ಗಯಾನಾ: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಅರಂಭಿಕ ಹಿನ್ನಡೆ ಉಂಟಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತು 0-2 ಹಿನ್ನಡೆಯಲ್ಲಿದೆ. ಮಂಗಳವಾರ ನಡೆಯುವ ಮೂರನೇ ಪಂದ್ಯದಲ್ಲಿ ಸೋತರೆ ಸರಣಿ ಸೋತಂತೆ. ಹೀಗಾಗಿ ಈ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದೆ. ಇದೇ ವೇಳೆ ಭಾರತದ ವಿರುದ್ಧ ಉಳಿದಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದರೆ ಸರಣಿ ಕೈವಶವಾಗಲಿರುವ ಕಾರಣ ವೆಸ್ಟ್ ಇಂಡೀಸ್ ತಂಡಕ್ಕೆ ಹೆಚ್ಚು ಅವಕಾಶ ದೊರಕಿದಂತಾಗಿದೆ. ರೋವ್ಮನ್ ಪೊವೆಲ್ ಪಡೆ 2016ರ ನಂತರ ಮೊದಲ ಬಾರಿಗೆ ಸತತ ಎರಡು ಟಿ20 ಪಂದ್ಯಗಳಲ್ಲಿ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದು ಸರಣಿಯನ್ನೂ ಗೆಲ್ಲುವ ಅವಕಾಶ ಪಡೆದುಕೊಂಡಿದೆ.
ಗಯಾನಾದಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ತಿಲಕ್ ವರ್ಮಾ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕವನ್ನು ಗಳಿಸುವ ಮೂಲಕ ಮತ್ತೊಮ್ಮೆ ಪ್ರಭಾವ ಬೀರಿದರು. ಅಂತಿಮವಾಗಿ 41 ಎಸೆತಗಳಲ್ಲಿ 51 ರನ್ ಗಳಿಗೆ ಔಟಾದರು. ಆದಾಗ್ಯೂ, ಇತರ ಭಾರತೀಯ ಬ್ಯಾಟರ್ಗಳು ವೈಫಲ್ಯ ಎದುರಿಸಿದರು. ಅದುವೇ ಸೋಲಿಗೆ ಮೊದಲ ಕಾರಣ. ಈ ಸಮಸ್ಯೆಯನ್ನು ಮೂರನೇ ಪಂದ್ಯದಲ್ಲಿ ಸರಿಪಡಿಸಬೇಕಾಗಿದೆ.
ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ತ ಆರಂಭಿಕ ಸ್ಪೆಲ್ನಲ್ಲಿ ವಿಂಡೀಸ್ ಬ್ಯಾಟರ್ಗಳಾದ ಬ್ರೆಂಡನ್ ಕಿಂಗ್ ಮತ್ತು ಜಾನ್ಸನ್ ಚಾರ್ಲ್ಸ್ ಅವರನ್ನು ಔಟ್ ಮಾಡಿದ್ದರಿಂದ ವೆಸ್ಟ್ ಇಂಡೀಸ್ ಮೊದಲ ಓವರ್ನಲ್ಲಿ 2 ರನ್ಗೆ2 ವಿಕೆಟ್ ಕಳೆದುಕೊಂಡಿತು. ಆದರೆ, ನಿಕೋಲಸ್ ಪೂರನ್ 40 ಎಸೆತಗಳಲ್ಲಿ 67 ರನ್ ಗಳಿಸುವ ಮೂಲಕ ಆತಿಥೇಯರಿಗೆ ಅಗತ್ಯವಾದ ರನ್ ರೇಟ್ ಅನ್ನು ಆರಕ್ಕಿಂತ ಕಡಿಮೆ ಮಾಡಲು ಸಹಾಯ ಮಾಡಿದರು. ಇಲ್ಲಿ ಭಾರತ ತಂಡದ ಇತರ ಬೌಲರ್ಗಳ ವೈಫಲ್ಯ ಕಾಣುತ್ತಿದೆ.
ಆಗಸ್ಟ್ 8 ರಂದು ಗಯಾನಾದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಅದೇ ರೀತಿ ಸತತವಾಗಿ 11 ಟಿ20 ಸರಣಿಯನ್ನು ಗೆದ್ದಿರುವ ದಾಖಲೆಯನ್ನು ಮುರಿಯಲು ವಿಂಡೀಸ್ ತಂಡಕ್ಕೆ ಅವಕಾಶ ನೀಡಬಾರದು. ಕಳಪೆ ದಾಖಲೆಗೆ ಅವಕಾಶ ಮಾಡಬಾರದು.
ಎರಡನೇ ಟಿ-20 ಪಂದ್ಯಕ್ಕೂ ಮುನ್ನ ಟಾಸ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ನೆಟ್ಸ್ನಲ್ಲಿ ಕೈಗೆ ಪೆಟ್ಟಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದ್ದರು. ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ ರವಿ ಬಿಷ್ಣೋಯ್ ಬದಲಿಗೆ ಫಾರ್ಮ್ ನಲ್ಲಿರುವ ಸ್ಪಿನ್ನರ್ ಕಣಕ್ಕಿಳಿಯಬೇಕು. ಇದಲ್ಲದೆ, ಎರಡನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಅಕ್ಷರ್ ತಂಡದಿಂದ ಹೊರಕ್ಕೆ ಉಳಿಯಬೇಕಾದೀತು.
ಇದನ್ನೂ ಓದಿ : World Cup 2023 : ವಿಶ್ವ ಕಪ್ ನಮ್ಮದೇ; ರೋಹಿತ್ ಶರ್ಮಾ ವಿಶ್ವಾಸ
ಪಿಚ್ ಪರಿಸ್ಥಿತಿ
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯಕ್ಕೆ ಮೈದಾನದಲ್ಲಿ ಸ್ಕೋರ್ ಮಾಡುವುದು ಕಷ್ಟಕರವಾಗಿತ್ತು. ಸ್ಪಿನ್ನರ್ಗಳು ವಿಶೇಷವಾಗಿ ಮಿಂಚಿದರು. ಅದೇ ಪಿಚ್ ಬಳಸಿದರೆ, ರನ್ ಗಳಿಸುವುದು ಕಠಿಣವಾಗಬಹುದು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ ಆಯ್ಕೆ.
ಸಂಭಾವ್ಯ ತಂಡಗಳು
ಭಾರತ: ಶುಬ್ಮನ್ ಗಿಲ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರೆಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮಾಯರ್, ರೋವ್ಮನ್ ಪೊವೆಲ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಅಕೇಲ್ ಹೋಸಿನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್.
ಮುಖಾಮುಖಿ ದಾಖಲೆ
ಆಡಿದ ಪಂದ್ಯಗಳು – 27
ವೆಸ್ಟ್ ಇಂಡೀಸ್ ಗೆಲುವು – 9
ಭಾರತ ಗೆಲುವು – 17
ಫಲಿತಾಂಶವಿಲ್ಲ – 1
ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು
ಪಂದ್ಯ ಸಮಯ: ರಾತ್ರಿ 08:00 ಗಂಟೆಗೆ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನೆಮಾ ಮತ್ತು ಫ್ಯಾನ್ಕೋಡ್