Site icon Vistara News

ಅದೃಷ್ಟ ಕೈಹಿಡಿದು, ಫೈನಲ್ ತಲುಪುವುದೇ ದಕ್ಷಿಣ ಆಫ್ರಿಕಾ? ಹೇಗಿದೆ ಸೆಮಿ ಇತಿಹಾಸ?

South Africa

ಬೆಂಗಳೂರು: ದಕ್ಷಿಣ ಆಫ್ರಿಕಾ ತಂಡ ಗುರುವಾರ ಕೋಲ್ಕೊತಾದ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್​ ಪಂದ್ಯವನ್ನಾಡಲು ಸಜ್ಜಾಗಿದೆ. ಒಟ್ಟು ನಾಲ್ಕು ಬಾರಿ ಸೆಮಿಫೈನಲ್ ಆಡಿರುವ ದಕ್ಷಿಣ ಆಫ್ರಿಕಾ ಒಮ್ಮೆಯೂ ಫೈನಲ್​ ಪ್ರವೇಶಿಸುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿಯಾದರೂ ಫೈನಲ್ ಟಿಕೆಟ್​ ಪಡೆದೀತೇ ಎನ್ನುವುದು ಗುರುವಾರ ನಿರ್ಧಾರವಾಗಲಿದೆ. ದಕ್ಷಿಣ ಆಫ್ರಿಕಾ ತಂಡದ ವಿಶ್ವಕಪ್​ ಹಿನ್ನೊಟ ಹೀಗಿದೆ.

ಡಕ್‌ವರ್ತ್‌-ಲೂಯಿಸ್‌ ನಿಯಮಕ್ಕೆ ಬಲಿಯಾದ ದಕ್ಷಿಣ ಆಫ್ರಿಕಾ

ಪ್ರಥಮ ಬಾರಿಗೆ ವಿಶ್ವಕಪ್‌ ಆಡಲಿಳಿದ ದಕ್ಷಿಣ ಆಫ್ರಿಕಾ ತಂಡ 1992ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸೆಮಿಫೈನಲ್​ ಪ್ರವೇಶ ಪಡೆಯಿತು. ಆ ಟೂರ್ನಿಯಲ್ಲಿ ಅತ್ಯಂತ ಬಲಿಷ್ಠವಾಗಿದ್ದ ಹರಿಣ ಪಡೆ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವೂ ಆಗಿತ್ತು. ಸಿಡ್ನಿಯಲ್ಲಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಹೋರಾಟಕ್ಕಿಳಿದಿದ್ದವು. ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 45 ಓವರ್‌ಗಳಲ್ಲಿ 6 ವಿಕೆಟಿಗೆ 256 ರನ್‌ ಮಾಡಿತ್ತು. ಅಮೋಘ ಚೇಸಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ ಗೆಲುವಿನ ಅಂಚಿಗೆ ಬಂದಿತ್ತು. 4 ವಿಕೆಟ್‌ ನೆರವಿನಿಂದ ಕೊನೆಯ 13 ಎಸೆತಗಳಲ್ಲಿ 22 ತೆಗೆಯುವ ಸುಲಭ ಸವಾಲು ಎದುರಿತ್ತು.

ಎಲ್ಲರಿಗೂ ಶಾಕ್‌!

ಇನ್ನೇನು ದಕ್ಷಿಣ ಆಫ್ರಿಕಾ ಗೆಲುವು ಕಾಣುತ್ತದೆ ಎನ್ನುವ ಹೊತ್ತಿಗೆ ಸರಿಯಾಗಿ ಮಳೆ ಸುರಿಯಿತು. ಪಂದ್ಯ ಸ್ಥಗಿತಗೊಂಡಿತು. ಆಗ ಯಾರಿಗೂ ಮಳೆ ನಿಯಮದ ತಿಳಿವಳಿಕೆ ಇರಲಿಲ್ಲ. ದಕ್ಷಿಣ ಆಫ್ರಿಕಾ ಇಲ್ಲಿಂದಲೇ ಆಟ ಮುಂದುವರಿಸಿ ಗೆದ್ದು ಬರುತ್ತದೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಸಂಭವಿಸಿದ್ದೇ ಬೇರೆ. ಸಿಡ್ನಿ ಅಂಗಳದ ದೈತ್ಯ ಸ್ಕೋರ್‌ಬೋರ್ಡ್​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಒಂದು ಎಸೆತದಿಂದ 22 ರನ್‌ ತೆಗೆಯುವ ಮರು ನಿಗದಿತ ಗುರಿಯನ್ನು ಬಿತ್ತರಿಸಿದಾಗ ಎಲ್ಲರಿಗೂ ಅಚ್ಚರಿ ಮೂಡಿತ್ತು.

ಇಂಗ್ಲೆಂಡ್‌ ತಂಡ ಬ್ಯಾಟಿಂಗ್​ ಇನ್ನಿಂಗ್ಸ್‌ ವೇಳೆ ಓವರ್‌ ಗತಿಯನ್ನು ಕಾಯ್ದುಕೊಳ್ಳದಿದ್ದುದು, ಮಳೆಯಿಂದ ಸಂಭವಿಸಿದ ನಷ್ಟವನ್ನೆಲ್ಲ ಪರಿಗಣಿಸಿ ನೂತನ ನಿಯಮದಂತೆ ಗುರಿಯನ್ನು ಮರು ನಿಗದಿಗೊಳಿಸಲಾಗಿತ್ತು. ನಾಟೌಟ್‌ ಬ್ಯಾಟ್ಸ್‌ಮನ್‌ಗಳಾಗಿದ್ದ ಬ್ರಿಯಾನ್‌ ಮೆಕ್‌ಮಿಲನ್‌ (21) ಮತ್ತು ಡೇವಿಡ್‌ ರಿಚರ್ಡ್‌ಸನ್‌ (13) ತೀವ್ರ ಹತಾಶೆಯಿಂದ ವಾಪಸ್‌ ಕ್ರೀಸಿಗೆ ಬರುತ್ತಿದ್ದ ದೃಶ್ಯಾವಳಿ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

