ಬೆಂಗಳೂರು : ಜಾಗತಿಕ ಫುಟ್ಬಾಲ್ ಕ್ಷೇತ್ರದ ಮಹಾನ್ ದಿಗ್ಗಜ, ಬ್ರೆಜಿಲ್ ತಂಡದ ಮಾಜಿ ಆಟಗಾರ ಪೀಲೆ ಗುರುವಾರ ತಡರಾತ್ರಿ (ಭಾರತೀಯ ಕಾಲಮಾನ) ನಿಧನ ಹೊಂದಿದ್ದಾರೆ. 82 ವರ್ಷದ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಹಲವು ವರ್ಷಗಳಿಂದ ಸರ್ಜರಿ ಹಾಗೂ ಇನ್ನಿತರ ಇನ್ನಿತರ ಚಿಕಿತ್ಸೆಗೆ ಒಳಪಟ್ಟಿದ್ದ ಅವರು ಇದೀಗ ಕೊನೆಯುಸಿರು ಎಳೆದಿದ್ದಾರೆ. ಫುಟ್ಬಾಲ್ ಕ್ಷೇತ್ರದ ಮಹಾನ್ ಸಾಧಕನ ನಿಧನಕ್ಕೆ ಜಗತ್ತೇ ಕಂಬನಿ ಮಿಡಿಯುತ್ತಿದೆ ಹಾಗೂ ಅವರ ಸಾಧನೆಗಳನ್ನು ಸ್ಮರಿಸಿಕೊಳ್ಳುತ್ತಿದೆ. ರೀ ರೀತಿಯಾಗಿ ಕಾಲ್ಚಳಕದ ಮೂಲಕವೇ ಕಿಂಗ್ ಆಫ್ ಫುಟ್ಬಾಲ್ ಎಂದು ಕರೆಸಿಕೊಂಡಿರುವ ಪೀಲೆ ಅವರ ಸಾಧನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಅತಿ ಹೆಚ್ಚು ಗೋಲ್ ಬಾರಿಸಿದ ಗಿನ್ನೆಸ್ ದಾಖಲೆ ಪೀಲೆ ಹೆಸರಿನಲ್ಲಿದೆ. ಅವರು ತಮ್ಮ ಜೀವಿತಾವಧಿಯಲ್ಲಿ ಆಡಿದ 1363 ಪಂದ್ಯಗಳಲ್ಲಿ 1279 ಗೋಲ್ಗಳನ್ನು ಬಾರಿಸಿದ್ದಾರೆ. ಇಷ್ಟು ಗೋಲ್ಗಳನ್ನು ಬಾರಿಸಿದ ಫುಟ್ಬಾಲ್ ಆಟಗಾರರು ಇನ್ಯಾರೂ ಇಲ್ಲ.
ಮೂರು ಫುಟ್ಬಾಲ್ ವಿಶ್ವ ಕಪ್ ಗೆದ್ದ ಜಗತ್ತಿನ ಏಕೈಕ ಆಟಗಾರ ಪೀಲೆ. ಅವರು. 1958, 1962, ಮತ್ತು 1970ರಲ್ಲಿ ವಿಶ್ವ ಕಪ್ ಗೆದ್ದ ಬ್ರೆಜಿಲ್ ತಂಡದ ಸದಸ್ಯ. 1958ರಲ್ಲಿ ಪೀಲೆ ಬ್ರೆಜಿಲ್ ತಂಡ ವಿಶ್ವಕಪ್ ಗೆದ್ದಾಗ ಪೀಲೆಗೆ ಕೇವಲ 17 ವರ್ಷ ಮತ್ತು 249 ದಿನಗಳು. ಈ ಮೂಲಕ ವಿಶ್ವ ಕಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಯನ್ನೂ ಹೊಂದಿದ್ದಾರೆ.
1958ರ ಆವೃತ್ತಿಯಲ್ಲಿ ಫ್ರಾನ್ಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪೀಲೆ ಹ್ಯಾಟ್ರಿಕ್ ಗೋಲ್ ಬಾರಿಸಿದ್ದರು. ಈ ಮೂಲಕ ಅವರು ಫುಟ್ಬಾಲ್ ವಿಶ್ವ ಕಪ್ನಲ್ಲಿ ಹ್ಯಾಟ್ರಿಕ್ ಗೋಲ್ ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದಾರೆ.
18 ವರ್ಷವಾಗುವ ಮೊದಲು ಫುಟ್ಬಾಲ್ ವಿಶ್ವ ಕಪ್ ಪಂದ್ಯದಲ್ಲಿ ಗೋಲ್ ಬಾರಿಸಿದ ಏಕೈಕ ಆಟಗಾರ. 25 ಅಂತಾರಾಷ್ಟ್ರೀಯ ಗೋಲ್ಗಳನ್ನು ಬಾರಿಸಿದ ಏಕೈಕ ಹದಿ ಹರೆಯದ (ಟೀನೇಜ್) ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ.
