ಬೆಂಗಳೂರು: ಭಾರತ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಹಾಲಿ ವಿಶ್ವ ಕಪ್ನ ಲೀಗ್ ಹಂತದ ಕೊನೇ ಪಂದ್ಯ ನಡೆಯಲಿದೆ. ಎಂಟು ಪಂದ್ಯಗಳ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಭಾರತ ತಂಡಕ್ಕೂ ಇದು ಕೊನೇ ಹಣಾಹಣಿಯಾಗಿರುವ ಕಾರಣ ಭರ್ಜರಿ ದಾಖಲೆಗಳನ್ನು ನಿರೀಕ್ಷೆ ಮಾಡಬಹುದು. ಭಾರತ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅವಿಸ್ಮರಣೀಯ ಪ್ರದರ್ಶನ ನೀಡಿಕೊಂಡು ಬಂದಿರುವ ಕಾರಣ ಮತ್ತೊಂದು ಬೃಹತ್ ವಿಜಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಇವೆಲ್ಲದರ ನಡುವೆ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಶತಕ ಬಾರಿಸಲಿದ್ದಾರೆ. ಈ ಮೂಲಕ 50 ಶತಕಗಳೊಂದಿಗೆ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶತಕಗಳ ದಾಖಲೆಯನ್ನು (49 ಶತಕ) ಮುರಿಯಲಿದ್ದಾರೆ ಎಂಬ ವಿಶ್ವಾಸ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳದ್ದು.
ವಿರಾಟ್ ಕೊಹ್ಲಿ ಹಿಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು(49) ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದರು. 35 ವರ್ಷದ ಆಟಗಾರನಿಗೆ 50ನೇ ಶತಕದೊಂದಿಗೆ ಮಾಸ್ಟರ್ ಬ್ಲಾಸ್ಟರ್ ಅವರನ್ನು ಮೀರಿಸುವ ಅವಕಾಶವಿದೆ. ವಿರಾಟ್ ತಮ್ಮ ಐಪಿಎಲ್ ತವರು ಮೈದಾನವಾದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದ್ದಾರೆ. ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಸುವರ್ಣಾವಕಾಶವಿದೆ.
ಬೆಂಗಳೂರು ತಮಗೆ ಎರಡನೇ ತವರು ಎಂದು ವಿರಾಟ್ ಕೊಹ್ಲಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಪ್ರೇಕ್ಷಕದ ದೊಡ್ಡ ಬೆಂಬಲ ವಿರಾಟ್ ಕೊಹ್ಲಿಗೆ ದೊರೆಯಲಿದೆ. ಹೀಗಾಗಿ ಅಭಿಮಾನಿಗಳ ನಿರೀಕ್ಷೆ ಹಾಗೂ ಕ್ರಿಕೆಟ್ ಮೈದಾನದ ಅನುಕೂಲಗಳನ್ನು ಬಳಸಿಕೊಂಡು ಶತಕ ಬಾರಿಸಬಹುದು ಎಂದು ಹೇಳಲಾಗಿದೆ. ಕೊಹ್ಲಿ 2023ರ ಆವೃತ್ತಿಯ ಐಪಿಎಲ್ನಲ್ಲಿ ಗುಜರಾತ್ ತಂಡದ ವಿರುದ್ಧ ಶತಕ ಬಾರಿಸಿದ್ದರು. ಹೀಗಾಗಿ ಮತ್ತೊಂದು ಬಾರಿ ಇದೇ ಮೈದಾನದಲ್ಲಿ ವಿಜೃಂಭಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಗರಿಷ್ಠ ರನ್ಗಳ ದಾಖಲೆಗೆ ಅವಕಾಶ
ವಿರಾಟ್ ಕೊಹ್ಲಿ ಇಬ್ಬರೂ ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕೊಹ್ಲಿ ಎಂಟು ಪಂದ್ಯಗಳಲ್ಲಿ 543 ರನ್ ಗಳಿಸಿದ್ದಾರೆ. ಅವರು ಈಗ ಹಾಲಿ ವಿಶ್ವ ಕಪ್ನಲ್ಲಿ ಗರಿಷ್ಠ ರನ್ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ. ನ್ಯೂಜಿಲ್ಯಾಂಡ್ನ ರಚಿನ್ ರವೀಂದ್ರ (565) ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (591 ರನ್) ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಈ ಪಂದ್ಯದಲ್ಲಿ 49 ರನ್ಗಿಂತ ಹೆಚ್ಚು ಗಳಿಸಿದರೆ ವಿರಾಟ್ ಕೊಹ್ಲಿ ಮತ್ತೆ ಮೊದಲ ಸ್ಥಾನಕ್ಕ ಏರಲಿದ್ದಾರೆ.
