ಬೆಂಗಳೂರು: ಸೋಮವಾರ ನಡೆದಿದ್ದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಣ ಪಂದ್ಯದಲ್ಲಿ ಲಂಕಾ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಅವರು ಟೈಮ್ಡ್ ಔಟ್(timed-out) ಆಗಿ ವಿಕೆಟ್ ಕೈಚೆಲ್ಲಿದ್ದರು. ಈ ರೀತಿ ನಿರ್ಗಮಿಸಿದ ಮೊದಲ ಬ್ಯಾಟರ್ ಎನಿಸಿದ್ದರು. ಆದರೆ ಈ ನಿಯಮದ ಬಗ್ಗೆ ಅನೇಕ ಕ್ರಿಕೆಟ್ ಅಭಿಮಾನಿಗಳಿಗೆ ಅರಿವೇ ಇರಲಿಲ್ಲ. ಹೀಗಾಗಿ ಈ ನಿಯಮದ ಬಗ್ಗೆ ಈಗ ಬಾರಿ ಚರ್ಚೆಗಳು ನಡೆಯುತ್ತಿದೆ. ಈ ಚರ್ಚೆಗಳ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ(Sourav Ganguly) ಅವರು ಇದೇ ಸಂಕಟದಿಂದ ಪಾರಾಗಿದ್ದ ಘಟನೆಯೊಂದು ಈಗ ಮುನ್ನಲೆಗೆ ಬಂದಿದೆ.
ಕ್ರಿಕೆಟ್ನಲ್ಲಿ ಟೈಮ್ಡ್ ಔಟ್ ನಿಯಮ ಹಿಂದಿನಿಂದಲೇ ಜಾರಿಯಲ್ಲಿದೆ. ಆದರೆ ಇದರ ಬಗ್ಗೆ ಕೆಲವೇ ಜನರಿಗೆ ಮಾತ್ರ ಮಾಹಿತಿ ಇದೆ. ಈ ನಿಯಮದ ಪ್ರಕಾರ ಓರ್ವ ಬ್ಯಾಟರ್ ಔಟಾದಾಗ ಆ ಬಳಿಕ ಬಳಿಕ ಬ್ಯಾಟಿಂಗ್ ನಡೆಸಲು ಬುರುವ ಆಟಗಾರ ನಿಗದಿತ ಸಮಯದಲ್ಲಿ ಮೊದಲ ಎಸೆತವನ್ನು ಎದುರಿಸಬೇಕು. ಒಂದೊಮ್ಮೆ ಇದು ಸಾಧ್ಯವಾದಿದ್ದರೆ ಆತ ಔಟ್ ಎಂದು ನಿರ್ಧರಿಸಲಾಗುತ್ತದೆ. ಅಂದು ಗಂಗೂಲಿ ಅವರು 6 ನಿಮಿಷ ತಡವಾಗಿ ಬಂದರೂ ಎದುರಾಳಿ ತಂಡದ ಆಟಗಾರರ ಕ್ರೀಡಾಸ್ಫೂರ್ತಿಯಿಂದ ಈ ಔಟ್‌ನಿಂದ ಪಾರಾಗಿದ್ದರು. ಇಲ್ಲವಾಗಿದ್ದರೆ ಈ ಔಟ್ನ ಕಳಂಕ ಗಂಗೂಲಿ ಹೆಸರಿಗೆ ಅಂಟಿಕೊಳ್ಳುತ್ತಿತ್ತು.
ಗಂಗೂಲಿ ತಡವಾಗಿ ಬರಲು ಕಾರಣವೇನು?
2007ರಲ್ಲಿ ಭಾರತ ತಂಡ ಟೆಸ್ಟ್ ಸರಣಿ ಆಡಲು ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಿತ್ತು. ಈ ವೇಳೆ ಕೇಪ್ಟೌನ್ನಲ್ಲಿ ನಡೆದ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲಿ ವಾಸೀಂ ಜಾಫರ್ ಅವರು ವಿಕೆಟ್ ಕೈಚೆಲ್ಲಿದರು. ಇದು 2ನೇ ವಿಕೆಟ್ ಪತನವಾಗಿತ್ತು. ಬ್ಯಾಟಿಂಗ್ ನಡೆಸಲು ಸಚಿನ್ ತೆಂಡೂಲ್ಕರ್ ಅವರು ಕ್ರೀಸ್‌ಗೆ ಬರಬೇಕಿತ್ತು. ಆದರೆ ಮೂರನೇ ದಿನದಾಟದ ಅಂತಿಮ ಅವಧಿಯಲ್ಲಿ ಅಂದರೆ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಇನಿಂಗ್ಸ್ ವೇಳೆ ತೆಂಡೂಲ್ಕರ್ ಅವರು ಫೀಲ್ಡಿಂಗ್ ಮಾಡದೇ ಮೈದಾನದಿಂದ ಹೆಚ್ಚು ಸಮಯ ಹೊರಗುಳಿದ ಕಾರಣದಿಂದ ಅವರಿಗೆ ನಾಲ್ಕನೇ ದಿನದಾಟದಲ್ಲಿ ನಿಗದಿತ ಸಮಯದ ಬಳಿಕವೇ ಬ್ಯಾಟಿಂಗ್ ನಡೆಸುವಂತೆ ಸೂಚಿಸಲಾಗಿತ್ತು.
