ಕ್ಯಾಂಡಿ: ಭಾರತ ಹಾಗೂ ನೇಪಾಳ ನಡುವಿನ ಏಷ್ಯಾ ಕಪ್ ಲೀಗ್ ಹಂತದ ಪಂದ್ಯ ಸೋಮವಾರ (ಸೆಪ್ಟೆಂಬರ್4ರಂದು) ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೂ ಇದೇ ಸ್ಟೇಡಿಯಮ್ನಲ್ಲಿ ನಡೆದಿತ್ತು. ಆದರೆ ಆ ಪಂದ್ಯವು ಒಂದು ಇನಿಂಗ್ಸ್ ಮುಕ್ತಾಯಗೊಂಡ ತಕ್ಷಣ ಮಳೆಯಿಂದಾಗಿ ಟೈ ಆಗಿತ್ತು. ಇತ್ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳುವ ಅನಿವಾರ್ಯತೆ ಎದುರಿಸಿದವು. ಹೀಗಾಗಿ ಸೋಮವಾರ ಪಂದ್ಯಕ್ಕೂ ಮಳೆ ಅಡಚಣೆ ಮಾಡಬಹುದೇ ಎಂಬ ಅನುಮಾನ ಕ್ರಿಕೆಟ್ ಅಭಿಮಾನಿಗಳಿಗೆ ಉಂಟಾಗಿದೆ.
ಭಾರತ, ನೇಪಾಳ ಹಾಗೂ ಪಾಕಿಸ್ತಾನ ತಂಡ ಟೂರ್ನಿಯ ಏ ಗುಂಪಿನಲ್ಲಿದೆ. ಈ ಮೂರು ತಂಡಗಳಲ್ಲಿ ಎರಡು ತಂಡಗಳು ಸೂಪರ್-4 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧದ ಭರ್ಜರಿ ಜಯ ಹಾಗೂ ಭಾರತ ವಿರುದ್ಧದ ಪಂದ್ಯ ಟೈ ಆದ ಹೊರತಾಗಿಯೂ ಪಾಕಿಸ್ತಾನ ತಂಡ ಸೂಪರ್-4 ಹಂತಕ್ಕೆ ತೇರ್ಗಡೆಗೊಂಡಿದೆ. ಇನ್ನು ಅವಕಾಶ ಇರುವುದು ಭಾರತ ಮತ್ತು ನೇಪಾಳ ತಂಡಕ್ಕೆ.
ಶನಿವಾರದ ಪಂದ್ಯ ಟೈ ಆದ ಹೊರತಾಗಿಯೂ ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಭಾರತಕ್ಕೆ 1 ಅಂಕಗಳು ಲಭಿಸಿರುವ ಕಾರಣ ಆ ಸ್ಥಾನ ಪಡೆದುಕೊಂಡಿದೆ. ಇನ್ನು ನೇಪಾಳ ಮೊದಲ ಪಂದ್ಯದಲ್ಲಿ ಸೋತಿರುವ ಕಾರಣ ಶೂನ್ಯ ಅಂಕದಲ್ಲಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸೂಪರ್-4 ಹಂತಕ್ಕೇರುವ ಅವಕಾಶ ಭಾರತಕ್ಕೆ ಇದೆ. ಯಾಕೆಂದರೆ ಭಾರತಕ್ಕೆ ಎರಡನೇ ಸ್ಥಾನದಲ್ಲಿಯೇ ಮುಂದುವರಿಯುತ್ತದೆ ಹಾಗೂ ನೇಪಾಳ ಸ್ಥಾನ ಕಳೆದುಕೊಳ್ಳುತ್ತದೆ. ಪಂದ್ಯ ಆರಂಭಗೊಂಡು ಮಧ್ಯದಲ್ಲಿ ಟೈ ಆದರೂ ತಲಾ ಒಂದೊಂದು ಅಂಕ ಸಿಕ್ಕಿದಾಗ ಭಾರತಕ್ಕೆ ಅವಕಾಶವಿದೆ.
