ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯ (IPL 2023 ) ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಗುಜರಾತ್ ಟೈಟನ್ಸ್ ಮೇ 7 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಬ್ಯಾಟಿಂಗ್ ಅಥವಾ ಬೌಲಿಂಗ್ ಸೇರಿದಂತೆ ಎಲ್ಲ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ಅತ್ತ , ಲಕ್ನೊ ತಂಡದ ಪ್ರದರ್ಶನ ಕುಸಿತ ಕಂಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವ ಹೊರತಾಗಿಯೂ ಉತ್ತಮ ಪ್ರದರ್ಶನದ ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ.
ನಾಯಕ ಕೆ.ಎಲ್.ರಾಹುಲ್ ಅವರ ಗಾಯಗೊಂಡಿರುವುದು ಎಲ್ಎಸ್ಜಿ ತಂಡಕ್ಕೆ ಆಘಾತವನ್ನುಂಟು ಮಾಡಿದೆ. ಮೇ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ 30 ವರ್ಷದ ಆಟಗಾರ ತೊಡೆ ನೋವಿಗೆ ಒಳಗಾಗಿದ್ದರು. ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು ಅವರು ಹಾಲಿ ಟೂರ್ನಿಯಲ್ಲಿ ಮುಂದುವರಿಯುತ್ತಿಲ್ಲ. ಅಲ್ಲದೆ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲೂ ಆಡುವುದಿಲ್ಲ. ರಾಹುಲ್ ಬದಲಿಗೆ ಕರ್ನಾಟಕದವರೇ ಆದ ಕರುಣ್ ನಾಯರ್ಗೆ ಎಲ್ಎಸ್ಜಿ ಅವಕಾಶ ಕೊಟ್ಟಿದೆ. ಆದರೆ ಪ್ರಸ್ತುತ ಋತುವಿನಲ್ಲಿ ಎಷ್ಟರ ಮಟ್ಟಿಗೆ ಮಿಂಚಲಿದ್ದಾರೆ ಎಂಬುದು ಚರ್ಚೆಯ ವಿಷಯ.
ಕೆ. ಎಲ್ ರಾಹುಲ್ ಕೂಡ ಉತ್ತಮ ಫಾರ್ಮ್ನಲ್ಲಿ ಇರಲಿಲ್ಲ. ಆದರೆ, ಆರಂಭಿಕ ಬ್ಯಾಟ್ಸ್ಮನ್ ಆಗಿ ತಂಡದ ವಿಕೆಟ್ ಉರುಳದಂತೆ ನೋಡಿಕೊಳ್ಳುತ್ತಿದ್ದರು. ನಾಯಕತ್ವದಲ್ಲೂ ತಂಡವನ್ನು ಉತ್ತಮವಾಗಿ ನಿರ್ವಹಿಸಿ ಆರಂಭಿಕ ಹಂತದಲ್ಲಿ ತಂಡಕ್ಕೆ ಗೆಲುವು ತಂದಕೊಟ್ಟಿದ್ದರು. ಇದೀಗ ಕೃಣಾಲ್ ಪಾಂಡ್ಯ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರು ಎಷ್ಟರ ಮಟ್ಟಿಗೆ ಸಾಫಲ್ಯ ಕಾಣುತ್ತಾರೆ ಎಂಬುದು ತಂಡದ ಫಲಿತಾಂಶವನ್ನು ಅವಲಂಬಿಸಿದೆ.
ಸಿಎಸ್ಕೆ ವಿರುದ್ಧದ ತನ್ನ ಹಿಂದಿನ ಪಂದ್ಯದಲ್ಲಿ ಲಕ್ನೊ ತಂಡದ ಆಯುಷ್ ಬದೋನಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ರೀತಿಯಲ್ಲಿ ಉಳಿದ ಭಾರತೀಯ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಬೌಲರ್ಗಳು ಕೂಡ ಗುಜರಾತ್ ಬ್ಯಾಟಿಂಗ್ ಬಲಕ್ಕೆ ಪೆಟ್ಟು ಕೊಡಲು ಸಜ್ಜಾಗಬೇಕಾಗಿದೆ.
ಹೇಗಿದೆ ಗುಜರಾತ್?
ಹಾಲಿ ಚಾಂಪಿಯನ್ ಗುಜರಾತ್ ತಂಡದ ಪರ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅದ್ಭುತ ಫಾರ್ಮ್ನಲ್ಲಿದ್ದಾರೆ. ಮೊಹಮ್ಮದ್ ಶಮಿ ಕೂಡ ಬೌಲಿಂಗ್ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಬೌಲಿಂಗ್ ವಿಭಾಗವೇ ಹೆಚ್ಚು ಬಲಿಷ್ಠ ಎನಿಸಿಕೊಂಡಿದೆ. ಐರ್ಲೆಂಡ್ ತಂಡ ಆಟಗಾರ ಜೋಶುವಾ ಲಿಟಲ್ ರಾಷ್ಟ್ರೀಯ ತಂಡದ ಸೇವೆಗಾಗಿ ತಂಡ ತೊರೆದಿದ್ದಾರೆ. ಅವರ ಸ್ಥಾನಕ್ಕೆ ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಬರಬಹುದು.
ಇದನ್ನೂ ಓದಿ : Rashimka Mandanna : ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟರ್ ಎಂದ ರಶ್ಮಿಕಾ ಮಂದಣ್ಣ
ಆರ್ಆರ್ ವಿರುದ್ಧದ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ತಮ್ಮ ಸಂಯಮ ಪ್ರದರ್ಶಿಸಿದ್ದರು. ಶುಭ್ಮನ್ ಗಿಲ್ ಅಸ್ಥಿರವಾಗಿದ್ದರು. ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಪಿಚ್ ಹೇಗಿದೆ?
ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಮತೋಲಿತವಾಗಿದೆ. ವೇಗಿಗಳು ಆರಂಭದಲ್ಲಿ ಸ್ವಲ್ಪ ಅನುಕೂಲ ಪಡೆಯುವ ಸಾಧ್ಯತೆಗಳಿವೆ. ತಳವೂರಿ ನಿಂತರೆ ಬ್ಯಾಟರ್ಗಳಿಗೂ ಹೆಚ್ಚು ರನ್ ಗಳಿಸುವ ಅವಕಾಶಗಳಿವೆ. 190 ಆಸುಪಾಸು ರನ್ ಕ್ರೋಡೀಕರಣಗೊಳ್ಳಬಹುದು. ಮೊದಲು ಬೌಲಿಂಗ್ ಮಾಡಿದ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು.
ಸಂಭಾವ್ಯ ಆಡುವ ಬಳಗ
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್.
ಲಕ್ನೋ ಸೂಪರ್ ಜೈಂಟ್ಸ್: ಕೈಲ್ ಮೇಯರ್ಸ್, ಮನನ್ ವೋಹ್ರಾ, ಆಯುಷ್ ಬದೋನಿ, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.
ತಂಡಗಳ ಮುಖಾಮುಖಿ ಬಲ
ಒಟ್ಟು ಆಡಿರುವ ಪಂದ್ಯಗಳು – 3
ಗುಜರಾತ್ ಟೈಟನ್ಸ್ ಗೆಲುವು – 3
ಲಕ್ನೋ ಸೂಪರ್ ಜಯಂಟ್ಸ್ ಗೆಲುವು – 0
ನೇರ ಪ್ರಸಾರದ ವಿವರ
ಪಂದ್ಯ ಸಮಯ: ಮಧ್ಯಾಹ್ನ 03:30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್ಸ್