ಅಹಮದಾಬಾದ್: ಆರು ವಾರಗಳ ಕಾಲ ನಡೆದ ಏಕ ದಿನ ವಿಶ್ವ ಕಪ್ನ (ICC World Cup 2023) ಕೊನೆಯ ಮತ್ತು ವಿಜೇತರನ್ನು ನಿರ್ಣಯಿಸುವ ಪಂದ್ಯ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ನೆವೆಂಬರ್ 19ರಂದು ನಡೆಯಲಿದೆ. ಅಕ್ಟೋಬರ್ 5ರಂದು ಟೂರ್ನಿಯ ಉದ್ಘಾಟನಾ ಆವೃತ್ತಿಯೂ ಇದೇ ಸ್ಟೇಡಿಯಮ್ನಲ್ಲಿ ನಡೆದಿತ್ತು. ಇದೀಗ ಅದೇ ಸ್ಟೇಡಿಯಮ್ನಲ್ಲಿ ವಿಶ್ವ ವಿಜೇತರು ಯಾರೆಂಬುದು ಪ್ರಕಟವಾಗಲಿದೆ. ಸಹಜವಾಗಿ ಟೂರ್ನಿಯ ಬಲಿಷ್ಠ ಎರಡು ತಂಡಗಳಾದ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ಗೇರಿದ್ದು ಇತ್ತಂಡಗಳು ಪ್ರಶಸ್ತಿಗಾಗಿ ಸೆಣಸಾಸಲಿವೆ.
47 ಪಂದ್ಯಗಳು ಮುಕ್ತಾಯಗೊಂಡಿದ್ದು ಇದರಲ್ಲಿ ಸೆಮಿ ಫೈನಲ್ ಸೇರಿದಂತೆ 10ರಲ್ಲಿ 10ಪಂದ್ಯಗಳನ್ನೂ ಗೆದ್ದಿರುವ ಭಾರತ ಹಾಗೂ 8 ಪಂದ್ಯಗಳಲ್ಲಿ ಗೆಲುವು ಕಂಡಿರುವ ಆಸ್ಟ್ರೇಲಿಯಾ ಟ್ರೋಫಿಗಾಗಿ ಸೆಣಸಾಡಲಿವೆ. ಇದು ಟೂರ್ನಿಯ ಅತ್ಯಂತ ರೋಚಕ ಹಾಗೂ ನಿರ್ಣಾಯಕ ಪಂದ್ಯವಾಗಿದೆ. ಕೋಟ್ಯಂತರ ಭಾರತೀಯರು ಹಾಗೂ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಹಾಲಿ ಟೂರ್ನಿಯ ವಿಜೇತರು ಯಾರು ಎಂಬ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗಿದೆ.
20 ವರ್ಷಗ ಹಿಂದಿನ ಟೂರ್ನಿಯ ಪುನರಾವರ್ತನೆ
ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾವನ್ನು ಕ್ರಿಕೆಟ್ ಅಭಿಮಾನಿಗಳು ಈ ಹಿಂದೆ ನೋಡಿದ್ದಾರೆ. 2003ರ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ನಿರಾಸೆ ಎದುರಿಸಿತ್ತು. ಬೃಹತ್ ಅಂತರದ ವಿಜಯ ಕಂಡಿರುವ ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿದಿತ್ತು. ಅದೇ ಮಾದರಿಯ ರೋಚಕತೆಯನ್ನು ಈ ಪಂದ್ಯದಲ್ಲೂ ನಿರೀಕ್ಷೆ ಮಾಡಬಹುದು.
ಭಾರತ ಹಾಗೂ ಆಸ್ಟ್ರೇಲಿಯಾ ಹಾಲಿ ಆವೃತ್ತಿಯ ವಿಶ್ವ ಕಪ್ನ ತಮ್ಮ ಮೊದಲ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗೆಲುವು ಕಂಡಿತ್ತು. ಈ ಎರಡು ಕ್ರಿಕೆಟ್ ಶಕ್ತಿ ಕೇಂದ್ರಗಳು ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿ ಸರಿಯಾಗಿ 41 ದಿನಗಳಾಗಿವೆ. ಈಗ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತಮ್ಮ ಹಣೆಬರಹ ನಿರ್ಧರಿಸಲಿದ್ದಾರೆ.