ನೇಪಾಳ ಗೆದ್ದರಷ್ಟೇ ಭಾರತ ವಾಪಸ್
ಸೋಮವಾರ ನಡೆಯಲಿರುವ ಪಂದ್ಯದಲ್ಲಿ ನೇಪಾಳ ತಂಡವೇನಾದರೂ ಭಾರತವನ್ನು ಮಣಿಸಿದರೆ ಮಾತ್ರ ಆ ತಂಡಕ್ಕೆ ಪ್ಲೇಆಫ್ ಹಂತಕ್ಕೇರುವ ಅವಕಾಶವಿದೆ. ಆದರೆ, ಅದು ಅಷ್ಟೊಂದು ಸುಲಭವಲ್ಲ. ನೇಪಾಳ ತಂಡಕ್ಕೆ ಹೋಲಿಸಿದರೆ ಭಾರತ ಬಲಿಷ್ಠ ತಂಡ. ಹೀಗಾಗಿ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಬಹುತೇಕ ನಿಶ್ಚಿತ. ಆದರೆ, ಕ್ರಿಕೆಟ್ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದು ಇತಿಹಾಸವೇ ಹೇಳುತ್ತದೆ.
ಇದನ್ನೂ ಓದಿ : Asia Cup 2023 : ಭಾರತ- ನೇಪಾಳ ಪಂದ್ಯ ನಡೆಯುವ ಪಲ್ಲೆಕೆಲೆ ಪಿಚ್ ಹೇಗಿದೆ?
ಮಳೆ ಸಾಧ್ಯತೆ ಇದೆಯೇ?
ಸೋಮವಾರವೂ ಕ್ಯಾಂಡಿಯಲ್ಲಿ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿ ಹೇಳಿದೆ. ಹೀಗಾಗಿ ಮಳೆ ಖಚಿತ. ಆದರೆ, ಮಳೆ ಬಿಡುವು ಕೊಟ್ಟರೆ ಪಂದ್ಯ ನಡೆಯುವುದಕ್ಕೆ ಅವಕಾಶವಾಗಬಹುದು. ಸಂಜೆಯ ಹೊತ್ತಿಗೆ ಆರಂಭವಾಗಲಿರುವ ಮಳೆ ರಾತ್ರಿಯ ವೇಳೆಗೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಪಲ್ಲೆಕೆಲೆ ಪಿಚ್ ಹೇಗಿದೆ?
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಕೋರ್ ದಾಖಲಿಸುತ್ತಿವೆ. ಕಳೆದ ಎರಡು ವರ್ಷಗಳಲ್ಲಿ 300 ಕ್ಕೂ ಹೆಚ್ಚು ರನ್ಗಳನ್ನು ನಿಯಮಿತವಾಗಿ ದಾಖಲಿಸುತ್ತಿವೆ. ಹಿಂದಿನ ಎರಡು ಪಂದ್ಯಗಳನ್ನು ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಗೆದ್ದಿವೆ. ಆದಾಗ್ಯೂ, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಭಾರಿ ಮೊತ್ತವನ್ನು ದಾಖಲಿಸುವ ಮೂಲಕ ಎದುರಾಳಿಯನ್ನು ಒತ್ತಡಕ್ಕೆ ಸಿಲುಕಿಸುವ ಸಾಧ್ಯತೆಯೇ ಹೆಚ್ಚು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ನೇಪಾಳ : ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ಕೀಪರ್), ರೋಹಿತ್ ಪೌದೆಲ್ (ನಾಯ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಮಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್ಬನ್ಶಿ
ಲೈವ್ ಸ್ಟ್ರೀಮಿಂಗ್ ವಿವರಗಳು
ಪಂದ್ಯದ ಸಮಯ: ಮಧ್ಯಾಹ್ನ 3:00 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
ಗೆಲುವಿನ ಸಾಧ್ಯತೆ ಏನು?
ಉತ್ತಮ ಗುಣಮಟ್ಟದ ತಂಡಗಳ ವಿರುದ್ಧ ಆಡುವಲ್ಲಿ ನೇಪಾಳದ ಅನುಭವದ ಕೊರತೆಯಿಂದಾಗಿ ಭಾರತವು ಪಂದ್ಯವನ್ನು ಆರಾಮವಾಗಿ ಗೆಲ್ಲುವ ಸಾಧ್ಯತೆಯಿದೆ.