Site icon Vistara News

WI vs ENG: ವಿಂಡೀಸ್​ಗೆ ನೀರು ಕುಡಿಸಿದ ಸಾಲ್ಟ್; ಇಂಗ್ಲೆಂಡ್​ಗೆ 8 ವಿಕೆಟ್​ ಭರ್ಜರಿ ಜಯ

WI vs ENG

WI vs ENG: England won by 8 wkts

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ಫಿಲ್​ ಸಾಲ್ಟ್​(87*) ಮತ್ತು ಜಾನಿ ಬೇರ್​ಸ್ಟೊ(48*) ಅವರ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನದಿಂದ ವೆಸ್ಟ್​ ಇಂಡೀಸ್(WI vs ENG)​ ವಿರುದ್ಧ ಗುರುವಾರ ನಡೆದ ಸೂಪರ್​-8 ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಲೀಗ್​ ಹಂತದಲ್ಲಿ ಎಲ್ಲ ಪಂದ್ಯ ಗೆದ್ದು ಅಜೇಯ ಓಟ ಕಾಯ್ದುಕೊಂಡಿದ್ದ ವಿಂಡೀಸ್​ನ ಈ ಗೆಲುವಿನ ಓಟಕ್ಕೆ ಈಗ ಬ್ರೇಕ್​ ಬಿದ್ದಿದೆ.

ಸೇಂಟ್‌ ಲೂಸಿಯಾದ ಗ್ರಾಸ್‌ ಐಲೆಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ವೆಸ್ಟ್​ ಇಂಡೀಸ್​ ತಂಡ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 180 ರನ್​ ಬಾರಿಸಿತು. ಜವಾಬಿತ್ತ ಇಂಗ್ಲೆಂಡ್​ ಈ ದೊಡ್ಡ ಮೊತ್ತವನ್ನು 17.3 ಓವರ್​ಗಳಲ್ಲಿ ಕೇವಲ 2 ವಿಕೆಟ್​ ನಷ್ಟಕ್ಕೆ 181 ರನ್​ ಬಾರಿಸಿ ಗೆಲುವಿನ ಬಾವುಟ ಹಾರಿಸಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ಗೆ ನಾಯಕ ಜಾಸ್​ ಬಟ್ಲರ್​ ಮತ್ತು ಫಿಲ್​ ಸಾಲ್ಟ್​ ಬಿರುಸಿನ ಬ್ಯಾಟಿಂಗ್​ ನಡೆಸಿ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 67 ರನ್​ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಉತ್ತಮವಾಗಿ ಆಡುತ್ತಿದ್ದ ಈ ಜೋಡಿಯನ್ನು ರೋಸ್ಟನ್ ಚೇಸ್ ಬೇರ್ಪಡಿಸಿದರು. ಜಾಸ್​ ಬಟ್ಲರ್​ ವಿಕೆಟ್​ ಕೀಳುವ ಮೂಲಕ ವಿಂಡೀಸ್​ಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಬಟ್ಲರ್​ 25 ರನ್​ ಬಾರಿಸಿದರು. ಬಟ್ಲರ್​ ವಿಕೆಟ್​ ಪತನದ ಬಳಿಕ ಆಡಲಿಳಿದ ಮೊಯಿನ್​ ಅಲಿ ನಿರೀಕ್ಷಿತ ಬ್ಯಾಟಿಂಗ್​ ತೋರುವಲ್ಲಿ ವಿಫಲರಾದರು. 10 ಎಸೆತ ಎದುರಿಸಿ ಕೇವಲ 13 ರನ್​ಗೆ ವಿಕೆಟ್​ ಒಪ್ಪಿಸಿದರು.

