Site icon Vistara News

Virat Kohli: ‘ನಾನೇಕೆ ಕೊಹ್ಲಿಗೆ ಅಭಿನಂದಿಸಲಿ’; ಲಂಕಾ ನಾಯಕನ ದರ್ಪದ ಮಾತು

kusal mendis

ಕೋಲ್ಕೊತಾ: ದಕ್ಷಿಣ ಆಫ್ರಿಕಾ(South Africa) ವಿರುದ್ಧದ ಭಾನುವಾರ ವಿಶ್ವಕಪ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಶತಕ ಬಾರಿಸುವ ಮೂಲಕ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಸಾರ್ವಕಾಲಿಕ ಏಕದಿನ ಕ್ರಿಕೆಟ್​ನ 49ನೇ(49th ODI hundred) ಶತಕದ ದಾಖಲೆಯನ್ನು ಸರಿಗಟ್ಟಿದ್ದರು. ಕೊಹ್ಲಿಯ ಈ ಸಾಧನೆಗೆ ಸ್ವತಃ ಸಚಿನ್​ ತೆಂಡೂಲ್ಕರ್​ ಸೇರಿ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಅಭಿನಂದನೆ ಸಲ್ಲಿಸಿದ್ದರು. ಬದ್ಧ ಎದುರಾಳಿ ಪಾಕಿಸ್ತಾನದ ಆಟಗಾರರು ಕೂಡ ಕೊಹ್ಲಿಯ ಸಾಧನೆಯನ್ನು ಕೊಂಡಾಡಿದ್ದರು. ಆದರೆ ಶ್ರೀಲಂಕಾದ ನಾಯಕ ಕುಸಾಲ್ ಮೆಂಡಿಸ್(Kusal Mendis) ಅಭಿನಂದನೆ ಸಲ್ಲಿಸುವುದನ್ನು ನಿರಾಕರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದ್ದು ನೆಟ್ಟಿಗರು ಮೆಂಡಿಸ್​ಗೆ ಕಮೆಂಟ್​ ಮೂಲಕ ಚಳಿ ಬಿಡಿಸಿದ್ದಾರೆ.

ಕೋಲ್ಕೊತಾದ ಐತಿಹಾಸಿಕ ಸ್ಟೇಡಿಯಂ ಈಡನ್​ ಗಾರ್ಡನ್ಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಸೊಗಸಾದ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿ ಮಿಂಚಿದರು. ಅವರು ಶತಕ ಬಾರಿಸುತ್ತಿದ್ದಂತೆ ಸಚಿನ್​ ಅವರ ಏಕದಿನ ಕ್ರಿಕೆಟ್​ನ 49ನೇ ಶತಕದ ದಾಖಲೆ ಸರಿದೂಗಿತು. ಕೊಹ್ಲಿಯ ಈ ಸಾಧನೆಗೆ ಅನೇಕರು ಅಭಿನಂದನೆ ಸಲ್ಲಿಸಿದ್ದರು. ಈಗಲೂ ಕೂಡ ಕೆಲವರು ಅಭಿನಂದನೆ ಸಲ್ಲಿಸುತ್ತಲೇ ಇದ್ದಾರೆ.

ಲಂಕಾ ನಾಯಕನ ದರ್ಪದ ಮಾತು

ಶ್ರೀಲಂಕಾ ತಂಡ ಇಂದು(ಸೋಮವಾರ) ವಿಶ್ವಕಪ್​ನ ​38ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯ ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಅಂದರೆ ಭಾನುವಾರ ಸುದ್ದಿಗೋಷ್ಠಿ ನಡೆದಿತ್ತು. ಇದೇ ವೇಳೆ ಲಂಕಾದ ನಾಯಕ ಕುಸಾಲ್ ಮೆಂಡಿಸ್​ಗೆ ಪತ್ರಕರ್ತರೊಬ್ಬರು 49ನೇ ಶತಕ ಬಾರಿಸಿದ ವಿರಾಟ್​ ಕೊಹ್ಲಿಗೆ ನೀವು ಅಭಿನಂದನೆ ಸಲ್ಲಿಸುತ್ತೀರಾ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮೆಂಡಿಸ್​, ನಾನೇಕೆ ಅವರನ್ನು ಅಭಿನಂದಿಸಬೇಕು? ಎಂಬ ದರ್ಪದ ಉತ್ತರ ನೀಡಿದ್ದಾರೆ. ಇದು ಕೊಹ್ಲಿ ಅಭಿಮಾನಿಗಳಿಗೆ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಇದನ್ನೂ ಓದಿ Virat Kohli: ಲಂಕಾದ ದಿಗ್ಗಜ ಬ್ಯಾಟರ್​ನ ವಿಶ್ವಕಪ್ ದಾಖಲೆ ಮುರಿದ ಕಿಂಗ್​ ಕೊಹ್ಲಿ

ವಿರಾಟ್ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ ಮೆಂಡಿಸ್​ ಅವರನ್ನು​ ಕೊಹ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುವ ಮೂಲಕ ಸರಿಯಾಗಿ ರುಬ್ಬಿದ್ದಾರೆ. ತಂಡದ ನಾಯಕ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಮೆಂಡಿಸ್​​ ಅವರನ್ನು ಟೀಕಿಸಿದ್ದಾರೆ. ಅಲ್ಲದೆ ನಿಮ್ಮ ಸಾಧನೆಯನ್ನು ನಾವು ಕಂಡಿದ್ದೇವೆ ಎಂದು ಕಳೆದ ಭಾರತ ವಿರುದ್ಧದ ಪಂದ್ಯದ ನಿದರ್ಶನವನ್ನು ಇಟ್ಟುಕೊಂಡು ಸರಿಯಾಗಿ ತಿರುಗೇಟು ನೀಡಿದ್ದಾರೆ.

ಪಂದ್ಯ ಗೆದ್ದ ಭಾರತ

ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ವಿರಾಟ್​ ಕೊಹ್ಲಿಯ ಶತಕ ಮತ್ತು ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಜೋಶ್​ ಮರೆತು 27.1 ಓವರ್​ಗಳಲ್ಲಿ 83 ರನ್​ ಬಾರಿಸಿ ಸರ್ವಪತನ ಕಂಡಿತು. ಭಾರತ ಪರ ಜಡೇಜಾ ಮಾತ್ರವಲ್ಲದೆ, ಮೊಹಮ್ಮದ್ ಸಿರಾಜ್​ (18 ರನ್​ಗೆ 2 ವಿಕೆಟ್​), ಕುಲ್ದೀಪ್ ಯಾದವ್ (7 ರನ್​ಗೆ 2 ವಿಕೆಟ್​​) ಕಿತ್ತು ಭಾರತಕ್ಕೆ ದೊಡ್ಡ ಅಂತರದ ಗೆಲುವು ತಂದುಕೊಟ್ಟರು. ದಕ್ಷಿಣ ಆಫ್ರಿಕಾ ಪರ ಒಬ್ಬನೇ ಒಬ್ಬ ಆಟಗಾರ 20 ರನ್​ ಗಡಿ ದಾಟಲಿಲ್ಲ.

Exit mobile version