ಆಸ್ಟ್ರೇಲಿಯಾ ಇಲ್ಲಿಯವರೆಗೆ ತಮ್ಮ ಏಳು ವಿಶ್ವಕಪ್ ಫೈನಲ್ಗಳಲ್ಲಿ ಐದನ್ನು ಗೆದ್ದಿದೆ. ಆದರೆ ಪ್ರಸ್ತುತ ಫಾರ್ಮ್ ಐಸಿಸಿ ಬರವನ್ನು ಕೊನೆಗೊಳಿಸಲು ಭಾರತಕ್ಕೆ ಉತ್ತಮ ಅವಕಾಶವನ್ನು ನೀಡಿದೆ. ಪಂದ್ಯಾವಳಿಯ ಕೊನೇ ಹಂತದಲ್ಲಿ ಆಸ್ಟ್ರೇಲಿಯಾ ಪ್ರದರ್ಶನದ ಉತ್ತುಂಗದಲ್ಲಿದೆ. ಭಾರತವು 1.3 ಬಿಲಿಯನ್ ಅಭಿಮಾನಿಗಳ ಭಾರವನ್ನು ಹೊತ್ತುಕೊಂಡಿದೆ.
ಭಾರತ
ನಾಗ್ಪುರ ಮೂಲದ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. 2011ರಲ್ಲಿ ಭಾರತ ತಂಡ ವಿಶ್ವ ಕಪ್ ಗೆದ್ದಾಗ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ 12 ವರ್ಷಗಳ ನಂತರ ತನ್ನ ದೇಶವನ್ನು ವಿಶ್ವಕಪ್ ಫೈನಲ್ಗೆ ಮುನ್ನಡೆಸಿದ್ದಾರೆ ಅವರು. ಭಾರತದ ತಂಡವನ್ನು ಸಮರ್ಥವಾಗಿ ಫೈನಲ್ಗೇರಿಸಿದ್ದಾರೆ ಅವರು.
ಹಾಲಿ ಆವೃತ್ತಿಯಲ್ಲಿ ಭಾರತ ತಂಡ ಒಟ್ಟಿನಿಂದ ಆಡುತ್ತಿದೆ. ರೋಹಿತ್ ಅವರ ನಿಸ್ವಾರ್ಥ ಸ್ವಭಾವವು ತಂಡದಲ್ಲಿ ಜೋಶ್ ಹುಟ್ಟಿಸುವ ಜತೆಗೆ ಪಂದ್ಯದಲ್ಲಿ ಉತ್ತಮ ಆರಂಭವನ್ನು ದೊರಕಿಸಿಕೊಡುತ್ತಿದೆ. ಅದೇ ಅಭ್ಯಾಸವನ್ನು ಅವರು ಫೈನಲ್ನಲ್ಲಿ ತೋರಿಸಲಿದ್ದಾರೆ. ಕೊಹ್ಲಿ ಮತ್ತೊಂದು ಶತಕ ಯಾಕೆ ಹೊಡಿಯಬಾರದು ಎಂಬುದು ಅಭಿಮಾನಿಗಳ ಪ್ರಶ್ನೆ.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಇದುವರೆಗಿನ ಅತ್ಯಂತ ಸಮರ್ಥ ಪ್ರದರ್ಶನ ನೀಡುತ್ತಿದೆ. ಗೆಲುವಿನ ಅಭಿಯಾನದಲ್ಲಿ ಮಧ್ಯಮ ಕ್ರಮಾಂಕದ ಕೊಡುಗೆ ದೊಡ್ಡದಿದೆ. ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಉತ್ಸಾಹ ತುಂಬಿದ್ದಾರೆ.