1957ರಲ್ಲಿ ಪೀಲೆ ದಕ್ಷಿಣ ಅಮೆರಿಕದ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್ ಪರ ಗೋಲ್ ಬಾರಿಸಿದ್ದರು. ಅವರಿಗೆ ಆಗ 16 ವರ್ಷ. ಈ ಮೂಲಕ ಅವರು ಬ್ರೆಜಿಲ್ ದೇಶದ ಪರ ಅತಿ ಚಿಕ್ಕ ವಯಸ್ಸಿನಲ್ಲಿ ಗೋಲ್ ಬಾರಿಸಿದ ಖ್ಯಾತಿ ಗಳಿಸಿಕೊಂಡಿದ್ದರು.
ಫುಟ್ಬಾಲ್ ವಿಶ್ವ ಕಪ್ನಲ್ಲಿ 10 ಬಾರಿ ಅಸಿಸ್ಟ್ (ಬೇರೆ ಆಟಗಾರರಿಗೆ ಗೋಲ್ ಬಾರಿಸಲು ನೆರವಾಗುವುದು) ಮಾಡಿದ ಕೀರ್ತಿ ಪೀಲೆ ಅವರದ್ದು. ಇಷ್ಟೊಂದು ಅಸಿಸ್ಟ್ ಮಾಡಿದ ಪೀಲೆ ದಾಖಲೆಯನ್ನು ಇನ್ನೂ ಯಾರೂ ಅಳಿಸಿಲ್ಲ.
ಬ್ರೆಜಿಲ್ನ ಸ್ಯಾಂಟೋಸ್ ಕ್ಲಬ್ ಪರ ಆಡುತ್ತಿದ್ದ ಪೀಲೆ ಗರಿಷ್ಠ ಗೋಲ್ಗಳ ದಾಖಲೆ ಹೊಂದಿದ್ದಾರೆ. ಅವರು 659 ಪಂದ್ಯಗಳಲ್ಲಿ 643 ಗೋಲ್ಗಳನ್ನು ಬಾರಿಸಿದ್ದಾರೆ.
ಬ್ರೆಜಿಲ್ ಪರ ಗರಿಷ್ಠ ಗೋಲ್ಗಳನ್ನು ಬಾರಿಸಿದ ಜಂಟಿ ದಾಖಲೆಯನ್ನು ಪೀಲೆ ಹೊಂದಿದ್ದಾರೆ. ಅವರು ತಮ್ಮ ತಂಡದ ಪರ 92 ಗೋಲ್ ದಾಖಲಿಸಿದ್ದು, ಈ ಸಾಧನೆ ಮಾಡಿದ ಇನ್ನೊಬ್ಬ ಆಟಗಾರ ನೇಮರ್ ಜೂನಿಯರ್.
ಬ್ರೆಜಿಲ್ನ ಈ ದಿಗ್ಗಜ ತಮ್ಮ ವೃತ್ತಿ ಫುಟ್ಬಾಲ್ನಲ್ಲಿ 92 ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಅತ್ಯಂತ ಗರಿಷ್ಠ ಸಾಧನೆಯಾಗಿದೆ.
ಕ್ಯಾಲೆಂಡರ್ ವರ್ಷವೊಂದರಲ್ಲಿ 100ಕ್ಕೂ ಅಧಿಕ ಗೋಲ್ಗಳನ್ನು ಬಾರಿಸಿದ ಏಕೈಕ ಆಟಗಾರ ಪೀಲೆ ಎಂಬುದಾಗಿ ಫಿಫಾ ದಾಖಲೆಗಳು ಹೇಳುತ್ತವೆ. ಅವರು 1959ರಲ್ಲಿ 127 ಗೋಲ್ಗಳನ್ನು ಬಾರಿಸಿದ್ದರೆ, 1961ರಲ್ಲಿ 110 ಗೋಲ್ಗಳನ್ನು ಬಾರಿಸಿದ್ದಾರೆ. ಇವರ ದಾಖಲೆಯ ಸನಿಹಕ್ಕೆ ಕೂಡ ಯಾರೂ ಬಂದಿಲ್ಲ.
ಇದನ್ನೂ ಓದಿ | Pele Passes Away | ಬ್ರೆಜಿಲ್ ಫುಟ್ಬಾಲ್ ದಂತಕತೆ ಪೀಲೆ ಇನ್ನಿಲ್ಲ