ನಾಗ್ಪುರ : ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟಿ೨೦ ಸರಣಿಯ ಎರಡನೇ ಪಂದ್ಯ ನಾಗ್ಪುರದಲ್ಲಿ ಸಪ್ಟೆಂಬರ್ ೨೩ರಂದು ನಡೆಯಲಿದ್ದು, ಸರಣಿ ಜೀವಂತವಾಗಿರಬೇಕಾದರೆ ಭಾರತ ತಂಡಕ್ಕೆ ಈ ಪಂದ್ಯದ ಗೆಲುವು ಅನಿವಾರ್ಯ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಬಳಗ ೪ ವಿಕೆಟ್‌ಗಳ ಸೋಲು ಕಂಡಿರುವ ಕಾರಣ ರೋಹಿತ್ ಶರ್ಮ ಬಳಗ ಈ ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು. ಅದಕ್ಕೆ ತಕ್ಕ ಹಾಗೆ ಯೋಜನೆ ರೂಪಿಸಿಕೊಂಡು ಕಣಕ್ಕಿಳಿಯಲೇಬೇಕಾಗಿದೆ.
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್‌ನಲ್ಲಿ ಪಂದ್ಯ ಆಯೋಜನೆಗೊಂಡಿದ್ದು, ಹಿಂದಿನ ಪಂದ್ಯದ ವೈಫಲ್ಯಕ್ಕೆ ಉತ್ತರ ಕಂಡುಕೊಂಡು ಮೈದಾನಕ್ಕೆ ಇಳಿಯಲಿದೆ. ಪ್ರಮುಖವಾಗಿ ಡೆತ್ ಓವರ್‌ಗಳಲ್ಲಿ ರನ್ ಬಿಟ್ಟುಕೊಡುವ ಪರಿಪಾಠವನ್ನು ನಿಲ್ಲಿಸಬೇಕಿದೆ. ಜತೆಗೆ ಫೀಲ್ಡಿಂಗ್ ಬಗ್ಗೆಯೂ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ.
ಬುಮ್ರಾ ಬರುವರೇ
ಜಸ್‌ಪ್ರಿತ್ ಬುಮ್ರಾ ಅವರ ಫಿಟ್ನೆಸ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ತಲೆನೋವಿನ ಸಂಗತಿಯಾಗಿದೆ. ಅವರು ಬೆನ್ನು ನೋವಿನಿಂದ ಸುಧಾರಿಸಿಕೊಂಡು ಆಸೀಸ್ ವಿರುದ್ಧದ ಸರಣಿಗೆ ಅಯ್ಕೆಯಾಗಿದ್ದರೂ ಮೊದಲ ಪಂದ್ಯದಲ್ಲಿ ಅವರನ್ನು ಆಡಿಸಿರಲಿಲ್ಲ. ಅವರಿಗೆ ವಿಶ್ರಾಂತಿ ಕಲ್ಪಿಸಿ ಮುಂಬರುವ ಟಿ೨೦ ವಿಶ್ವ ಕಪ್‌ಗೆ ಫಿಟ್ ಆಗುವಂತೆ ನೋಡಿಕೊಳ್ಳುವ ಉದ್ದೇಶ ಇಟ್ಟುಕೊಂಡಿದೆ. ಆದರೆ, ಬುಮ್ರಾ ಅವರ ಗೈರು ಹಾಜರಿ ಟೀಮ್ ಇಂಡಿಯಾದ ಡೆತ್ ಓವರ್ ಬೌಲಿಂಗ್ ಯೋಜನೆಯನ್ನು ಬುಡಮೇಲು ಮಾಡಿದೆ. ಹೀಗಾಗಿ ಈ ಪಂದ್ಯದಲ್ಲಿ ಅವರು ಫಿಟ್ ಆಗಿದ್ದರೆ ಕಣಕ್ಕಿಳಿಯುವುದು ಖಾತರಿ. ಒಂದು ವೇಳೆ ಅವರು ಆಡುವ ೧೧ರ ಬಳಕ್ಕೆ ಎಂಟ್ರಿ ಪಡೆದರೆ ಹಿರಿಯ ಬೌಲರ್ ಉಮೇಶ್ ಯಾದವ್ ಜಾಗ ಬಿಟ್ಟುಕೊಡಬೇಕಾಗುತ್ತದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಸಂಭವಿಸದು. ರೋಹಿತ್, ರಾಹುಲ್ ಇನಿಂಗ್ಸ್ ಆರಂಭಿಸಿದರೆ, ಕೊಹ್ಲಿ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಕ್ರಮಾಂಕ ಮುಂದುವರಿಸುವ ಸಾಧ್ಯತೆ ಇದೆ. ಆದರೆ, ಆಲ್‌ರೌಂಡರ್ ಅಕ್ಷರ್ ಪಟೇಲ್ ದಿನೇಶ್ ಕಾರ್ತಿಕ್ ಅವರಿಗಿಂತ ಮುಂಚೆ ಬ್ಯಾಟ್ ಮಾಡಲು ಬರುವ ಸಾಧ್ಯತೆಗಳಿವೆ. ಯಾಕೆಂದರೆ ಟೀಮ್ ಇಂಡಿಯಾದ ಏಕೈಕ ಎಡಗೈ ಬ್ಯಾಟರ್ ಅವರು. ಸ್ಪಿನ್‌ನಲ್ಲಿ ಯಜ್ವೇಂದ್ರ ಅವರೇ ಮುಂದುವರಿಯಬಹುದು.
ವಿಶ್ವಾಸದಲ್ಲಿ ಆಸೀಸ್
ಆರೋನ್ ಫಿಂಚ್ ಬಳಗ ಮೊದಲ ಪಂದ್ಯದ ಗೆಲುವಿನೊಂದಿಗೆ ವಿಶ್ವಾಸದಲ್ಲಿದ್ದು, ಈ ಪಂದ್ಯವನ್ನೂ ಜಯಸಿ ಸರಣಿ ವಶಪಡಿಸಿಕೊಳ್ಳುವ ಯೋಜನೆ ರೂಪಿಸಿಕೊಂಡಿರುತ್ತವೆ. ಹಿಂದಿನ ಪಂದ್ಯದಲ್ಲಿ ಆ ತಂಡದ ಬ್ಯಾಟರ್‌ಗಳು ಆಕ್ರಮಣಕಾರಿ ಆಟವಾಡಿ ಗೆಲುವು ದಾಖಲಿಸಿಕೊಂಡಿದ್ದರು. ಅದೇ ಪ್ರವೃತ್ತಿಯನ್ನು ಇಲ್ಲಿಯೂ ಮುಂದುವರಿಸಬಹುದು. ಹೇಜಲ್‌ವುಡ್, ಪ್ಯಾಟ್ ಕಮಿನ್ಸ್, ಎಲ್ಲಿಸ್ ಅವರಿರುವ ವೇಗದ ವಿಭಾಗವೂ ವಿಶ್ವಾಸದಲ್ಲಿದೆ.
ಪಂದ್ಯದ ವಿವರ
ತಾಣ : ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್, ವಿದರ್ಭ
ಸಮಯ: ರಾತ್ರಿ ೭ ಗಂಟೆಯಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ ಹಾಟ್‌ಸ್ಟಾರ್
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜ್ವೇಂದ್ರ ಚಹಲ್, ಉಮೇಶ್ ಯಾದವ್.
ಆಸ್ಟ್ರೇಲಿಯಾ : ಆರೋನ್ ಫಿಂಚ್, ಕೆಮೆರಾನ್ ಗ್ರೀನ್, ಸ್ಟ್ರೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ನಥಾನ್ ಎಲ್ಲಿಸ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಇದನ್ನೂ ಓದಿ | IND vs AUS | ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ 4 ವಿಕೆಟ್ ಸೋಲು