಕ್ಕಾಗಿ ಆಯ್ಕೆ ಮಾಡಲಾಗಿದೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.