ದುಬೈ : ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ ೪ರಂದು ಮತ್ತೊಂದು ಏಷ್ಯಾ ಕಪ್ ಪಂದ್ಯ ನಡೆಯಲಿದೆ. ಆಗಸ್ಟ್ ೨೮ರಂದು ಈ ತಂಡಗಳ ನಡುವೆ ಪಂದ್ಯ ನಡೆದು ಭಾರತ ೫ ವಿಕೆಟ್‌ಗಳಿಂದ ಜಯಶಾಲಿಯಾದ ಬಳಿಕ ಈ ಎರಡು ತಂಡಗಳು ಒಂದು ವಾರದೊಳಗೆ ಮತ್ತೊಂದು ಬಾರಿ ಮುಖಾಮುಖಿಯಾಗಬಹುದು ಎಂದು ಬಹುತೇಕ ಜನರು ಅಂದಾಜಿಸಿರಲಿಲ್ಲ. ಆದರೆ, ಕ್ರಿಕೆಟ್ ಪಂಡಿತರಿಗೆ ಇಂಥದ್ದೊಂದು ಸಾಧ್ಯತೆಗಳ ಬಗ್ಗೆ ಬಹುತೇಕ ಅರಿವಿತ್ತು. ಹಾಗಾದರೆ ಈ ಎರಡು ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಮತ್ತೊಂದು ಪಂದ್ಯಕ್ಕೆ ಕಾರಣವಾದ ಅಂಶಗಳು ಯಾವುದು ಎಂಬುದರ ವಿವರ ಇಲ್ಲಿದೆ.
ಏಷ್ಯಾ ಕಪ್‌ನಲ್ಲಿ ಈಗ ಸೂಪರ್-೪ ಹಂತ ನಡೆಯುತ್ತಿದೆ. ಗುಂಪು ಹಂತದ ಪಂದ್ಯಗಳು ಶುಕ್ರವಾರ ನಡೆದ ಪಾಕಿಸ್ತಾನ ಹಾಗೂ ಹಾಂಕಾಂಗ್ ತಂಡಗಳ ನಡುವಿನ ಹಣಾಹಣಿಯೊಂದಿಗೆ ಮುಕ್ತಾಯಗೊಂಡಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ೧೫೫ ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.
ಈ ಬಾರಿಯ ಏಷ್ಯಾ ಕಪ್ ಗುಂಪು ಹಂತದ ಹಣಾಹಣಿಯೊಂದಿಗೆ ಆರಂಭಗೊಂಡಿತ್ತು. ಎ ಗುಂಪಿನಲ್ಲಿರುವ ಭಾರತ, ಪಾಕಿಸ್ತಾನ ಮತ್ತು ಹಾಂಕಾಂಗ್, ಬಿ ಗುಂಪಿನಲ್ಲಿರುವ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಅಫಘಾನಿಸ್ತಾನ ತಂಡಗಳು ತಮ್ಮ ಗುಂಪಿನ ಇತರ ಎರಡು ತಂಡಗಳ ವಿರುದ್ದ ತಲಾ ಒಂದು ಪಂದ್ಯಗಳನ್ನು ಆಡಿದ್ದವು. ಅವುಗಳಲ್ಲಿ ಎ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ, ಬಿ ಗುಂಪಿನಿಂದ ಅಫಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ ಪೋರ್ ಹಂತಕ್ಕೆ ತೇರ್ಗಡೆಗೊಂಡವು.
ಸೂಪರ್ ಫೋರ್ ಹಂತವು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಎಲ್ಲ ನಾಲ್ಕು ತಂಡಗಳು ಒಂದು ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. ಈ ರೀತಿಯಾಗಿ ಒಟ್ಟಾರೆ ಆರು ಪಂದ್ಯಗಳು ನಡೆಯಲಿವೆ. ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಸೂಪರ್‌೪ ಹಂತಕ್ಕೆ ತೇರ್ಗಡೆಗೊಂಡಿರುವ ಕಾರಣ ಮತ್ತೊಮ್ಮೆ ಮುಖಾಮುಖಿಯಾಗುವಂತಾಗಿದೆ.
