Site icon Vistara News

IND vs AUS | ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಬೌಲಿಂಗ್ ವಿಭಾಗಕ್ಕೆ ಬಲ ಬರುವುದೇ?

ind vs aus

ಹೈದರಾಬಾದ್ : ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡದ ನಡುವೆ ಭಾನುವಾರ ಮೂರು ಪಂದ್ಯಗಳ ಏಕ ದಿನ ಸರಣಿಯ ಕೊನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಕೈ ವಶ ಮಾಡಿಕೊಳ್ಳುವುದು ಇತ್ತಂಡಗಳ ನಾಯಕರ ಯೋಜನೆ. ಅದರೆ, ಉಭಯ ತಂಡಗಳಿಗೆ ಬೌಲಿಂಗ್ ವಿಭಾಗದ ಅಸ್ಥಿತರತೆಯ ಚಿಂತೆ ಕಾಡುತ್ತಿದೆ. ಅದಲ್ಲೂ ಟೀಮ್ ಇಂಡಿಯಾಗೆ ಡೆತ್‌ ಓವರ್‌ ಬೌಲಿಂಗ್‌ನದ್ದೇ ಹೆಚ್ಚು ಚಿಂತೆ ಶುರುವಾಗಿದೆ. ಜಸ್‌ಪ್ರಿತ್‌ ಹಿಂದಿನ ಪಂದ್ಯದಲ್ಲಿ ಆಡುವ ೧೧ರ ಬಳಗಕ್ಕೆ ಪ್ರವೇಶ ಪಡೆದುಕೊಂಡಿದ್ದರೂ ಅಲ್ಲಿ ಅವರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯ ಪ್ರದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಅವರು ಪರೀಕ್ಷೆಗೆ ಒಳಪಡಲಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್‌ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ಆಯೋಜನೆಗೊಂಡಿದ್ದು, ಈ ಹಣಾಹಣಿ ಗೆದ್ದವರು ಸರಣಿಗೆ ಒಡೆಯರಾಗಲಿದ್ದಾರೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದ್ದರೆ , ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ ಗೆದ್ದಿತ್ತು. ಹೀಗಾಗಿ ಈ ಪಂದ್ಯ ಹೆಚ್ಚು ರೋಚಕತೆಯಿಂದ ಕೂಡಿರಲಿದೆ.

ಬ್ಯಾಟಿಂಗ್‌ ವಿಭಾಗ ಸೇಫ್‌

ಭಾರತದ ಬ್ಯಾಟಿಂಗ್ ವಿಭಾಗ ಕಳೆದರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಲ್ಲಿ ಕೆ. ಎಲ್‌ ರಾಹುಲ್‌ ಹಾಗೂ ಹಾರ್ದಿಕ್ ಪಾಂಡ್ಯ ಅರ್ಧ ಶತಕ ಬಾರಿಸಿದ್ದರೆ, ಎರಡನೇ ಪಂದ್ಯದಲ್ಲಿ ರೋಹಿತ್‌ ಶರ್ಮ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಉತ್ತಮ ರೀತಿಯಲ್ಲಿ ಬ್ಯಾಟ್‌ ಮಾಡಿದರೆ ಭಾರತ ತಂಡಕ್ಕೆ ಯಾವುದೇ ಚಿಂತೆಯಿಲ್ಲ. ದಿನೇಶ್‌ ಕಾರ್ತಿಕ್‌ ಹಿಂದಿನ ಪಂದ್ಯದಲ್ಲಿ ತಾವು ಫಿನಿಶರ್‌ ಜವಾಭ್ದಾರಿ ಹೊರುವುದಾಗಿ ಬ್ಯಾಟಿಂಗ್‌ ಮೂಲಕ ಸೂಚನೆ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ತಂಡವನೂ ಉತ್ತಮ ರೀತಿಯಲ್ಲಿ ಬ್ಯಾಟ್‌ ಮಾಡುತ್ತಿದೆ. ಆರೋನ್ ಫಿಂಚ್, ಕ್ಯಾಮೆರಾನ್ ಗ್ರೀನ್‌, ಸ್ಟೀವ್ ಸ್ಮಿತ್‌ ಹಾಗೂ ಮ್ಯಾಥ್ಯೂ ವೇಡ್‌ ಉತ್ತಮ ರೀತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ.