ಸಾಲ್ಟ್-ಬೇರ್​ಸ್ಟೊ​ ಪ್ರಚಂಡ ಬ್ಯಾಟಿಂಗ್​


ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಕೆಕೆಆರ್​ ತಂಡದ ಪರ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದ ಆರಂಭಿಕ ಆಟಗಾರ ಫಿಲ್​ ಸಾಲ್ಟ್​ ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರಾಬಲ್ಯ ಮುಂದುವರಿಸಿದ್ದಾರೆ. ವಿಂಡೀಸ್​ ವಿರುದ್ಧದ ಸೂಪರ್​ 8 ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಆರಂಭದಲ್ಲಿ ಬಟ್ಲರ್​ ಜತೆ ಉತ್ತಮ ಜತೆಯಾಟ ನಡೆಸಿದ ಸಾಲ್ಟ್​ ಆ ಬಳಿಕ 4 ವಿಕೆಟ್​ಗೆ ಆಡಲಿಳಿದ ಜಾನಿ ಬೇರ್​ಸ್ಟೋ ಜತೆಗೂಡಿ ಸೊಗಸಾದ ಇನಿಂಗ್ಸ್​ ಕಟ್ಟಿದರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ವಿಂಡೀಸ್​ ಬೌಲರ್​ಗಳ ಬೆವರಿಳಿಸಿದರು. ಫಿಲ್​ ಸಾಲ್ಟ್​ ಸಿಕ್ಸರ್​ ಮೂಲಕವೇ ಅರ್ಧಶತಕ ಪೂರ್ತಿಗೊಳಿಸಿದರು. 38 ಎಸೆತಗಳಲ್ಲಿ ಅವರ ಅರ್ಥಶತಕ ಪೂರೈಸಿದ ಸಾಲ್ಟ್​ ರೊಮಾರಿಯೋ ಶೆಫರ್ಡ್ ಅವರ ಒಂದೇ ಓವರ್​ನಲ್ಲಿ ಬರೋಬ್ಬರಿ ಮೂರು ಸಿಕ್ಸರ್​ ಮತ್ತು ಮೂರು ಬೌಂಡರಿ ಬಾರಿಸಿ 30 ರನ್​ ದೋಚಿದರು.

ಕಳೆದೊಂದು ವರ್ಷದಿಂದ ಘೋರ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿದ್ದ ಜಾನಿ ಬೇರ್​ಸ್ಟೋ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೇವಲ 26 ಎಸೆತಗಳಿಂದ ಅಜೇಯ 48(5 ಬೌಂಡರಿ, 2 ಸಿಕ್ಸರ್) ರನ್​ ಬಾರಿಸಿದರು. ಫಿಲ್​ ಸಾಲ್ಟ್​ 47 ಎಸೆತಗಳಿಂದ ಅಜೇಯ 87 ರನ್​ ಬಾರಿಸಿ ಗೆಲುವಿನ ಹೀರೊ ಎನಿಸಿಕೊಂಡರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಬರೋಬ್ಬರಿ 5 ಸಿಕ್ಸರ್​ ಮತ್ತು 7 ಬೌಂಡರಿ ಸಿಡಿಯಿತು. ಬೇರ್​ಸ್ಟೋ ಮತ್ತೆ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದು ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ವಿಂಡೀಸ್​ ಪರ ಬ್ರಾಂಡನ್ ಕಿಂಗ್(23), ಜಾನ್ಸನ್ ಚಾರ್ಲ್ಸ್(38), ನಿಕೋಲಸ್​ ಪೂರನ್​(36) ಮತ್ತು ನಾಯಕ ರೋವ್ಮನ್ ಪೊವೆಲ್(36) ರನ್​ ಗಳಿಸಿ ಸಂಘಟಿತ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಆದರೆ ಪಂದ್ಯ ಸೋತ ಕಾರಣ ಇವರ ಈ ಬ್ಯಾಟಿಂಗ್​ ಹೋರಾಟ ವ್ಯರ್ಥಗೊಂಡಿತು. ಇಂಗ್ಲೆಂಡ್​ ಪರ ಜೋಫ್ರ ಆರ್ಚರ್​, ಆದೀಸ್​ ರಶೀದ್​, ಮೊಯಿನ್​ ಅಲಿ ಲಿವಿಂಗ್​ಸ್ಟೋನ್​ ತಲಾ ಒಂದು ವಿಕೆಟ್​ ಕಿತ್ತರು.

Exit mobile version