Site icon Vistara News

IND vs WI T20 | 2ನೇ ಪಂದ್ಯದ ಗೆಲುವಿಗೆ ಹಳೆ ತಂತ್ರ ಫಲಿಸುವುದೇ?

IND vs WI T20

ಬಾಸ್‌ಟೆರ್‌ (ವೆಸ್ಟ್‌ ಇಂಡೀಸ್‌) : ಮೊದಲ ಪಂದ್ಯದಲ್ಲಿ ಅಮೋಘ ೬೮ ರನ್‌ಗಳ ಜಯ ದಾಖಲಿಸಿರುವ ಭಾರತ ತಂಡ ಸೋಮವಾರ ನಡೆಯಲಿರುವ ಎರಡನೇ ಟಿ೨೦ ಪಂದ್ಯದಲ್ಲಿ (IND vs WI T20) ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಾಡಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಯಶಸ್ಸು ಸಾಧಿಸುವುದು ರೋಹಿತ್‌ ಶರ್ಮ ಬಳಗದ ಗುರಿಯಾಗಿದೆ.

ಮೊದಲ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ರಣತಂತ್ರ ಸಂಪೂರ್ಣವಾಗಿ ಯಶಸ್ಸು ಕಂಡಿತ್ತು. ಪ್ರಮಖವಾಗಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌ ಹಾಗೂ ರವಿ ಬಿಷ್ಣೋಯಿ ಅವರನ್ನು ಕಣಕ್ಕಿಳಿಸಿ ಯಶಸ್ಸು ಕಂಡಿದ್ದರು. ಅಲ್ಲದೆ, ಫಿನಿಶರ್‌ ದಿನೇಶ್‌ ಕಾರ್ತಿಕ್‌ಗೆ ಅವಕಾಶ ನೀಡುವ ಮೂಲಕ ಅಲ್ಲೂ ಸಾಫಲ್ಯ ಅನುಭವಿಸಿದ್ದರು. ಹೀಗಾಗಿ ಅದೇ ಉಮೇದಿನಲ್ಲಿ ಎರಡನೇ ಪಂದ್ಯದಲ್ಲೂ ಭಾರತ ಕಣಕ್ಕೆ ಇಳಿಯಲಿದೆ.

ಮುಂದಿನ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಟಿ೨೦ ವಿಶ್ವ ಕಪ್‌ಗೆ ಸಿದ್ಧಗೊಳ್ಳುವುದೇ ಭಾರತ ತಂಡದ ಗುರಿಯಾಗಿರುವ ಕಾರಣ ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿಯನ್ನು ಕೋಚ್ ದ್ರಾವಿಡ್‌ ಎಲ್ಲರಿಗೂ ಪರೀಕ್ಷೆ ಎಂಬ ರೀತಿಯಲ್ಲಿ ಪರಿಗಣಿಸಿದ್ದಾರೆ. ಹೀಗಾಗಿ ಬೆಂಚ್‌ ಸ್ಟ್ರೆಂಥ್‌ ಹಾಗೂ ಆಡುವ ಬಳಗವನ್ನು ಭದ್ರಗೊಳಿಸುವುದು ಟೀಮ್‌ ಇಂಡಿಯಾದ ಮ್ಯಾನೇಜ್ಮೆಂಟ್‌ ಉದ್ದೇಶವಾಗಿದೆ.

ಆರಂಭಿಕರ ಸಮಸ್ಯೆಗೆ ಪರಿಹಾರ

ಇಂಗ್ಲೆಂಡ್‌ ವಿರುದ್ಧದ ಟಿ೨೦ ಸರಣಿಯಲ್ಲಿ ರಿಷಭ್‌ ಪಂತ್‌ ಆರಂಭಿಕಾಗಿ ಬ್ಯಾಟ್‌ ಮಾಡಲು ಇಳಿಯುತ್ತಿದ್ದರು. ಆದರೆ, ವಿಂಡೀಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ಅವಕಾಶ ನೀಡಲಾಯಿತು. ಅವರೂ ತಮ್ಮ ಫ್ಲಿಕ್‌ ಶಾಟ್‌ಗಳ ಮೂಲಕ ೧೬ ಎಸೆತಗಳಲ್ಲಿ ೨೪ ರನ್ ಬಾರಿಸಿ ಉತ್ತಮ ಆರಂಭ ತಂದುಕೊಟ್ಟಿದ್ದರು. ಕೆ. ಎಲ್‌. ರಾಹುಲ್‌ ಅಲಭ್ಯರಾಗಿರುವ ಕಾರಣ ಭಾರತಕ್ಕೆ ಪರಿಕ್ಷೆ ಅನಿವಾರ್ಯವಾಗಿದೆ.

ಹಿಂದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನು ಫೇಲ್‌ ಆಗಿದ್ದರು. ಅವರು ಈ ಪಂದ್ಯದಲ್ಲಿ ತಮ್ಮ ತಾಕತ್ತು ತೋರಿಸಬೇಕಾಗುತ್ತದೆ. ಆದರೆ, ದಿನೇಶ್‌ ಕಾರ್ತಿಕ್‌ ತಮ್ಮ ಮೇಲಿನ ವಿಶ್ವಾಸಕ್ಕೆ ಬೆಲೆ ಕೊಟ್ಟಿದ್ದರು. ಹೀಗಾಗಿ ಭಾರತ ತಂಡದ ಬ್ಯಾಟಿಂಗ್‌ ಸಾಮರ್ಥ್ಯ ಇನ್ನಷ್ಟು ಹೆಚ್ಚಾದಂತೆ ತೋರುತ್ತಿದೆ.

ಬೌಲಿಂಗ್‌ ವಿಭಾಗ ಹೇಗಿದೆ?

ಕಳೆದ ಹಲವು ವರ್ಷಗಳಿಂದ ಭಾರತ ತಂಡಕ್ಕೆ ಉತ್ತಮ ಎಡಗೈ ಬೌಲರ್‌ಗಳು ಸಿಗುತ್ತಿಲ್ಲ. ನಟರಾಜನ್‌ ಅವರು ಆಗಾಗ ಬಂದು ಹೋಗುತ್ತಿದ್ದಾರೆ. ಅವರಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ದೊರೆಯುತ್ತಿಲ್ಲ. ಇದೀಗ ಅರ್ಶ್‌ದೀಪ್‌ ಸಿಂಗ್‌ಗೆ ಚಾನ್ಸ್ ಕೊಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ಸೂ ಕಂಡಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಅವರು ಮತ್ತೆ ಅವಕಾಶ ಪಡೆದುಕೊಳ್ಳಬಹುದು.

ಸ್ಪಿನ್‌ ಬೌಲರ್‌ಗಳಾದ ಅಶ್ವಿನ್ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ ಹಿಂದಿನ ಪಂದ್ಯದಲ್ಲಿ ಭಾರತದ ಮುನ್ನಡೆಗೆ ಕಾರಣರಾಗಿದ್ದರು. ಹೀಗಾಗಿ ರಾಹುಲ್ ದ್ರಾವಿಡ್‌ ಅವರಿಬ್ಬರಿಗೆ ಮತ್ತೊಂದು ಅವಕಾಶ ನೀಡುವ ಎಲ್ಲ ಸಾಧ್ಯತೆಗಳಿವೆ,

ಪಿಚ್‌ ಹೇಗಿದೆ?

ಬಾಸ್‌ಟೆರ್‌ನ ವಾರ್ನರ್‌ ಪಾರ್ಕ್‌ ಸ್ಟೇಡಿಯಮ್‌ನ ಪಿಚ್‌ ವೇಗಿಗಳಿಗೆ ಅನುಕೂಲಕರ. ಅಲ್ಲದೇ ಟಿ೨೦ಯಲ್ಲಿ ಕಡಿಮೆ ಮೊತ್ತ ದಾಖಲಾಗುವ ಕ್ರೀಡಾಂಗಣಲ್ಲಿ ಒಂದು. ೨೦೧೯ರಲ್ಲಿ ಈ ಪಿಚ್‌ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ೪೫ ರನ್‌ಗಳಿಗೆ ಆಲ್‌ಔಟ್‌ ಅಗಿತ್ತು.

ಪಂದ್ಯದ ವಿವರ

ಪಂದ್ಯ ಆರಂಭ | ರಾತ್ರಿ ೮ ಗಂಟೆಗೆ

ಪಂದ್ಯದ ತಾಣ | ವಾರ್ನರ್‌ ಪಾರ್ಕ್‌ ಸ್ಟೇಡಿಯಮ್‌, ಬಾಸ್‌ರೆಟ್‌

ನೇರ ಪ್ರಸಾರ | ಪ್ಯಾನ್‌ಕೋಡ್‌ ಆಪ್‌ ಹಾಗೂ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಲಭ್ಯ

ಇದನ್ನೂ ಓದಿ | IND vs WI T20 | ವಿಂಡೀಸ್‌ ವಿರುದ್ಧ ಭಾರತಕ್ಕೆ 68 ರನ್‌ ಭರ್ಜರಿ ಜಯ

Exit mobile version