ಈ ಸುದ್ದಿಯನ್ನು ಓದಿ : ICC World Cup 2023 : ಡಚ್ಚರನ್ನು ಸೋಲಿಸಿ ಅಜೇಯ ಸಾಧನೆ ಮಾಡುವುದೇ ರೋಹಿತ್ ಪಡೆ?
2 ಸಿಕ್ಸರ್ಗಳು ಬೇಕು
ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುವ ವಿಚಾರದಲ್ಲಿ ಹೆಚ್ಚು ಆಸಕ್ತರಲ್ಲ. ಅವರು ಫೋರ್ ಹಾಗೂ ವಿಕೆಟ್ಗಳ ನಡುವಿನ ಓಟದ ಮೂಲಕ ರನ್ ಕದಿಯುತ್ತಾರೆ. ಹೀಗಾಗಿ ಕೊಹ್ಲಿಯನ್ನು ತಡೆಯುವುದು ಎದುರಾಳಿ ನಾಯಕನಿಗೆ ಆತಂಕದ ಸಂಗತಿ. ಅವರಿಗೆ ಫೀಲ್ಡ್ ಸೆಟ್ ಮಾಡುವುದು ಕೂಡ ಕಷ್ಟ. ಆದಾಗ್ಯೂ ಅವರು ಏಕದಿನ ಮಾದರಿಯಲ್ಲಿ ಇದುವರೆಗೆ 148 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಒಂದು ವೇಳೆ ನೆದರ್ಲ್ಯಾಂಡ್ಸ್ ವಿರುದ್ಧ 2 ಸಿಕ್ಸರ್ಗಳನ್ನು ಹೊಡೆದರೆ ಅವರು 150 ಸಿಕ್ಸರ್ಗಳ ದಾಖಲೆಯನ್ನು ಮಾಡಲಿದ್ದಾರೆ. ಬೆಂಗಳೂರಿನ ಸಣ್ಣ ಗ್ರೌಂಡ್ನಲ್ಲಿ ಕೊಹ್ಲಿಗೆ ಇದು ಸಾಧ್ಯವಾಗಬಲ್ಲ ದಾಖಲೆಯಾಗಿದೆ.
And he's still got ☝️ game to go in the league stage, and hopefully ✌️more in the knockouts! 🤞👑#PlayBold #CWC23 #TeamIndia #ViratKohli pic.twitter.com/eVqOhPPXhX
— Royal Challengers Bangalore (@RCBTweets) November 11, 2023
ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಸ್ಥಾಪನೆಯಾಗಲಿರುವ ಕೆಲವೊಂದು ಸಾಧನೆಗಳು ಇಂತಿವೆ
- 12- ರೋಹಿತ್ ಶರ್ಮಾ (13988) ನಾಯಕನಾಗಿ ಎಲ್ಲಾ ಸ್ವರೂಪಗಳಲ್ಲಿ 14000 ರನ್ ಪೂರೈಸಲು 12 ರನ್ಗಳ ಅಗತ್ಯವಿದೆ.
- ಏಕದಿನ ಪಂದ್ಯಗಳಲ್ಲಿ 50 ಸಿಕ್ಸರ್ಗಳನ್ನು ಪೂರೈಸಲು ಶ್ರೇಯಸ್ ಅಯ್ಯರ್ (48) ಎರಡು ಸಿಕ್ಸರ್ಗಳ ಅಗತ್ಯವಿದೆ.
- ಜಸ್ಪ್ರೀತ್ ಬುಮ್ರಾಗೆ (346) ಎಲ್ಲಾ ಸ್ವರೂಪಗಳಲ್ಲಿ 350 ವಿಕೆಟ್ಗಳ ಸಾಧನೆ ಮಾಡಲು ನಾಲ್ಕು ವಿಕೆಟ್ಗಳ ಅಗತ್ಯವಿದೆ.
- ಏಕದಿನ ಕ್ರಿಕೆಟ್ನಲ್ಲಿ 200 ಬೌಂಡರಿಗಳನ್ನು ಪೂರೈಸಲು ರವೀಂದ್ರ ಜಡೇಜಾ (199) ಅವರಿಗೆ ಒಂದು ಬೌಂಡರಿ ಅಗತ್ಯವಿದೆ.
- ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ 100 ಸಿಕ್ಸರ್ಗಳಲ್ಲು ಪೂರೈಸಲು ರೋಹಿತ್ ಶರ್ಮಾ (96) ಇನ್ನೂ ನಾಲ್ಕು ಸಿಕ್ಸರ್ಗಳ ಅಗತ್ಯವಿದೆ.
- ಏಕದಿನ ಕ್ರಿಕೆಟ್ನಲ್ಲಿ ನಾಯಕನಾಗಿ 2000 ರನ್ ಪೂರೈಸಲು ರೋಹಿತ್ ಶರ್ಮಾ (1892) 108 ರನ್ಗಳ ಅಗತ್ಯವಿದೆ.