2 ಬಾರಿ ಆಸೀಸ್ ವಿರುದ್ಧ ಸೋಲು

ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಮೂರನೇ ವಿಶ್ವಕಪ್​ ಸೆಮಿಫೈನಲ್​ ಇದಾಗಿದೆ. ಇದಕ್ಕೂ ಮುನ್ನ 1999ರಲ್ಲಿ ಮತ್ತು 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ ಪಂದ್ಯವನ್ನಾಡಿತ್ತು. ಆದರೆ ಎರಡೂ ಪಂದ್ಯಗಳಲ್ಲಿಯೂ ಸೋಲು ಕಂಡಿತ್ತು. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ 1999ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ 213ರನ್ ಬಾರಿಸಿತು. ಗುರು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 213ರನ್​ಗೆ ಆಲೌಟ್​ ಆಯಿತು. ಪಂದ್ಯ ಟೈಗೊಂಡಿತು. ಲೀಗ್​ ಹಂತದಲ್ಲಿ ಉತ್ತಮ ರನ್​ರೇಟ್​ ಕಾಯ್ದುಕೊಂಡಿದ್ದ ಆಸ್ಟ್ರೇಲಿಯಾ ನೇರವಾಗಿ ಫೈನಲ್​ ಪ್ರವೇಶಿಸಿತ್ತು. ಇಲ್ಲಿಯೂ ದಕ್ಷಿಣ ಆಫ್ರಿಕಾಗೆ ಅದೃಷ್ಟ ಕೈಕೊಟ್ಟಿತು.

ಇದನ್ನೂ ಓದಿ AUS vs SA: ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಣ ವಿಶ್ವಕಪ್​ ದಾಖಲೆ ಹೇಗಿದೆ?

2007ರಲ್ಲಿ ಮತ್ತೆ ಆಸೀಸ್​ ಎದುರಾಳಿ

2007ರ ವಿಶ್ವಕಪ್​ ಟೂರ್ನಿಯಲ್ಲಿ ಮತ್ತೆ ಆಸ್ಟ್ರೇಲಿಯಾ ತಂಡ ಸೆಮಿಯಲ್ಲಿ ಎದುರಾಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಹಿಂದಿನ ಸೆಮಿ ಸೋಲಿನ ಸೇಡು ತೀರಿಸಿಕೊಳ್ಳಬಹುದು ಎಂದು ಎಲ್ಲರು ನಿರೀಕ್ಷೆ ಮಾಡಿದ್ದರು. ಆದರೆ ಆಸೀಸ್​ ಈ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ ಜಾಕ್​ ಕಾಲಿಸ್​ ಮತ್ತು ಜಾಂಟಿ ರೋಡ್ಸ್ ಅವರ ಸಣ್ಣ ಮಟ್ಟದ ಬ್ಯಾಟಿಂಗ್​ ಹೋರಾಟದಿಂದ 149ಕ್ಕೆ ಆಲೌಟ್​ ಆಯಿತು. ಸುಲಭ ಮೊತ್ತವನ್ನು ಬೆನ್ನಟ್ಟಿದ ಆಸೀಸ್​ 3 ವಿಕೆಟ್​ಗೆ 150 ರನ್​ ಬಾರಿಸಿ ಫೈನಲ್​ ಪ್ರವೇಶ ಪಡೆಯಿತು.

ಮತ್ತೆ ಕಾಡಿದ ಮಳೆ

2015ರ ವಿಶ್ವಕಪ್​ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅತ್ಯಂತ ಬಲಿಷ್ಠ ಆಟಗಾರರನ್ನು ಒಳಗೊಂಡ ತಂಡವಾಗಿ ಕಾಣಿಸಿಕೊಂಡಿತ್ತು. ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡ ಎದುರಾಯಿತು. ಇಲ್ಲಿಯೂ ದಕ್ಷಿಣ ಆಫಿಕ್ರಾ ತಂಡಕ್ಕೆ ಮಳೆ ಕಂಟವಾಯಿತು. ಮಳೆಯಿಂದ ಈ ಪಂದ್ಯವನ್ನು ಡಕ್​ವರ್ತ್​ ನಿಯಮದ ಅನುಸಾರ 43 ಓವರ್​ಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ 5 ವಿಕೆಟ್​ಗೆ 281 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ ತಂಡ ಹಲವು ಜೀವದಾನ ಪಡೆದು 4 ವಿಕೆಟ್​ಗಳ ಗೆಲುವು ಸಾಧಿಸಿತು. ಸ್ಟಾರ್​ ಫೀಲ್ಡರ್​ಗಳಾಗಿದ್ದ ಡಿ ವಿಲಿಯರ್ಸ್​, ಡು ಪ್ಲೆಸಿಸ್​ ಹೀಗೆ ಹಲವು ಆಟಗಾರರು ಸುಲಭ ಕ್ಯಾಚ್​ ಮತ್ತು ರನೌಟ್​ ಎಡವಟ್ಟು ನಡೆಸಿದ ಪರಿಣಾಮ ತಂಡ ಸೋಲು ಕಂಡಿತು. ಡಿ ವಿಲಿಯರ್ಸ್​ ಸೇರಿ ಕೆಲ ಆಟಗಾರರು ಕಣ್ಣೀರು ಸುರಿಸುತ್ತಾ ಮೈದಾನ ತೊರೆದಿದ್ದರು.

Exit mobile version