ಸ್ನಾನಕ್ಕೆ ಹೋಗಿದ್ದ ಲಕ್ಷ್ಮಣ್
ಸಚಿನ್ ಅವರು ಪ್ಯಾಡ್ ಕಟ್ಟಿ ಸಿದ್ಧರಿದ್ದರೂ ಅವರಿಗೆ ಬ್ಯಾಟಿಂಗ್ ನಡೆಸಲು ಇದ್ದ ಕಟ್ ಆಪ್ ಸಮಯ 10.48 ಆಗಿತ್ತು. ಆದರೆ ಇದಕ್ಕೂ ಮುನ್ನವೇ ಭಾರತದ 2 ವಿಕೆಟ್ ಪತನಗೊಂಡಿತು. ಕಟ್ ಆಪ್ ಸಮಯ ಆಗದ ಕಾರಣ ಸಚಿನ್ ಅವರಿಗೆ ಅಂಪೈರ್ಗಳು ಬ್ಯಾಟಿಂಗ್ ನಡೆಸಲು ಅನುಮತಿ ನೀಡಿಲ್ಲ. ಆದರೆ ಮುಂದಿನ ಕ್ರಮಾಂಕ ಬ್ಯಾಟರ್ ಕ್ರೀಸ್‌ಗೆ ಇಳಿಯುವುದು ತಡವರಿಸಿದ ಕಾರಣ ಕೆಲ ಕಾಲ ಇದರ ಬಗ್ಗೆ ಫೀಲ್ಡ್ ಅಂಪೈರ್ ಮತ್ತು ಮೂರನೇ ಅಂಪೈರ್ಗಳು ವಾಕಿ ಟಾಕಿಯಲ್ಲಿ ಚರ್ಚಿಸುತ್ತಿದ್ದರು. ರಾಹುಲ್ ದ್ರಾವಿಡ್ ಅವರು ಮತ್ತೊಂದು ತುದಿಯಲ್ಲಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಸಚಿನ್‌ಗೆ ಅವಕಾಶ ನಿರಾಕರಿಸಿದ ಕಾರಣ ಐದನೇ ಕ್ರಮಾಂಕದ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಕ್ರೀಸ್‌ಗೆ ಇಳಿಯಬೇಕಿತ್ತು. ಆದರೆ ಅವರು ಸ್ನಾನಕ್ಕೆ ತೆರಳಿದ್ದರು.
In 2007, Graeme Smith had the opportunity to have Sourav Ganguly "timed out", but he chose not to enforce this rule pic.twitter.com/0yNcGZVnLD
— ٰImran Siddique (@imransiddique89) November 6, 2023
ಇದನ್ನೂ ಓದಿ ಬಹಿರಂಗವಾಗಿಯೇ ಶಕೀಬ್, ಬಾಂಗ್ಲಾ ತಂಡಕ್ಕೆ ಜಾಡಿಸಿದ ಏಂಜೆಲೊ ಮ್ಯಾಥ್ಯೂಸ್
ಲಕ್ಷ್ಮಣ್ ಅವರು ಸ್ನಾನಕ್ಕೆ ತೆರಳಿದ ವಿಚಾರ ತಿಳಿದ ಬಳಿಕ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಸೌರವ್ ಗಂಗೂಲಿ ಅವರು ಪ್ಯಾಡ್ ಕಟ್ಟಿ ಬರಲು ತಡವಾಯಿತು. ಇದೇ ವೇಳೆ ಅಂಪೈರ್ಗಳು ದಕ್ಷಿಣ ಆಫ್ರಿಕಾ ಆಟಗಾರರಿಗೆ ಸಮಯ ಮೀರಿ ಹೋಗಿದೆ ನಿಮಗೆ ಔಟ್ ಮನವಿ ಮಾಡುವ ಅವಕಾಶವಿದೆ ಎಂದು ಸೂಚನೆ ನೀಡಿದರು. ಅಲ್ಲದೆ ಮೈದಾನದ ದೊಡ್ಡ ಪರದೆಯಲ್ಲೂ 6 ನಿಮಿಷ ತಡವಾಗಿರುವುದನ್ನು ತೋರಿಸಲಾಯಿತು.
ಕ್ರೀಡಾಸ್ಫೂರ್ತಿ ಮೆರೆದ ಸ್ಮಿತ್
ಐಸಿಸಿ ನಿಯಮದ ಪ್ರಕಾರ ಗಂಗೂಲಿ ಅವರು ಮೂರು ನಿಮಿಷದೊಳಗೆ ಕ್ರೀಸಿಗೆ ಆಗಮಿಸಬೇಕಿತ್ತು. ಆದರೆ ಅವರು ಆರು ನಿಮಿಷಗಳಷ್ಟು ತಡವಾಗಿ ಮೈದಾನಕ್ಕೆ ಲಗ್ಗೆಯಿಟ್ಟರು. ಅಂಪೈರ್ ಅವರು ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ಬಳಿ ಈ ವಿಚಾರವನ್ನು ಚರ್ಚಿಸಿದ್ದರೂ ಸ್ಮಿತ್ ಮತ್ತು ತಂಡದ ಆಟಗಾರರು ಯಾವುದೇ ಔಟ್ ಮನವಿಯನ್ನು ಮಾಡದೆ ಜತೆಗೆ ಅಂಪೈರ್ ಬಳಿಯೂ ಇದನ್ನು ಔಟ್ ನೀಡಬಾರದು, ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದರು. ಈ ಮೂಲಕ ನಿಜವಾದ ಕ್ರೀಡಾಸ್ಫೂರ್ತಿ ಮೆರೆದಿದ್ದರು. ಇದರಿಂದಾಗಿ ಗಂಗೂಲಿ ಟೈಮ್ಡ್ ಔಟ್‌ನಿಂದ ಪಾರಾಗಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಗಂಗೂಲಿ 46 ರನ್‌ಗನ್ನು ಬಾರಿಸಿದ್ದರು.