ಭಾರತದ ವೇಗದ ಬೌಲಿಂಗ್ ವಿಭಾಗ ಚರ್ಚೆಯ ವಿಷಯವಾಗಿದೆ. ಮೊಹಮ್ಮದ್ ಶಮಿ 6 ಪಂದ್ಯಗಳಲ್ಲಿ 23 ವಿಕೆಟ್ಗಳನ್ನು ಪಡೆದಿದ್ದರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ನೇತೃತ್ವದ ಬೌಲಿಂಗ್ ವಿಭಾಗವು 10 ಪಂದ್ಯಗಳಲ್ಲಿ 96 ವಿಕೆಟ್ಗಳನ್ನು ಉರುಳಿಸಿವೆ. ಹೀಗಾಗಿ ಭಾರತ ಪರ ಮತ್ತೊಂದು ಬಾರಿ ಮಿಂಚುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಭಾರತವು ತಂಡ ಶಾಂತವಾಗಿ, ಸಂಯೋಜಿತವಾಗಿ ಮತ್ತು ಆತ್ಮವಿಶ್ವಾಸದಿಂದ ಆಡುತ್ತಿದೆ..ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರಿಗೆ ಯಾವುದೇ ಪ್ರಮುಖ ಆಯ್ಕೆ ತಲೆನೋವು ಇಲ್ಲ, ಏಕೆಂದರೆ ಭಾರತವು ಬಹುಶಃ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು ಗೆದ್ದ ಅದೇ ತಂಡಕ್ಕೆ ಅಂಟಿಕೊಳ್ಳಲಿದೆ.
ಸಿಡಿದೆದ್ದ ಆಸ್ಟ್ರೇಲಿಯಾ
2011 ರಲ್ಲಿ, 18 ವರ್ಷದ ಪ್ಯಾಟ್ ಕಮಿನ್ಸ್ ಮೊದಲ ಬಾರಿ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಜತೆ ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವರೀಗ ಕಾಂಗರೂ ಪಡೆಯ ನಾಐಕ.12 ವರ್ಷಗಳ ನಂತರ, ಅವರು ಲಂಡನ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲಿ ಸೋಲಿಸಿದ್ದು ಭಾರತ ತಂಡವನ್ನೇ. ಐದು ತಿಂಗಳ ಅವಧಿಯಲ್ಲಿ ತಂಡವನ್ನು ವಿಶ್ವಕಪ್ ಫೈನಲ್ ತಲುಪಿಸಿದ್ದಾರೆ ಅವರು.
ಆಸ್ಟ್ರೇಲಿಯಾದ 2023 ರ ವಿಶ್ವಕಪ್ ಅಭಿಯಾನದ ಆರಂಭ ನಿರಾಸೆಯಿಂದ ಕೂಡಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಆದರೆ ಆ ಬಳಿಕ ಪ್ರತಿ ಪಂದ್ಯವನ್ನು ಫೈನಲ್ ಪಂದ್ಯದಂತೆಯೇ ಆಡಿದ ಆ ತಂಡ ಬಳಿಕ ಒಂದೇ ಒಂದು ಸೋಲು ಕಾಣದೇ ಫೈನಲ್ಗೆ ತಲುಪಿದೆ. ಇದು ಆ ತಂಡಕ್ಕೆ ಎಂಟನೇ ಏಕದಿನ ವಿಶ್ವಕಪ್ ಫೈನಲ್.
ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಸೋಲುವ ಅಂಚಿನಲ್ಲಿದ್ದಾಗ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಎಕ್ಸ್ ನಲ್ಲಿ ಹೀಗೆ ಬರೆದಿ್ದರು. “ಆಸ್ಟ್ರೇಲಿಯಾ ಇಂದು ಸೋತರೆ ಅವರು ಇಡೀ ಪಂದ್ಯಾವಳಿಯಲ್ಲಿ ಎಲ್ಲರ ಮೇಲೂ ತಮ್ಮ ಕೋಪ ತೋರಿಸುತ್ತಾರೆ. ನಿಮಗೆ ಏನು ಬೇಕೋ ಅದನ್ನು ನೀವೇ ನಿರ್ಧರಿಸಿ ಎಂದು ಬರೆದಿದ್ದರು ಸತ್ಯವಾಗಿದೆ.