ಬೌಲಿಂಗ್‌ ಸುಧಾರಣೆ ಅಗತ್ಯ

ಭಾರತ ತಂಡದ ಬೌಲಿಂಗ್‌ ವಿಭಾಗದ ಬಗ್ಗೆಯೇ ಎಲ್ಲಿಗೂ ಚಿಂತೆ. ವಿಶ್ವ ಕಪ್‌ಗೆ ಆಯ್ಕೆಯಾಗಿರುವ ಬೌಲರ್‌ಗಳು ಈ ಪಂದ್ಯದಲ್ಲಿ ತಮ್ಮ ಕರಾಮತ್ತು ತೋರಿಸುತ್ತಿಲ್ಲ. ಪ್ರಮುಖವಾಗಿ ಹರ್ಷಲ್‌ ಪಟೇಲ್‌ ಹಾಗೂ ಯಜ್ವೇಂದ್ರ ಚಹಲ್‌ ವಿಕೆಟ್‌ ಪಡೆಯುತ್ತಿಲ್ಲ. ಭುವನೇಶ್ವರ್‌ ಕುಮಾರ್‌ ಅವರ ವೈಫಲ್ಯ ಮುಂದುವರಿದಿದೆ. ಆದರೆ, ಅಕ್ಷರ್‌ ಪಟೇಲ್‌ ಜಡೇಜಾ ಅವರ ಸ್ಥಾನ ತುಂಬುತ್ತಿದ್ದಾರೆ.

ಪಿಚ್‌ ಹೇಗಿದೆ?

ಹೈದರಾಬಾದ್ ಪಿಚ್‌ ಆರಂಭದಲ್ಲಿ ಬ್ಯಾಟಿಂಗ್‌ಗೆ ನೆರವಾಗಿ ಬಳಿಕ ನಿಧಾನವಾಗುತ್ತದೆ. ಹೀಗಾಗಿ ಮೊದಲು ಬ್ಯಾಟ್‌ಮಾಡಿದ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚು. ಟಾಸ್‌ ಗೆದ್ದವರು ಬ್ಯಾಟ್‌ ಮಾಡಲು ಮುಂದಾಗುತ್ತದೆ. ಮಳೆಯ ಸಾಧ್ಯತೆ ಬಹುತೇಕ ಕಡಿಮೆ.

ಪಂದ್ಯದ ವಿವರ:

ತಾಣ: ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ ಹೈದರಾಬಾದ್

ಸಮಯ: ರಾತ್ರಿ ೭ ಗಂಟೆಯಿಂದ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್ವರ್ಕ್‌ ಹಾಗೂ ಡಿಸ್ನಿ ಹಾಟ್‌ ಸ್ಟಾರ್‌

ಸಂಭಾವ್ಯ ತಂಡ

ಭಾರತ:  ರೋಹಿತ್ ಶರ್ಮ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜ್ವೇಂದ್ರ ಚಹಲ್‌, ಜಸ್‌ಪ್ರಿತ್‌ ಬುಮ್ರಾ.

ಆಸ್ಟ್ರೇಲಿಯಾ : ಆರೋನ್ ಫಿಂಚ್, ಕೆಮೆರಾನ್‌ ಗ್ರೀನ್‌, ಸ್ಟ್ರೀವ್ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಶ್‌ ಇಂಗ್ಲಿಸ್‌, ಟಿಮ್‌ ಡೇವಿಡ್‌, ಮ್ಯಾಥ್ಯೂ ವೇಡ್‌, ಪ್ಯಾಟ್‌ ಕಮಿನ್ಸ್, ನಥಾನ್‌ ಎಲ್ಲಿಸ್‌, ಆಡಂ ಜಂಪಾ, ಜೋಶ್‌ ಹೇಜಲ್‌ವುಡ್‌.

ಇದನ್ನೂ ಓದಿ | Rohit Sharma | ಟಿ20 ಸಿಕ್ಸರ್‌ಗಳ ವಿಶ್ವ ದಾಖಲೆ ಸೃಷ್ಟಿಸಿದ ರೋಹಿತ್‌ ಶರ್ಮ

Exit mobile version