ಸೂಪರ್ ೪ ಹಂತದ ವೇಳಾಪಟ್ಟಿಯಲ್ಲಿ ಬಿ ಗುಂಪಿನ ಮೊದಲ ಹಾಗೂ ಎರಡನೇ ತಂಡ ಮೊದಲ ಪಂದ್ಯದಲ್ಲಿ ಆಡಲಿದ್ದು, ಬಿ ಗುಂಪಿನ ಮೊದಲ ಹಾಗೂ ಎರಡನೇ ತಂಡ ಎರಡನೇ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಮೂರನೇ ಪಂದ್ಯದಲ್ಲಿ ಎ ಗುಂಪಿನ ಮೊದಲ ತಂಡ ಹಾಗೂ ಬಿ ಗುಂಪಿನ ಎರಡನೇ ತಂಡ ಎದುರಾಗಲಿವೆ. ನಾಲ್ಕನೇ ಪಂದ್ಯದಲ್ಲಿ ಎ ಗುಂಪಿನ ಎರಡನೇ ತಂಡ ಹಾಗೂ ಬಿ ಗುಂಪಿನ ಎರಡನೇ ತಂಡದ ನಡುವೆ ಪಂದ್ಯ ಅಯೋಜನೆಗೊಂಡಿದೆ. ಐದನೇ ಪಂದ್ಯದಲ್ಲಿ ಎ ಗುಂಪಿನ ಮೊದಲ ತಂಡ ಹಾಗೂ ಬಿ ಗುಂಪಿನ ಎರಡನೇ ತಂಡ ಮತ್ತು ಆರನೇ ಪಂದ್ಯದಲ್ಲಿ ಎ ಗುಂಪಿನ ಎರಡನೇ ತಂಡ ಹಾಗೂ ಬಿ ಗುಂಪಿನ ಮೊದಲ ತಂಡದ ನಡುವೆ ಪಂದ್ಯ ಆಯೋಜನೆಗೊಂಡಿದೆ.
ಹಾಲಿ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳೇ ಬಲಿಷ್ಠ. ಹೀಗಾಗಿ ರೌಂಡ್ ರಾಬಿನ್ ಹಂತದಲ್ಲಿ ಇವೆರಡು ತಂಡಗಳು ಮೊದಲೆರಡು ಸ್ಥಾನ ಪಡೆದುಕೊಂಡರೆ ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗಬಹುದು.
ವೇಳಾ ಪಟ್ಟಿ ಇಂತಿದೆ.
ದಿನಾಂಕ | ವಿರುದ್ಧ | ತಾಣ | ಸಮಯ |
ಸೆಪ್ಟೆಂಬರ್-03 | ಆಘ್ಘನ್ vs ಲಂಕಾ (ಲಂಕಾಗೆ ಜಯ) | ಶಾರ್ಜಾ | ರಾತ್ರಿ 7.30 |
ಸೆಪ್ಟೆಂಬರ್-04 | ಭಾರತ vs ಪಾಕ್ | ದುಬೈ | ರಾತ್ರಿ 7.30 |
ಸೆಪ್ಟೆಂಬರ್-06 | ಭಾರತ vs ಆಫ್ಘನ್ | ದುಬೈ | ರಾತ್ರಿ 7.30 |
ಸೆಪ್ಟೆಂಬರ್-07 | ಲಂಕಾ vs ಪಾಕ್ | ದುಬೈ | ರಾತ್ರಿ 7.30 |
ಸೆಪ್ಟೆಂಬರ್-08 | ಭಾರತ vs ಲಂಕಾ | ದುಬೈ | ರಾತ್ರಿ 7.30 |
ಸೆಪ್ಟೆಂಬರ್-09 | ಆಫ್ಘನ್ vs ಪಾಕ್ | ದುಬೈ | ರಾತ್ರಿ 7.30 |
ಸೆಪ್ಟೆಂಬರ್-11 | ಫೈನಲ್ | ದುಬೈ | ರಾತ್ರಿ 7.30 |