ಆಸ್ಟ್ರೇಲಿಯಾದ ಅಗ್ರ ಮೂರು ಬ್ಯಾಟರ್ಗಳಾದ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ 150 ಕ್ಕಿಂತ ಹೆಚ್ಚು ವೈಯಕ್ತಿಕ ಸ್ಕೋರ್ ಹೊಂದಿದ್ದಾರೆ. ವಾರ್ನರ್ ತಮ್ಮ ಸಾಮರ್ಥ್ಯವನ್ನು ತಂಡಕ್ಕೆ ಮುಡಿಪಾಗಿಟ್ಟಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಮಕ್ಕಳಂತೆ ಕ್ರಿಕೆಟ್ ಆಡುತ್ತಿದ್ದಾರೆ. ಸ್ಟೀವ್ ಸ್ಮಿತ್ ಸ್ವಲ್ಪ ಅಸಹಜವಾಗಿದ್ದರೂ, ಮಾರ್ನಸ್ ಲಾಬುಶೇನ್ ಅವರ ಉಪಸ್ಥಿತಿಯು ತಂಡಕ್ಕೆ ಬಲ ತಂದಿದೆ. ಬೌಲಿಂಗ್ನಲ್ಲಿ ಮಿಚೆಲ್ ಸ್ಟಾರ್ಕ್ ಸ್ವಿಂಗ್ ಬೌಲಿಂಗ್ ಚೆನ್ನಾಗಿ ಕೆಲಸ ಮಾಡುತ್ತಿದೆ. ಜೋಶ್ ಹೇಜಲ್ವುಡ್ ಮತ್ತು ಕಮಿನ್ಸ್ ಸ್ವಲ್ಪ ಅನಿಶ್ಚಿತರಾಗಿದ್ದಾರೆ. ಮೂವರು ತಮ್ಮ ಹೆಸರಿಗೆ 40 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಆದರೆ ಪವರ್ ಪ್ಲೇನಲ್ಲಿ ಆಕ್ರಮಣದ ಕೊರತೆಯಿದೆ. ಆಡಮ್ ಜಂಪಾ ಅವರ ದೃಢತೆ ಆಸ್ಟ್ರೇಲಿಯಾಕ್ಕೆ ಗೆಲುವು ತರಲಿದೆ. ಅವರು 21.5 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಹತ್ತರಲ್ಲಿ 21 ವಿಕೆಟ್ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ : ಫೈನಲ್ ಪಂದ್ಯದಲ್ಲಿ ವರ್ಣರಂಜಿತ ಕಾರ್ಯಕ್ರಮ; ಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ
ಮಾರ್ನಸ್ ಸ್ಟೊಯಿನಿಸ್ ಅವರ ಸ್ಪಿನ್ ಆಡುವ ಸಾಮರ್ಥ್ಯವು ಇತ್ತೀಚಿನ ದಿನಗಳಲ್ಲಿ ಕಳವಳಕಾರಿಯಾಗಿದೆ, ಮಾರ್ನಸ್ ಲಾಬುಶೇನ್ ಅವರ ಫಾರ್ಮ್ ಮತ್ತು ಆಸ್ಟ್ರೇಲಿಯಾವನ್ನು ಬಿಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದೆ. ಲ್ಯಾಬುಶೇನ್ ಬದಲಿಗೆ ಸ್ಟೋಯ್ನಿಸ್ ಆಡುವ ನಿರೀಕ್ಷೆಯಿದೆ.
ಪಿಚ್ ರಿಪೋರ್ಟ್
ಅಹಮದಾಬಾದ್ನಲ್ಲಿ ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಹೆಚ್ಚಾಗಿರುತ್ತದೆ ಮತ್ತು ಸಂಜೆ ತುಂಬಾ ತಂಪಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಂಪು ಮತ್ತು ಕಪ್ಪು ಮಣ್ಣಿನ ವಿಕೆಟ್ ಗಳಿವೆ. ಕೆಂಪು ಬಣ್ಣವು ಬ್ಯಾಟರ್ಗಳಿಗೆ ನೆರವಾಗುತ್ತದೆ. ಬೌಲರ್ಗಳಿಗೆ ಲೆಂಥ್ ಎಸೆತಕ್ಕೆ ನೆರವಾಗುತ್ತದೆ. ಕಪ್ಪು ಮಣ್ಣಿನ ಪಿಚ್ ನಿಧಾನವಾಗಿದೆ. ಇಲ್ಲಿನ ಪಿಚ್ ಒಂದು ಬಾರಿ ಸೆಟ್ ಆದ ಬ್ಯಾಟರ್ಗಳಿಗೆ ಹಲವು ಅನುಕೂಲಗಳನ್ನು ನೀಡುತ್ತದೆ.
ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್/ ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹೇಜಲ್ವುಡ್.